ಇದೇ ಏ. 1ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳು ರಸ್ತೆಯಿಂದ ಗುಜರಿಗೆ: ಗಡ್ಕರಿ
ಹದಿನೈದು ವರ್ಷಕ್ಕಿಂತ ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನ(Government Vehicle)ಗಳನ್ನು ಗುಜರಿಗೆ ಹಾಕುವ ಕುರಿತು ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ಸ್ವತಃ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಾರಿಗೆ ನಿಗಮಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಒಡೆತನದ 9 ಲಕ್ಷಕ್ಕೂ ಹೆಚ್ಚು 15 ವರ್ಷಕ್ಕಿಂತ ಹಳೆಯದಾದ ವಾಹನಗಳು (Government Vehicle) ಇದೇ ಏಪ್ರಿಲ್ 1 ರಿಂದ ರಸ್ತೆಯಿಂದ ಹೊರಗುಳಿಯಲಿದ್ದು, ಅವುಗಳ ಬದಲಿಗೆ ಹೊಸ ವಾಹನಗಳು ರಸ್ತೆಗಿಳಿಯಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
ಇಂದು(ಜನವರಿ 30) ಉದ್ಯಮ ಸಂಸ್ಥೆ ಎಫ್‌ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿತಿನ್ ಗಡ್ಕರಿ, ಎಥೆನಾಲ್, ಮೆಥನಾಲ್, ಬಯೋ-ಸಿಎನ್‌ಜಿ, ಬಯೋ-ಎಲ್‌ಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸುಲಭಗೊಳಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಇದನ್ನೂ ಓದಿ: ಗುಜರಿ ನೀತಿ ಅನುಮೋದನೆಗೆ ಸರ್ಕಾರ ತೀರ್ಮಾನ: ಇನ್ಮುಂದೆ ಬೆಂಗಳೂರಲ್ಲಿ ಹಳೆ ವಾಹನಗಳ ಸಂಚಾರಕ್ಕೆ ಬ್ರೇಕ್
15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಒಂಬತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ನಾವು ಈಗ ಅನುಮೋದಿಸಿದ್ದೇವೆ ಮತ್ತು ಮಾಲಿನ್ಯಕಾರಕವಲ್ಲದ ಬಸ್‌ಗಳು ಮತ್ತು ಕಾರುಗಳು ರಸ್ತೆಗಿಳಿಯುತ್ತವೆ. ಪರ್ಯಾಯ ಇಂಧನಗಳೊಂದಿಗೆ ಹೊಸ ವಾಹನಗಳ ಮೂಲಕ ಅವುಗಳನ್ನು ಬದಲಾಯಿಸುತ್ತವೆ.ಇದು ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಏಪ್ರಿಲ್ 1 ರಿಂದ, 15 ವರ್ಷಕ್ಕಿಂತ ಹಳೆಯದಾದ ಸಾರಿಗೆ ನಿಗಮಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಒಡೆತನದ ಬಸ್‌ಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಡೆತನದ ಎಲ್ಲಾ ವಾಹನಗಳನ್ನು ನೋಂದಣಿ ರದ್ದುಗೊಳಿಸಲಾಗುತ್ತದೆ. ದೇಶದ ರಕ್ಷಣೆಗಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ನಿರ್ವಹಣೆಗಾಗಿ ಕಾರ್ಯಾಚರಣೆ ಉದ್ದೇಶಗಳಿಗಾಗಿ ಬಳಸುವ ವಿಶೇಷ ಉದ್ದೇಶದ ವಾಹನಗಳಿಗೆ (ಶಸ್ತ್ರಸಜ್ಜಿತ ಮತ್ತು ಇತರ ವಿಶೇಷ ವಾಹನಗಳಿಗೆ) ನಿಯಮ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2021-22ರ ಕೇಂದ್ರ ಬಜೆಟ್‌ನಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪ ಮಾಡಿದ್ದರು. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ಕಮರ್ಷಿಯಲ್ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದರು.ಇನ್ನು ಏಪ್ರಿಲ್ 1, 2022 ರಿಂದ ಜಾರಿಗೆ ಬರುವ ಹೊಸ ನೀತಿಯ ಅಡಿಯಲ್ಲಿ, ಹಳೆಯ ವಾಹನಗಳನ್ನು ಬ್ಯಾನ್ ಮಾಡಿದ ನಂತರ ಖರೀದಿಸಿದ ಹೊಸ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇಕಡಾ 25 ರಷ್ಟು ತೆರಿಗೆ ರಿಯಾಯಿತಿಯನ್ನು ನೀಡುತ್ತವೆ ಎಂದು ಕೇಂದ್ರ ಹೇಳಿದೆ.