ಕಳೆದ ಮೂರ್ನಾಲ್ಕು ದಿನಗಳಿಂದ ಬಿಹಾರ ಭರ್ಜರಿ ಸುದ್ದಿಯಾಗುತ್ತಿದೆ. ಯಾರ್ಯಾರದ್ದೋ ಬ್ಯಾಂಕ್ ಅಕೌಂಟ್ಗಳಿಗೆ ಏಕಾಏಕಿ ಬರುತ್ತಿರುವ ಕೋಟ್ಯಂತರ ರೂಪಾಯಿ ಹಣವೇ ಇದಕ್ಕೆ ಕಾರಣ. ಎರಡು ದಿನಗಳ ಹಿಂದೆ ಖಗಾರಿಯಾ ಎಂಬಲ್ಲಿ ರಂಜಿತ್ ಎಂಬುವರ ಅಕೌಂಟ್ಗೆ 5.5 ಲಕ್ಷ ರೂಪಾಯಿ ಬಂದಿತ್ತು. ಅದು ದಕ್ಷಿಣ ಗ್ರಾಮೀಣ ಬ್ಯಾಂಕ್ನಲ್ಲಾದ ತಾಂತ್ರಿಕ ದೋಷ ಎಂದು ಹೇಳಲಾಗಿತ್ತು. ನಿನ್ನೆ ಇಬ್ಬರು ಶಾಲೆಗೆ ಹೋಗುವ ಬಾಲಕರ ಖಾತೆಗೆ ಕೋಟ್ಯಂತರ ರೂಪಾಯಿ ಜಮಾ ಆಗಿತ್ತು. ಕತಿಹಾರ ಜಿಲ್ಲೆಯ ಪಾಸ್ಟಿಯಾ ಗ್ರಾಮದ ಬಾಲಕ ಅಸಿತ್ ಕುಮಾರ್ ಖಾತೆಗೆ 900 ಕೋಟಿ ರೂಪಾಯಿ ಬಂದಿದ್ದರೆ, ಗುರುಚಂದ್ರ ವಿಶ್ವಾಸ್ ಎಂಬುವನ ಖಾತೆಗೆ 60 ಕೋಟಿ ರೂ.ವರ್ಗಾವಣೆಯಾಗಿತ್ತು. ಇವರಿಬ್ಬರೂ ಉತ್ತರ ಗ್ರಾಮೀಣ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರು.
ಇಂದು ಬಿಹಾರದಿಂದ ಹೀಗಿದ್ದೇ ಇನ್ನೊಂದು ವರದಿಯಾಗಿದೆ. ಬಡ ರೈತನ ಖಾತೆಗೆ 52 ಕೋಟಿ ರೂಪಾಯಿ ಜಮಾ ಆಗಿದೆ. ಈ ರೈತನ ಪಿಂಚಣಿ ಖಾತೆಗೆ ಬರೋಬ್ಬರಿ 52 ಕೋಟಿ ರೂಪಾಯಿ ಬಂದಿದ್ದು, ಅದರಲ್ಲಿ ಸ್ವಲ್ಪವಾದರೂ ಹಾಗೇ ಉಳಿಸಿ, ನನ್ನ ಜೀವನಕ್ಕೆ ದಿಕ್ಕಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಅಂದಹಾಗೇ ಈ ಬಾರಿ ಹೀಗೆ ಅನುಭವ ಆಗಿದ್ದು ರಾಮ್ಬಹದ್ದೂರ್ ಶಾ ಎಂಬುವರಿಗೆ. ರಾಮ್ ಬಹದ್ದೂರ್ ಶಾ ತಮ್ಮ ಪಿಂಚಣಿಯ ಬಗ್ಗೆ ವಿಚಾರಿಸಲು ಸಮೀಪದ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹೋಗಿ ಆಧಾರ್ ಕಾರ್ಡ್ ನೀಡಿ, ತಮ್ಮ ಹೆಬ್ಬೆರಳನ್ನು ಪಂಚ್ ಮಾಡಿ ದೃಢೀಕರಣ ಮಾಡಿದ ಬಳಿಕ ಅಕೌಂಟ್ನಲ್ಲಿರು ಹಣದ ಮೊತ್ತ ಹೇಳಲಾಯಿತು. ಆ ಮೊತ್ತವನ್ನು ನೋಡಿ ಸಿಎಸ್ಪಿ ಅಧಿಕಾರಿ ಮತ್ತು ರಾಮ್ಬಹದ್ದೂರ್ ಶಾ ಇಬ್ಬರಿಗೂ ಸಿಕ್ಕಾಪಟೆ ಶಾಕ್ ಆಗಿದೆ. ಈ ಹಣ ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ ಎಂದು ರಾಮ್ ಬಹದ್ದೂರ್ ಶಾ ತಿಳಿಸಿದ್ದಾರೆ. ನಾನು ಕೃಷಿ ಮಾಡುತ್ತಿದ್ದೇನೆ. ಇದೀಗ ಇಷ್ಟು ಪ್ರಮಾಣದಲ್ಲಿ ಬಂದಿರುವ ಹಣದಲ್ಲಿ ಸ್ವಲ್ಪವನ್ನಾದರೂ ಹಾಗೆಯೇ ಉಳಿಸುವಂತೆ ಸರ್ಕಾರದ ಬಳಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ರಾಮ್ ಬಹದ್ದೂರ್ ಶಾ ಪುತ್ರ ಸುಜಿತ್ ಕುಮಾರ್ ಗುಪ್ತಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಆತಂಕವೂ ಆಗುತ್ತಿದೆ. ಆದರೆ ಸ್ವಲ್ಪವಾದರೂ ಉಳಿಸಿದರೆ ನಮಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಕತ್ರಾ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮನೋಜ್ ಪಂಡೇರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನಿನ್ನೆ ಶಾಲಾ ಮಕ್ಕಳ ಅಕೌಂಟ್ಗೆ ಅಷ್ಟು ಹಣ ಹೇಗೆ ಬಂತು ಎಂಬುದನ್ನೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಕಲಬುರಗಿ ಪಾಲಿಕೆ ಚುನಾವಣೆ ವಿಚಾರ: ನಾವು ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ- ಹೆಚ್ಡಿ ದೇವೇಗೌಡ
ಎಮ್ ಜಿ ಆಸ್ಟರ್ ಎಸ್ಯುವಿಯ ಬುಕಿಂಗ್ ಆರಂಭವಾಗಿದ್ದು,ಕಾರು ಅಕ್ಟೋಬರ್ನಲ್ಲಿ ರಸ್ತೆಗಿಳಿಯಲಿದೆ!