ದೆಹಲಿ: ಎರಡು ವಾರಗಳ ಹಿಂದೆ ಪಾಕಿಸ್ತಾನದ ನೆಲಕ್ಕೆ ಭಾರತದ ಕ್ಷಿಪಣಿಯೊಂದು ಅಚಾನಕ್ ಅಪ್ಪಳಿಸಲು ಮನುಷ್ಯರು ಮಾಡಿದ ತಪ್ಪೇ ಕಾರಣ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ಹೇಳಿವೆ. ಭಾರತೀಯ ವಾಯುಪಡೆ (Indian Air Force – IAF) ನಡೆಸಿದ ಆಂತರಿಕ ತನಿಖೆಯಲ್ಲಿ ಈ ಅಂಶ ಸ್ಪಷ್ಟವಾಗಿದೆ. ಬ್ರಹ್ಮೋಸ್ ಕ್ಷಿಪಣಿಯು ಪಾಕಿಸ್ತಾನದ ನೆಲಕ್ಕೆ ಅಪ್ಪಳಿಸಲು ಗ್ರೂಪ್ ಕ್ಯಾಪ್ಟನ್ ಹಂತದ ಅಧಿಕಾರಿಯೊಬ್ಬರು ಮಾಡಿದ ತಪ್ಪು ಮುಖ್ಯ ಕಾರಣ ಎಂಬ ಅಂಶದ ಮೇಲೆ ತನಿಖೆಯು ಬೆಳಕು ಚೆಲ್ಲಿದೆ. ‘ಚಾಲ್ತಿಯಲ್ಲಿರುವ ತನಿಖೆಯಲ್ಲಿ ವ್ಯಕ್ತವಾಗಿರುವ ಅಂಶಗಳನ್ನು ಪರಿಶೀಲಿಸಿದರೆ ಮನುಷ್ಯರು ಮಾಡಿರುವ ತಪ್ಪುಗಳಿಂದಲೇ ಈ ಘಟನೆ ನಡೆದಿದೆ’ ಎಂದು ತನಿಖಾ ತಂಡದೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಘಟನೆಯ ಬಗ್ಗೆ ವಿಸ್ತೃತ ತನಿಖೆಗಾಗಿ ತಂಡವೊಂದನ್ನು ರಚಿಸಲಾಗಿತ್ತು.
ತನ್ನ ನೆಲದಲ್ಲಿ ಭಾರತದ ಕ್ಷಿಪಣಿ ಬಿದ್ದುದನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಕಿಸ್ತಾನ ಸರ್ಕಾರವು ಭಾರತಕ್ಕೆ ಕ್ಷಿಪಣಿ ವ್ಯವಸ್ಥೆಯನ್ನು ನಿರ್ವಹಿಸಲು ಇರುವ ಸಾಮರ್ಥ್ಯದ ಬಗ್ಗೆಯೇ ಶಂಕೆ ವ್ಯಕ್ತಪಡಿಸಿತ್ತು. ಅಚಾನಕ್ ಆಗಿ ಕ್ಷಿಪಣಿ ಹಾರಲು ಕಾರಣರಾದ ಗ್ರೂಪ್ ಕ್ಯಾಪ್ಟನ್ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ನಿರ್ವಹಣೆಯ ಜವಾಬ್ದಾರಿ ಹೊತ್ತವರು. ದೈನಂದಿನ ನಿರ್ವಹಣೆ ಮತ್ತು ತಪಾಸಣೆ ಸಂದರ್ಭದಲ್ಲಿ ಕ್ಷಿಪಣಿಯು ಅಚಾನಕ್ ಆಗಿ ಹಾರಿತ್ತು ಎಂದು ಮೂಲಗಳು ಹೇಳಿವೆ.
ಭಾರತೀಯ ವಾಯುಸೇನೆಯು ಗೌಪ್ಯವಾಗಿ ನಿರ್ವಹಿಸುತ್ತಿರುವ ವಾಯುನೆಲೆಯೊಂದರಿಂದ ಅಚಾನಕ್ ಆಗಿ ಹಾರಿತ್ತು. ಪಾಕಿಸ್ತಾನದ ಮಿಯಾನ್ ಚನ್ನು ಎಂಬಲ್ಲಿ ಈ ಕ್ಷಿಪಣಿ ನೆಲಕ್ಕೆ ಅಪ್ಪಳಿಸಿತ್ತು. ಮಾರ್ಚ್ 9ರಂದು ನಡೆದಿದ್ದ ಈ ಘಟನೆಗೆ ಪಾಕಿಸ್ತಾನವೂ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆ ದಾಖಲಿಸಿತ್ತು.
ಘಟನೆಯ ಕುರಿತು ಮಾರ್ಚ್ 11ರಂಂದು ಸ್ಪಷ್ಟನೆ ನೀಡಿದ್ದ ಭಾರತದ ರಕ್ಷಣಾ ಇಲಾಖೆಯು, ‘ಇದು ತೀವ್ರವಿಷಾದಕರ ಸಂಗತಿ. ತಾಂತ್ರಿಕ ದೋಷಗಳಿಂದ ಇಂಥ ಘಟನೆ ನಡೆದಿರಬಹುದು. ಈ ಘಟನೆಯನ್ನು ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗುವುದು’ ಎಂದು ಪ್ರತಿಕ್ರಿಯಿಸಿತ್ತು.
ಘಟನೆ ಕುರಿತು ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಸಶಸ್ತ್ರಪಡೆಗಳು ಕ್ಷಿಪಣಿ ವ್ಯವಸ್ಥೆ ನಿರ್ವಹಿಸಲು ಸಮರ್ಥವಾಗಿವೆ. ಅಗತ್ಯ ತರಬೇತಿಯನ್ನೂ ಹೊಂದಿವೆ. ಘಟನೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕ್ರಮಗಳು, ನಿರ್ವಹಣೆ ಮತ್ತು ತಪಾಸಣೆಯ ವಿಧಾನಗಳನ್ನು ಸಂಪೂರ್ಣವಾಗಿ ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ನಮ್ಮ ಆಯುಧಗಳ ಸುರಕ್ಷೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ. ಯಾವುದಾದರೂ ಲೋಪದೋಷಗಳು ಕಂಡು ಬಂದರೆ ತಕ್ಷಣ ಸರಿಪಡಿಸುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತದ ಸೂಪರ್ ಸಾನಿಕ್ ಕ್ಷಿಪಣಿ ನಮ್ಮ ವಾಯುಪ್ರದೇಶಕ್ಕೆ ಬಂದು ಕೆಳಗೆ ಬಿತ್ತು ಎಂದ ನೆರೆರಾಷ್ಟ್ರ ಪಾಕಿಸ್ತಾನ
ಇದನ್ನೂ ಓದಿ: ಭಾರತದ ಕ್ಷಿಪಣಿ ವ್ಯವಸ್ಥೆ ಅತ್ಯಂತ ವಿಶ್ವಾಸಾರ್ಹ, ಸುರಕ್ಷಿತ: ರಾಜ್ಯಸಭೆಯಲ್ಲಿ ರಾಜನಾಥ ಸಿಂಗ್