ತೆಲಂಗಾಣ: ಜಲಾವೃತವಾದ ರಸ್ತೆಯಲ್ಲಿ ಅರ್ಧಕ್ಕೆ ಮುಳುಗಿದ ಶಾಲಾ ಬಸ್; ಬಸ್ಸಲ್ಲಿದ್ದ 30 ಮಕ್ಕಳ ರಕ್ಷಣೆ

Telangana ಮಾಧ್ಯಮಗಳ ವರದಿ ಪ್ರಕಾರ ಈ ಬಸ್ಸಲ್ಲಿ 30 ವಿದ್ಯಾರ್ಥಿಗಳಿದ್ದರು. ಬಸ್ಸಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದು, ನಂತರ ಆ ಬಸ್ಸನ್ನು ಅಲ್ಲಿಂದ ಮೇಲೆತ್ತಲಾಗಿದೆ.

ತೆಲಂಗಾಣ: ಜಲಾವೃತವಾದ ರಸ್ತೆಯಲ್ಲಿ ಅರ್ಧಕ್ಕೆ ಮುಳುಗಿದ ಶಾಲಾ ಬಸ್; ಬಸ್ಸಲ್ಲಿದ್ದ 30 ಮಕ್ಕಳ ರಕ್ಷಣೆ
ನೀರಲ್ಲಿ ಮುಳುಗಿದ ಬಸ್
Updated By: ರಶ್ಮಿ ಕಲ್ಲಕಟ್ಟ

Updated on: Jul 08, 2022 | 3:08 PM

ತೆಲಂಗಾಣದ (Telangana) ಮೆಹಬೂಬಾನಗರದಲ್ಲಿ (Mahbubnagar )ಶುಕ್ರವಾರ ಜಲಾವೃತವಾದ ರಸ್ತೆಯಲ್ಲಿ ಶಾಲಾ ಬಸ್ಸೊಂದು ಅರ್ಧಕ್ಕೆ ಮುಳುಗಿದೆ. ಮಾಧ್ಯಮಗಳ ವರದಿ ಪ್ರಕಾರ ಈ ಬಸ್ಸಲ್ಲಿ 30 ವಿದ್ಯಾರ್ಥಿಗಳಿದ್ದರು. ಬಸ್ಸಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದು, ನಂತರ ಆ ಬಸ್ಸನ್ನು ಅಲ್ಲಿಂದ ಮೇಲೆತ್ತಲಾಗಿದೆ. ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು ಜುಲೈ 8 ಮತ್ತು 9ಕ್ಕೆ ಇಲ್ಲಿನ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದೀಚೆಗೆ ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಶುಕ್ರವಾರ   ಬೆಳಗ್ಗೆ 8.30ರವರೆಗೆ ಆತ್ಮಕುರ್, ಸೂರ್ಯಪೇಟ್ ನಲ್ಲಿ 190.4 ಮಿಮಿ ಮಳೆಯಾಗಿದೆ. ಅದೇ ವೇಳೆ  ಖಾನಾಪುರ್ ನಲ್ಲಿ 162 ಮಿಮಿ, ಖಮ್ಮಂನ  ನಗುಲಾ ವಚಾದಲ್ಲಿ 154.5 ಮಿಮಿ ಮಳೆಯಾಗಿದೆ

ಸೂರ್ಯಪೇಟ್, ಖಮ್ಮಂ, ಭದ್ರಾದ್ರಿ ಕೊತಗುಡೆಂ ಮತ್ತು ನಲ್ಗೊಂಡಾದಲ್ಲಿ 10 ಮಿಮಿಗಿಂತಲೂ ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ ಶುಕ್ರುವಾರ ಬೆಳಗ್ಗೆ ಮಳೆಯ ಪ್ರಮಾಣ 21.8 ಮಿಮಿ ಆಗಿದೆ. ಸಾಮಾನ್ಯವಾಗಿ  ಜುಲೈ ತಿಂಗಳಲ್ಲಿ ಇಲ್ಲಿ 244.4ಮಿಮೀ ಮಳೆಯಾಗುತ್ತದೆ. ನೈಋತ್ಯ ಮುಂಗಾರು ತೆಲಂಗಾಣದಲ್ಲಿ ಸಕ್ರಿಯವಾಗಿದ್ದು, ಜೂನ್ 1 ರಿಂದ ಜುಲೈ8ರ ವರೆಗೆ 265.7 ಮಿಮಿ ಮಳೆಯಾಗಿದೆ.

ಏತನ್ಮಧ್ಯೆ ಕರ್ನಾಟಕದಲ್ಲಿ ಭಾರೀ ಮಳೆಯಾಗಿರುವುದರಿಂದ ತುಂಗಭದ್ರಾ ಅಣೆಕಟ್ಟಿನಲ್ಲಿ ಒಳಹರಿವು ಜಾಸ್ತಿಯಾಗಿದೆ. ಪ್ರಸ್ತುತ ಇಲ್ಲಿ 82,103 ಕ್ಯುಸೆಕ್ಸ್ ಒಳಹರಿವು ಇದ್ದು  221 ಕ್ಯುಸೆಕ್ಸ್ ಹೊರ ಹರಿವು ಇದೆ.

Published On - 2:54 pm, Fri, 8 July 22