ಪ್ರತಿಭಟನಾ ನಿರತ ರೈತರಿಗಾಗಿ ಇಸ್ತ್ರಿ ಸೇವೆ; ಬಟ್ಟೆ ಬೇಗ ಒಣಗಿಸಲು ನೆರವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 20, 2021 | 3:07 PM

ದೆಹಲಿಯ ಪ್ರಸ್ತುತ ಶೀತಲ ವಾತಾವರಣದಲ್ಲಿ ಒಗೆದು ಹಾಕಿದ ಬಟ್ಟೆಗಳು ಒಣಗುವುದಕ್ಕೆ ಹೆಚ್ಚು ಸಮಯ ಬೇಕಾಗಿರುವುದರಿಂದ ಇಸ್ತ್ರಿ ಮಾರ್ಗ ಕಂಡುಕೊಳ್ಳಲಾಗಿದೆ.

ಪ್ರತಿಭಟನಾ ನಿರತ ರೈತರಿಗಾಗಿ ಇಸ್ತ್ರಿ ಸೇವೆ; ಬಟ್ಟೆ ಬೇಗ ಒಣಗಿಸಲು ನೆರವು
ರೈತರ ಬಟ್ಟೆಗಳಿಗೆ ಇಸ್ತ್ರಿ ಹಾಕುತ್ತಿರುವುದು
Follow us on

ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರಿಗೆ ಅವರ ಬಟ್ಟೆಗಳನ್ನು ಬಲುಬೇಗನೆ ಒಣಗಿಸಲು ಸರವಣ್​ ಸಿಂಗ್​ ಎಂಬುವವರು ಇಸ್ತ್ರಿ ಸೇವೆ ಶುರುಮಾಡಿದ್ದಾರೆ. ದೆಹಲಿಯಲ್ಲಿ ಸದ್ಯ ಶೀತದ ವಾತಾವರಣವಿದು. ಒಗೆದ ಬಟ್ಟೆಗಳು ಒಣಗುವುದಕ್ಕೆ ಹೆಚ್ಚು ಸಮಯ ಬೇಕಾಗಿರುವುದರಿಂದ ಈ ಮಾರ್ಗ ಕಂಡುಕೊಳ್ಳಲಾಗಿದೆ.

ಅಮೃತಸರದಲ್ಲಿ ಆಟೊ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ ಸರವಣ್​ ಸಿಂಗ್, ಪ್ರತಿಭಟನಾ ನಿರತ ರೈತರಿಗೆ ನೆವಾಗುವ ಉದ್ದೇಶದಿಂದ ಈ ಕೆಲಸವನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮನೆಯಲ್ಲಿರುವ ಮಕ್ಕಳು ತನ್ನನ್ನು ಮರಳಿ ಬರಲು ಹೇಳುತ್ತಿದ್ದರೂ ರೈತರಿಗೆ ಸಹಾಯ ಮಾಡುವುದೇ ಈ ಕ್ಷಣದ ಮುಖ್ಯ ಅವಶ್ಯಕತೆ ಆಗಿರುವುದರಿಂದ ಇಲ್ಲೇ ಉಳಿದಿದ್ದೇನೆ ಎಂದು ಹೇಳಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ಮಳೆ ಬಂದ ನಂತರ ಬಟ್ಟೆಗಳನ್ನು ಒಣಗಿಸುವುದು ಎಷ್ಟು ಕಷ್ಟ ಎನ್ನುವುದು ಅರ್ಥವಾಯಿತು. ಆದ್ದರಿಂದ ಕಳೆದ ವಾರವೇ ನಾವೊಂದಷ್ಟು ಜನ ಸಿಂಘು ಗಡಿಗೆ ಆಗಮಿಸಿದ್ದು ರೈತರ ಬಟ್ಟೆಗಳಿಗೆ ಇಸ್ತ್ರಿ ಹಾಕಿ ಅವುಗಳನ್ನು ಒಣಗಿಸಿಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದು ಎಲ್ಲರ ಒಳಿತನ್ನು ಬಯಸಿ ನಡೆಸಲಾಗುತ್ತಿರುವ ಪ್ರತಿಭಟನೆ. ಆದ್ದರಿಂದ ಇದಕ್ಕೆ ನಾವು ನಮ್ಮ ಕೈಲಾದ ಸಹಾಯವನ್ನು ಮಾಡಬೇಕಿದೆ. ಸದ್ಯ ಬಟ್ಟೆ ಒಣಗಿಸುವುದು ದೊಡ್ಡ ಸಮಸ್ಯೆಯಾಗಿ ಕಂಡ ಕಾರಣ ಅದನ್ನು ನೀಗಿಸಲು ಪ್ರಯತ್ನಿಸುತ್ತಿದ್ದೇವೆ. ಈ ಕೆಲಸದಲ್ಲಿ ನಾವು ಮೂರ್ನಾಲ್ಕು ಜನ ನಿರತರಾಗಿದ್ದು 2 ಇಸ್ತ್ರಿ ಪೆಟ್ಟಿಗೆ ಇಟ್ಟುಕೊಂಡಿದ್ದೇವೆ. ಇಸ್ತ್ರಿ ಪೆಟ್ಟಿಗೆ, ಬೆಂಚು ಎಲ್ಲವನ್ನೂ ನಮ್ಮ ಖರ್ಚಿನಲ್ಲೇ ತಂದುಕೊಂಡಿದ್ದು, ಇನ್ನೂ ಹೆಚ್ಚಿನ ಅವಶ್ಯಕತೆ ಇದೆ. ಯಾರಾದರೂ ಸಹಾಯ ಮಾಡಿದರೆ ತುಂಬಾ ಅನುಕೂಲ ಎಂದು ತಿಳಿಸಿದ್ದಾರೆ.

ನಾಲ್ಕು ತಾಸಿಗೆ ಸುಮಾರು 200-250 ಬಟ್ಟೆಗಳು ಬರುತ್ತವೆ. ಎಲ್ಲವನ್ನೂ ಖುಷಿಯಿಂದಲೇ ಇಸ್ತ್ರಿ ಮಾಡಿಕೊಡುತ್ತೇವೆ ಎಂದು ಇನ್ನೋರ್ವ ವ್ಯಕ್ತಿ ಸೇವಾ ಸಿಂಗ್​ ಹೇಳಿದ್ದಾರೆ. ರೈತರಿಗೆ ಬಟ್ಟೆ ಇಸ್ತ್ರಿ ಮಾಡಿಕೊಡುವ ದೃಷ್ಟಿಯಿಂದೇನೋ ಬಂದಿದ್ದೀರಿ. ಆದರೆ, ನಿಮ್ಮ ಉದ್ಯೋಗಕ್ಕೆ ತೊಂದರೆಯಾಗುವುದಿಲ್ಲವೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ, ರೈತರ ಹೋರಾಟಕ್ಕಿಂತ ಮುಖ್ಯವಾಗಿದ್ದು ಯಾವುದೂ ಇಲ್ಲ ಎಂದು ಉತ್ತರಿಸಿದ್ದಾರೆ.

ನೂತನ ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎನ್ನುವ ರೈತರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದು ಇನ್ನಷ್ಟು ಉತ್ತೇಜನ ನೀಡುತ್ತಿದೆ.

ಕೃಷಿ ಕಾನೂನು ವಿರೋಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಿರತರಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