ಬಹುದೊಡ್ಡ ಮಟ್ಟದ ರೈಲು ದುರಂತ ತಪ್ಪಿಸಿದ ಮಹಿಳೆ; ರೈಲು ನಿಲ್ಲಿಸಲು ತಮ್ಮ ಕೆಂಪು ಸೀರೆ ಕಟ್ಟಿ, ಹಳಿ ಮೇಲೇ ನಿಂತರು !
ಎಂದಿನಂತೆ ಗುರುವಾರ ಬೆಳಗ್ಗೆ 8ಗಂಟೆಯ ಒಳಗೇ ಓಮವತಿ ಕೆಲಸಕ್ಕೆಂದು ಹೊಲಕ್ಕೆ ಹೊರಟಿದ್ದರು. ಆಗ ಅವರಿಗೆ ಅಲ್ಲಿನ ರೈಲ್ವೆ ಹಳಿ ಬಿರುಕುಬಿಟ್ಟಿದ್ದು ಕಾಣಿಸಿಕೊಂಡಿದೆ. ಅಂದರೆ ಕಂಬಿ ಕಟ್ ಆಗಿತ್ತು. ಸಮಯ ಎಂಟುಗಂಟೆಯಾಗುತ್ತಿತ್ತು, ಅದು ಇಟಾಹ್-ಟುಂಡ್ಲಾ ರೈಲು ಬರುವ ಸಮಯ.
ಯಾವುದಾದರೂ ಒಂದು ಸಮಸ್ಯೆ ಎದುರಾದಾಗ, ಕಷ್ಟಕ್ಕೆ ಸಿಲುಕಿದಾಗ ಅದರಿಂದ ಹೊರಗೆ ಬರುವ ವಿಧಾನವನ್ನು ಅತ್ಯಂತ ವೇಗವಾಗಿ ಯೋಚಿಸುವ ಸ್ವಭಾವ ಅಳವಡಿಸಿಕೊಳ್ಳುವುದು, ಸಮಯಪ್ರಜ್ಞೆ ರೂಢಿಸಿಕೊಳ್ಳುವುದು ಪ್ರತಿನಿತ್ಯದ ಜೀವನದಲ್ಲಿ ತುಂಬ ಮುಖ್ಯ. ಈಗ ಉತ್ತರ ಪ್ರದೇಶದ ಇಟಾಹ್ನಲ್ಲಿ 58 ವರ್ಷದ ಮಹಿಳೆಯೊಬ್ಬರು ತಮ್ಮ ಸಮಯಪ್ರಜ್ಞೆಯಿಂದ ರೈಲು ದುರಂತವನ್ನು ತಪ್ಪಿಸಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದು ಸಣ್ಣ ಕೆಲಸವೇನೂ ಅಲ್ಲ, 150 ಪ್ರಯಾಣಿಕರ ಜೀವ ಉಳಿಸಿದ್ದಾರೆ.
ಸೀರೆ ಕಟ್ಟಿದ ಓಮವತಿ !
