ಅಮಿತ್ ಶಾ ಸಮ್ಮುಖದಲ್ಲಿ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಅಸ್ಸಾಂನ ಉಲ್ಫಾ ಸಂಘಟನೆ

|

Updated on: Dec 29, 2023 | 8:41 PM

ಶಾಂತಿ ಪ್ರಕ್ರಿಯೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಕೇಂದ್ರದಲ್ಲಿ ಅವರ ನಂಬಿಕೆಯನ್ನು ಗೌರವಿಸಲಾಗುವುದು ಎಂದು ಉಲ್ಫಾ ನಾಯಕತ್ವಕ್ಕೆ ನಾವು ಭರವಸೆ ನೀಡಲು ಬಯಸುತ್ತೇವೆ" ಎಂದು ಅಮಿತ್ ಶಾ ಹೇಳಿದ್ದಾರೆ. ಅದೇ ವೇಳೆ ಈಶಾನ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತಂದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದಿದ್ದಾರೆ ಗೃಹ ಸಚಿವರು

ಅಮಿತ್ ಶಾ ಸಮ್ಮುಖದಲ್ಲಿ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಅಸ್ಸಾಂನ ಉಲ್ಫಾ ಸಂಘಟನೆ
ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಉಲ್ಫಾ
Follow us on

ದೆಹಲಿ ಡಿಸೆಂಬರ್ 29: ಕೇಂದ್ರ, ಅಸ್ಸಾಂ ಸರ್ಕಾರ (Assam) ಮತ್ತು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ULFA) ನಡುವಿನ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ (Peace Deal) ದೆಹಲಿಯಲ್ಲಿ ಸಹಿ ಹಾಕಲಾಗಿದ್ದು, ಈಶಾನ್ಯ ಪ್ರದೇಶದಲ್ಲಿನ ಅತಿದೊಡ್ಡ ಬಂಡಾಯ ಗುಂಪುಗಳಿಗೆ ತೆರೆ ಬಿದ್ದಿದೆ. ಪರೇಶ್ ಬರುವಾ ನೇತೃತ್ವದ ಉಲ್ಫಾ (ಸ್ವತಂತ್ರ) ಬಣ ಮಾತುಕತೆಗೆ ವಿರೋಧ ವ್ಯಕ್ತಪಡಿಸಿದೆ. ಅಸ್ಸಾಂನ ಅತ್ಯಂತ ಹಳೆಯ ದಂಗೆಕೋರ ಗುಂಪಿನೊಂದಿಗಿನ ಶಾಂತಿ ಒಪ್ಪಂದವು ಅಕ್ರಮ ವಲಸೆ, ಸ್ಥಳೀಯ ಸಮುದಾಯಗಳಿಗೆ ಭೂಮಿಯ ಹಕ್ಕುಗಳು ಮತ್ತು ಅಸ್ಸಾಂನ ಅಭಿವೃದ್ಧಿಗೆ ಹಣಕಾಸಿನ ಪ್ಯಾಕೇಜ್‌ನಂತಹ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಉಲ್ಫಾದ ಎಲ್ಲಾ ಸಮಂಜಸವಾದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಪೂರೈಸುವುದನ್ನು ಕೇಂದ್ರವು ಖಚಿತಪಡಿಸುತ್ತದೆ ಮತ್ತು ಸಂಘಟನೆಯಾಗಿ ಉಲ್ಫಾವನ್ನು ವಿಸರ್ಜಿಸಲಾಗುವುದು ಎಂದಿದ್ದಾರೆ.

“ಶಾಂತಿ ಪ್ರಕ್ರಿಯೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಕೇಂದ್ರದಲ್ಲಿ ಅವರ ನಂಬಿಕೆಯನ್ನು ಗೌರವಿಸಲಾಗುವುದು ಎಂದು ಉಲ್ಫಾ ನಾಯಕತ್ವಕ್ಕೆ ನಾವು ಭರವಸೆ ನೀಡಲು ಬಯಸುತ್ತೇವೆ” ಎಂದು ಅಮಿತ್ ಶಾ ಹೇಳಿದ್ದಾರೆ. ಅದೇ ವೇಳೆ ಈಶಾನ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತಂದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದಿದ್ದಾರೆ.


ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳ ಹಲವು ಪ್ರದೇಶಗಳಿಂದ ಸಶಸ್ತ್ರ ಪಡೆಗಳ (ವಿಶೇಷ) ಅಧಿಕಾರಗಳ ಕಾಯಿದೆಯನ್ನು (ಎಎಫ್‌ಎಸ್‌ಪಿಎ) ತೆಗೆದುಹಾಕಿರುವುದು ಈ ಪ್ರದೇಶದಲ್ಲಿ ಬಂಡಾಯವು ಬಹುತೇಕ ನಿರ್ನಾಮವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಉಲ್ಫಾ ಜೊತೆಗಿನ ಶಾಂತಿ ಒಪ್ಪಂದವು ಈ ಪ್ರದೇಶದಲ್ಲಿನ ದಂಗೆಯ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಪರಿಹರಿಸುತ್ತದೆ ಎಂದು ಹೇಳಿದರು.

ಈಶಾನ್ಯ ಭಾಗದ ಬಂಡುಕೋರ ಗುಂಪುಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಒಪ್ಪಿಕೊಂಡ ನಂತರ ಮೋದಿ ಸರ್ಕಾರವು ಅನೇಕ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದೆ. ನವೆಂಬರ್‌ನಲ್ಲಿ, ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪು UNLF ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು.

ಏಪ್ರಿಲ್ 7, 1979 ರಂದು ಅಸ್ಸಾಂನ ಶಿವಸಾಗರದಲ್ಲಿ ಸ್ಥಾಪನೆಯಾದ ಉಲ್ಫಾ ಸ್ಥಳೀಯ ಅಸ್ಸಾಮಿ ಜನರಿಗೆ ಸ್ವತಂತ್ರ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಹೊರಹೊಮ್ಮಿತು. ಪರೇಶ್ ಬರುವಾ, ಅರಬಿಂದಾ ರಾಜ್‌ಖೋವಾ ಮತ್ತು ಅನುಪ್ ಚೇಟಿಯಾ ಅವರ ನೇತೃತ್ವದಲ್ಲಿ 1980 ರ ದಶಕದ ಉತ್ತರಾರ್ಧದಲ್ಲಿ ಈ ಗುಂಪು ತನ್ನ ಸಶಸ್ತ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಇದನ್ನೂ ಓದಿ: ಅಸ್ಸಾಂ: ವಾಮಾಚಾರದ ಶಂಕೆ, ಮಹಿಳೆಯನ್ನು ಸಜೀವವಾಗಿ ದಹಿಸಿದ ಜನ

ಆರಂಭದಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡುವ ಗುಂಪು ಎಂದು ಗ್ರಹಿಸಲ್ಪಟ್ಟ ಉಲ್ಫಾದ ತಂತ್ರಗಳು ಶೀಘ್ರದಲ್ಲೇ ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟದ ಮಟ್ಟಕ್ಕೆ ಬೆಳೆಯಿತು.

ಪ್ರಮುಖ ಚಹಾ ತೋಟಗಾರ ಮತ್ತು ಲಾರ್ಡ್ ಸ್ವರಾಜ್ ಪಾಲ್ ಅವರ ಸಹೋದರ ಸುರೇಂದ್ರ ಪಾಲ್ ಅವರ ಹತ್ಯೆ ಮತ್ತು ನಂತರದ ಸುಲಿಗೆ ಮತ್ತು ಟೀ ಎಸ್ಟೇಟ್ ಮಾಲೀಕರಿಗೆ ಬೆದರಿಕೆ ನೀಡಿದ್ದರಿಂದ ಉಲ್ಫಾವನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲಾಗಿತ್ತು. ಈ ಘಟನೆಗಳು ಭಾರತ ಸರ್ಕಾರದ ಮೇಲೆ ಅಂತರರಾಷ್ಟ್ರೀಯ ಒತ್ತಡವನ್ನು ಬೀರಿತು, ಉಲ್ಫಾ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಕಾರಣವಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