ಇಂಗ್ಲೆಂಡ್ನ ಆಸ್ಟ್ರಾಜೆನೆಕಾ ಸಂಸ್ಥೆಯ ಸಹಯೋಗದೊಂದಿಗೆ ಭಾರತದಲ್ಲಿ ಕೊವಿಷೀಲ್ಡ್ ಹೆಸರಲ್ಲಿ ಕೊವಿಡ್ ಲಸಿಕೆಯನ್ನು ತಯಾರಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಮಾಲೀಕ ಅದಾರ್ ಪೂನಾವಾಲಾ ಕೊಂಚ ಅತಂಕದಲ್ಲರುವಂತಿದೆ. ಅವರ ಸಂಸ್ಥೆಯಿಂದ ಲಸಿಕೆ ಸರಬರಾಜಿನಲ್ಲಿ ವಿಳಂಬವಾಗುತ್ತಿರುವ ಸುದ್ದಿ ಹರಡಿದ ನಂತರ ಆಸ್ಟ್ರಾಜೆನೆಕಾ ಸಂಸ್ಥೆಯು ಪೂನಾವಾಲಾ ಅವರಿಗೆ ಲೀಗಲ್ ನೋಟಿಸೊಂದನ್ನು ಕಳಿಸಿದೆ.
ಪೂನಾವಾಲಾ ಅವರು ತಮ್ಮ ಸಂಸ್ಥೆಯಲ್ಲಿ ಕೋವಿಷೀಲ್ಡ್ ಲಸಿಕೆಯ ತಯಾರಿಕಾ ಸಾಮರ್ಥ್ಯ ಒತ್ತಡದಲ್ಲಿದೆ ಅಂತ ಹೇಳಿದ ಒಂದು ದಿನದ ನಂತರ ಆಸ್ಟ್ರಾಜೆನೆಕಾ ಸಂಸ್ಥೆಯು ಅವರಿಗೆ ನೋಟಿಸ್ ಕಳಿಸಿದೆ. ಭಾರತದಲ್ಲಿ ಕೊವಿಡ್ ವಿರುದ್ಧ ಜಾರಿಯಲ್ಲಿರುವ ಲಸಿಕಾ ಅಭಿಯಾನದಲ್ಲಿ ಬಳಸಲಾಗುತ್ತಿರುವ ಎರಡು ಲಸಿಕೆಗಳಲ್ಲಿ ಕೋವಿಷೀಲ್ಡ್ ಒಂದಾಗಿದೆ, ಮತ್ತೊಂದು ಕೋವ್ಯಾಕ್ಸಿನ್.
ಹಾಗೆಯೇ, ಕೋವಿಷೀಲ್ಡ್ ದಾಸ್ತಾನನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದರ ಮೇಲೆ ಭಾರತ ಸರ್ಕಾರ ಅಂಕುಶ ಒಡ್ಡಿರುವುದು ಸಹ ತಮ್ಮ ಸಂಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಪೂನಾವಾಲಾ ಹೇಳಿದ್ದಾರೆ. ಎಸ್ಐಐ ಸಂಸ್ಥೆಯ ತನ್ನ ಉತ್ಪಾದನೆಯನ್ನು ರಫ್ತು ಮಾಡುವ ದೇಶಗಳಲ್ಲಿ ಪ್ರತಿ ಡೋಸ್ಗೆ ಭಾರತಕ್ಕಿಂತ ಬಹಳ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
‘ವಿಶ್ವಕ್ಕೆ ಈಗ ನಮ್ಮ ವ್ಯಾಕ್ಸಿನ್ ಅವಶ್ಯಕತೆಯಿದೆ. ಆದರೆ ನಾವು ಭಾರತದಲ್ಲಿನ ಅಗತ್ಯಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದೇವೆ, ಆದಗ್ಯೂ, ಭಾರತದ ಬೇಡಿಕೆಗೆ ಸ್ಫಂದಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬ ಭಾರತೀಯನಿಗೆ ಲಸಿಕೆಯ ಅವಶ್ಯಕತೆಯಿದೆ,’ ಎಂದು ಪೂನಾವಾಲಾ ಹೇಳಿದ್ದಾರೆ. ಆದರೆ, ಕಳೆದ ವಾರ ಹೇಳಿಕೆಯೊಂದನ್ನು ನೀಡಿದ ಕೇಂದ್ರ ಸರ್ಕಾರ ಲಸಿಕೆಗಳ ರಫ್ತಿನ ಮೇಲೆ ನಿಚ್ಚಳವಾದ ನಿಷೇಧ ಹೇರಿಲ್ಲ ಎಂದು ಹೇಳಿತ್ತು.
ಎಸ್ಐಐ ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು 100 ದಕ್ಷಲಕ್ಷ ಡೋಸ್ಗಳಿಗೆ ಹೆಚ್ಚಿಸಿದರೂ, ಭಾರತದಲ್ಲಿ ಲಸಿಕೆಯನ್ನು ತಯಾರಿಸುತ್ತಿರುವ ಇತರ ಫಾರ್ಮಾಸ್ಯೂಟಿಕಲ್ ಕಂಪನಿನಗಳು ಸಹ ಉತ್ಪಾದನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕೆಂದು ಪೂನಾವಾಲಾ ಹೇಳಿದ್ದಾರೆ.
ಏತನ್ಮಧ್ಯೆ, ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳಲ್ಲಿ ಕೊವಿಡ್ ಲಸಿಕೆಯ ತೀವ್ರ ಆಭಾವ ಎದುರಾಗಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರ ಸರ್ಕಾರವು ಲಸಿಕೆಗಳ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳನ್ನು ಮುಚ್ಚುತ್ತಿರುವುದಾಗಿ ಹೇಳಿತ್ತು. ಆದರೆ, ಆ ಸರ್ಕಾರದ ವಾದವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸರ್ಕಾರವು ಮಹಾರಾಷ್ಟ್ರ ಸರ್ಕಾರ ಸೋಂಕಿತರ ಸಂಖ್ಯೆಯನ್ನು ತಗ್ಗಿಸಲಾಗದ ವೈಫಲ್ಯವನ್ನು ಬೇರೆಯವರ ಮೇಲೆ ಜಾರಿಸಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಿತ್ತು.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ 56,286 ಹೊಸ ಪ್ರಕರಣಗಳು ವರದಿಯಾಗಿದ್ದು, 376 ಜನ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲೀಗ ಒಟ್ಟು 5,21,315 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: AstraZeneca Side Effects: ಆಸ್ಟ್ರಾಜೆನಿಕಾ ಲಸಿಕೆಯ ಅಡ್ಡಪರಿಣಾಮಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದ ಭಾರತ
Published On - 10:31 pm, Thu, 8 April 21