ಇಟಾಹ್ನ ನಾಗ್ಲಾ ಗುಲೇರಿಯಾ ಎಂಬ ಪ್ರದೇಶದ ನಿವಾಸಿ ಈ ಮಹಿಳೆ. ಹೆಸರು ಓಮವತಿ. ಮನೆ ಸಮೀಪವೇ ಇವರ ಹೊಲವಿದೆ. ಹಾಗೇ ಅಲ್ಲೆಲ್ಲ ರೈಲ್ವೆ ಹಳಿಗಳು ಹಾದುಹೋಗಿದ್ದು, ಪ್ರತಿದಿನ ವಿವಿಧ ಪ್ರದೇಶಗಳಿಗೆ ಹೋಗುವ ರೈಲುಗಳು ಸಂಚಾರ ಮಾಡುತ್ತಿರುತ್ತವೆ. ಎಂದಿನಂತೆ ಗುರುವಾರ ಬೆಳಗ್ಗೆ 8ಗಂಟೆಯ ಒಳಗೇ ಓಮವತಿ ಕೆಲಸಕ್ಕೆಂದು ಹೊಲಕ್ಕೆ ಹೊರಟಿದ್ದರು. ಆಗ ಅವರಿಗೆ ಅಲ್ಲಿನ ರೈಲ್ವೆ ಹಳಿ ಬಿರುಕುಬಿಟ್ಟಿದ್ದು ಕಾಣಿಸಿಕೊಂಡಿದೆ. ಅಂದರೆ ಕಂಬಿ ಕಟ್ ಆಗಿತ್ತು. ಸಮಯ ಎಂಟುಗಂಟೆಯಾಗುತ್ತಿತ್ತು, ಅದು ಇಟಾಹ್-ಟುಂಡ್ಲಾ ರೈಲು ಬರುವ ಸಮಯ ಎಂದು ಅರಿತ ಓಮವತಿ ತಕ್ಷಣಕ್ಕೆ ಕಾರ್ಯಪ್ರವೃತ್ತರಾದರು. ಒಂದು ಕ್ಷಣವನ್ನೂ ಹಾಳು ಮಾಡದೆ ಸೀದಾ ಮನೆಗೆ ಓಡಿ ತಮ್ಮ ಕೆಂಪು ಸೀರೆ ತಂದರು. ಹಳಿಯ ಅಕ್ಕಪಕ್ಕ ಎರಡು ಕೋಲುಗಳನ್ನು ನಿಲ್ಲಿಸಿ, ಅದಕ್ಕೆ ಸೀರೆ ಕಟ್ಟಿದರು.
ಇಷ್ಟು ಮಾಡಿ ಸುಮ್ಮನೆ ನಿಲ್ಲಲಿಲ್ಲ. ಅಷ್ಟರಲ್ಲಿ ರೈಲು ಬರುತ್ತಿರುವ ಶಬ್ದ ದೂರದಿಂದ ಕೇಳುತ್ತಿತ್ತು. ಕೂಡಲೇ ಹಳಿಯ ಮೇಲೆ ರೈಲು ಬರುತ್ತಿರುವ ಮಾರ್ಗಕ್ಕೆ ಅಭಿಮುಖವಾಗಿ ನಿಧಾನಕ್ಕೆ ಓಡಲು ಶುರು ಮಾಡಿದರು. ಆಗ ಅಪಾಯದ ಮುನ್ಸೂಚನೆ ಅರಿತ ಚಾಲಕ ರೈಲಿನ ವೇಗ ತಗ್ಗಿಸಿ, ಕೊನೆಗೂ ನಿಲ್ಲಿಸಿದರು. ಅಷ್ಟರಲ್ಲಿ ಸ್ಥಳೀಯರೂ ಕೆಲವರು ಅಲ್ಲಿಗೆ ಆಗಮಿಸಿದರು. ಬಳಿಕ ಬಂದ ರೈಲ್ವೆ ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಇಂಜಿನಿಯರ್ಗಳು ಹಳಿಪರಿಶೀಲನೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈಲ್ವೆ ಹಳಿ ದುರಸ್ತಿಯಾಗಿದೆ. ಇದಕ್ಕೆ ಸುಮಾರು 45 ನಿಮಿಷಗಳು ಬೇಕಾಯಿತು ಎಂದು ಹೇಳಲಾಗಿದೆ.
