ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ; ಯೋಜನೆಗಳು, ಅಸಮಾಧಾನ, ಸೋನಿಯಾ ಗಾಂಧಿ ಪತ್ರದ ಬಗ್ಗೆ ಚರ್ಚೆ

|

Updated on: Apr 03, 2021 | 6:15 PM

ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅನುದಾನ ಬಿಡುಗಡೆ ಮಾಡುವಾಗ ತಾರತಮ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಸರಿಯಾಗಿ ನಿಧಿ ಪೂರೈಕೆ ಆಗುತ್ತಿಲ್ಲ ಎಂದು ಕೆಲ ಕಾಂಗ್ರೆಸ್​ ಮುಖಂಡರು, ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ; ಯೋಜನೆಗಳು, ಅಸಮಾಧಾನ, ಸೋನಿಯಾ ಗಾಂಧಿ ಪತ್ರದ ಬಗ್ಗೆ ಚರ್ಚೆ
ಉದ್ಧವ್​ ಠಾಕ್ರೆ
Follow us on

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರ ನಿಯೋಗವೊಂದು ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿ, 2019ರಲ್ಲಿ ಶಿವಸೇನೆ ನಾಯಕತ್ವದ ಮಹಾ ವಿಕಾಸ್ ಅಗಾಡಿ ಸರ್ಕಾರ ರಚನೆಯಾಗುವಾಗ ಅನುಷ್ಠಾನಕ್ಕೆ ತರಲಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮರುಪರಿಶೀಲನೆ ಮಾಡುವಂತೆ ಹೇಳಿತು. ಅಲ್ಲದೆ, ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಕೊವಿಡ್​-19 ನಿರ್ವಹಣೆಯ ಬಗ್ಗೆ ಚರ್ಚಿಸಿದರು. ಈ ನಿಯೋಗದ ನೇತೃತ್ವವನ್ನು ಆಲ್​ ಇಂಡಿಯಾ ಕಾಂಗ್ರೆಸ್​ ಸಮಿತಿ ಕಾರ್ಯದರ್ಶಿ ಎಚ್​.ಕೆ.ಪಾಟೀಲ್​ ವಹಿಸಿದ್ದರು ಎಂದು ಕಂದಾಯ ಸಚಿವ, ಕಾಂಗ್ರೆಸ್​ನ ಹಿರಿಯ ಮುಖಂಡ ಬಾಳಾಸಾಹೇಬ್​ ಥೋರಟ್​ ಹೇಳಿದ್ದಾರೆ.

ಎಲ್ಲ ನಿರ್ಧಾರಗಳನ್ನೂ ಮಹಾ ವಿಕಾಸ್​ ಅಗಾಡಿಯ ಘಟಕಗಳು ಒಗ್ಗಟ್ಟಾಗಿ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಈಗ ಕೊರೊನಾ ತಾಂಡವ ಆಡುತ್ತಿದೆ. ಅದರೊಂದಿಗೆ ಮುಂಬೈ ಪೊಲೀಸ್​ ಮಾಜಿ ಮುಖ್ಯಸ್ಥ ಪರಮ್​ ಬೀರ್ ಸಿಂಗ್, ಮಹಾರಾಷ್ಟ್ರದ ಗೃಹ ಸಚಿವ ಎನ್​ಸಿಪಿಯ ಅನಿಲ್ ದೇಶ್​ಮುಖ್​ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಹೊರೆಸಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇದನ್ನೆಲ್ಲ ಚರ್ಚಿಸುವ ಸಲುವಾಗಿ ಇಂದು ಸಿಎಂ ಭೇಟಿ ಮಾಡಿದ್ದೆವು ಎಂದು ಬಾಳಾಸಾಹೇಬ್​ ಥೋರಟ್​ ತಿಳಿಸಿದ್ದಾರೆ.

ಇನ್ನು ಎಐಸಿಸಿ ಕಾರ್ಯದರ್ಶಿ ಎಚ್​.ಕೆ.ಪಾಟೀಲ್ ಅವರು ಇದೇ ಮೊದಲ ಬಾರಿಗೆ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿದ್ದಾರೆ. ಸಿಎಂ ನಿವಾಸದಲ್ಲಿ ಸುಮಾರು 1 ತಾಸು, ಸೌಹಾರ್ದಯುತವಾಗಿ ಸಭೆ ನಡೆಯಿತು ಎಂದು ಹೇಳಿದರು. ಮಹಾ ವಿಕಾಸ್ ಅಗಾಡಿ ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆಯಿತು. ಹಾಗಾಗಿ, ಸರ್ಕಾರ ರಚನೆ ಆಗುವ ಸಂದರ್ಭದಲ್ಲಿ ರೂಪಿಸಲಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮರುಪರಿಶೀಲನೆ ಆಗುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಬುಡಕಟ್ಟು ಜನಾಂಗದ ಬಡಜನರ ಕಲ್ಯಾಣಕ್ಕಾಗಿ ಬಜೆಟ್​​ನ್ನು ತಡೆರಹಿತವಾಗಿ ಮೀಸಲಿಡುವ ಬಗ್ಗೆ ಸೋನಿಯಾಗಾಂಧಿಯವರು ಈ ಹಿಂದೆ ಬರೆದಿದ್ದ ಪತ್ರದ ಬಗ್ಗೆಯೂ ಸಿಎಂಗೆ ಈಗ ಮತ್ತೊಮ್ಮೆ ನೆನಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ತಾರತಮ್ಯದ ಬಗ್ಗೆಯೂ ಚರ್ಚೆ
ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅನುದಾನ ಬಿಡುಗಡೆ ಮಾಡುವಾಗ ತಾರತಮ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಸರಿಯಾಗಿ ನಿಧಿ ಪೂರೈಕೆ ಆಗುತ್ತಿಲ್ಲ ಎಂದು ಕೆಲ ಕಾಂಗ್ರೆಸ್​ ಮುಖಂಡರು, ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅದರ ಬಗ್ಗೆಯೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಚರ್ಚಿಸಿದ್ದೇವೆ ಎಂದು ಬಾಳಾಸಾಹೇಬ್​ ಥೋರಟ್​ ವಿವರಿಸಿದರು.

ಇದನ್ನೂ ಓದಿ: ಗೆಳೆಯ ಎನ್ನುತ್ತಲೇ ಚಂದ್ರಚೂಡ್​ಗೆ ನಂಬಿಕೆ ದ್ರೋಹ ಬಗೆದ ಸಂಬರಗಿ; ಇಲ್ಲಿದೆ ವಿಡಿಯೋ ಸಾಕ್ಷಿ

ಮಹಾರಾಷ್ಟ್ರದಲ್ಲಿ 1ರಿಂದ 8ನೆ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್