ಓಮವತಿ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಯಾಗ್ರಾಜ್ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಸಿಂಗ್ ಪ್ರತಿಕ್ರಿಯೆ ನೀಡಿ, ನಾಗ್ಲಾ ಗುಲೇರಿಯಾ ಹಳ್ಳಿಯ ಬಳಿ ರೈಲ್ವೆ ಹಳಿ ದುರಸ್ತಿ ಕಾರ್ಯ ನಡೆಸುತ್ತಿದ್ದು, ಅಲ್ಲಿ ರೈಲು 20 ಕಿಮೀ ವೇಗದಲ್ಲಿ ಚಲಿಸಲು ಸಾಧ್ಯವಿಲ್ಲ. ಹೀಗಿರುವಾಗ ಮಹಿಳೆ ಚಾಲಕನನ್ನು ಅಲರ್ಟ್ ಮಾಡಿದ್ದು, ನಿಜಕ್ಕೂ ಶ್ಲಾಘನೀಯ ಕೆಲಸ. ಯಾಕೆಂದರೆ ಬಿರುಕು ಬಿಟ್ಟ ಕಂಬಿಯಲ್ಲಿ ರೈಲು ಹೋಗಿದ್ದರೆ, ದೊಡ್ಡಮಟ್ಟದ ಅಪಾಯ ಆಗುವ ಸಾಧ್ಯತೆ ಇರುತ್ತಿತ್ತು ಎಂದು ಹೇಳಿದ್ದಾರೆ. ಹಾಗೇ, ಸಚಿನ್ ಕೌಶಿಕ್ ಎಂಬುವರು ಮಹಿಳೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.
श्रीमती ओमवती।
सुबह खेत पर काम करने जा रही थीं। ट्रैक पार करते समय अचानक टूटी पटरी पर नजर पड़ गई। ट्रेन आने वाली थी, इन्होंने समझदारी दिखाते हुए अपनी लाल रंग की साड़ी को लकड़ियों की मदद से ट्रैक पर खड़ा कर दिया।
ट्रेन रोकी गई, पटरी ठीक हुई तब 30 मिनट बाद ट्रेन रवाना हुई।? pic.twitter.com/j4SJPTN3kl
— SACHIN KAUSHIK (@upcopsachin) March 31, 2022
ನಾನು ಅನಕ್ಷರಸ್ಥೆ
ರೈಲ್ವೆ ಹಳಿಯಲ್ಲಿ ಬಿರುಕು ಕಂಡ ಕ್ಷಣವನ್ನು ಓಮವತಿ ವಿವರಿಸಿದ್ದಾರೆ. ನಾನು ವಿದ್ಯೆ ಕಲಿತವಳಲ್ಲ. ಆದರೆ ಕೆಂಪು ಬಣ್ಣ ಅಪಾಯದ ಸಂಕೇತ ಎಂಬುದು ನನಗೆ ಗೊತ್ತಿತ್ತು. ಹಾಗೇ, ಕೆಂಪು ಬಣ್ಣದ ಬಾವುಟ ತೋರಿಸಿದರೆ ರೈಲನ್ನು ನಿಲ್ಲಿಸಿಬಹುದು ಎಂದು ತಿಳಿದಿತ್ತು. ಹಾಗಾಗಿ ಕೆಂಪು ಬಣ್ಣದ ಸೀರೆ ಕಟ್ಟಿದೆ. ಚಾಲಕ ನನಗೆ 100 ರೂಪಾಯಿ ಕೊಟ್ಟು, ಕೃತಜ್ಞತೆ ಸಲ್ಲಿಸಿದ. ನಾನು ಮೊದಲು ತೆಗೆದುಕೊಳ್ಳಲಿಲ್ಲ. ಆದರೆ ಗೌರವ ಸಲ್ಲಿಸಲು ಕೊಡುತ್ತಿದ್ದೇನೆ, ತೆಗೆದುಕೊಳ್ಳಿ ಎಂದು ಹೇಳಿದ ಬಳಿಕ ನಾನು ಸ್ವೀಕರಿಸಿದೆ. ನನ್ನ ಹಳ್ಳಿಯವರಂತೂ ಸಿಕ್ಕಾಪಟೆ ಖುಷಿಯಾಗಿದ್ದಾರೆ. ನಿಂತಿರುವ ರೈಲಿನ ಎದುರು, ನನ್ನೊಂದಿಗೆ ಫೋಟೋವನ್ನೂ ತೆಗೆದುಕೊಂಡಿದ್ದಾರೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: Petrol Diesel Price Hike: ಮತ್ತೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ, 13 ದಿನಗಳಲ್ಲಿ ಏರಿಕೆಯಾದ ಮೊತ್ತ 8 ರೂಪಾಯಿಗೂ ಹೆಚ್ಚು