ರೈತಹೋರಾಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಕೊವಿಡ್ ಸೋಂಕಿನಿಂದ ಸಾವು
ನಮ್ಮ ಸಂಘಟನೆಯ ಹೋರಾಟಗಾರ್ತಿಯ ಮೇಲೆ ಅತ್ಯಾಚಾರ ಆಗಿದ್ದು ದುರಂತ ಎಂದು ಹೇಳಿರುವ ಎಸ್ಕೆಎಂ ನಾಲ್ಕು ದಿನಗಳ ಹಿಂದೆಯೇ ಟಿಕ್ರಿ ಗಡಿಯಲ್ಲಿರುವ ಕಿಸಾನ್ ಸೋಷಿಯಲ್ ಆರ್ಮಿ ಎಂದು ಬರೆದುಕೊಂಡಿದ್ದ ದೊಡ್ಡ ಬ್ಯಾನರ್, ಟೆಂಟ್ಗಳನ್ನೆಲ್ಲ ತೆಗೆದುಹಾಕಿದೆ.
ದೆಹಲಿಯ ಟಿಕ್ರಿ ಗಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮಬಂಗಾಳದಿಂದ ತೆರಳುತ್ತಿದ್ದ 26ವರ್ಷದ ಹೋರಾಟಗಾರ್ತಿಯೊಬ್ಬಳನ್ನು, ಅವಳ ಜತೆಗಿದ್ದ ಇಬ್ಬರು ಅತ್ಯಾಚಾರ ಮಾಡಿದ್ದರು. ಈ ಅತ್ಯಾಚಾರ ಸಂತ್ರಸ್ತೆ ಇದೀಗ ಕೊವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದು ತುಸು ಹಳೇ ಘಟನೆಯಾಗಿದ್ದು, ಇದೀಗ ಬೆಳಕಿಗೆ ಬಂದಿದೆ. ಏಪ್ರಿಲ್ 11ರಂದು ಈ ಯುವತಿ, ಇನ್ನಿಬ್ಬರೊಂದಿಗೆ ದೆಹಲಿ ಗಡಿಗೆ ತೆರಳುತ್ತಿದ್ದರು. ಆದರೆ ದುರ್ದೈವವೆಂಬಂತೆ ಜತೆಗಿದ್ದವರಿಂದಲೇ ರೇಪ್ಗೆ ಒಳಗಾಗಿದ್ದರು. ಈ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಆಕೆಯಲ್ಲಿ ಕೊವಿಡ್ 19 ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿತ್ತು. ಹಾಗಾಗಿ ಏಪ್ರಿಲ್ 26ರಂದು ಶಿವಮ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಲ್ಲಿ ಕೊವಿಡ್ ದೃಢಪಟ್ಟಿತ್ತು. ಅದಾದ ನಾಲ್ಕೇ ದಿನಗಳಲ್ಲಿ ಅಂದರೆ ಏಪ್ರಿಲ್ 30ರಂದು ಕೊನೆಯುಸಿರೆಳಿದಿದ್ದಾರೆ.
ಯುವತಿಯ ಮರಣಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಸಂತಾಪ ವ್ಯಕ್ತಪಡಿಸಿದೆ. ಹಾಗೇ ಆಕೆಗೆ ನ್ಯಾಯ ಸಿಗಬೇಕು, ಈ ಹೋರಾಟದಲ್ಲಿ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಹೇಳಿದೆ.
ನಮ್ಮ ಸಂಘಟನೆಯ ಹೋರಾಟಗಾರ್ತಿಯ ಮೇಲೆ ಅತ್ಯಾಚಾರ ಆಗಿದ್ದು ದುರಂತ ಎಂದು ಹೇಳಿರುವ ಎಸ್ಕೆಎಂ ನಾಲ್ಕು ದಿನಗಳ ಹಿಂದೆಯೇ ಟಿಕ್ರಿ ಗಡಿಯಲ್ಲಿರುವ ಕಿಸಾನ್ ಸೋಷಿಯಲ್ ಆರ್ಮಿ ಎಂದು ಬರೆದುಕೊಂಡಿದ್ದ ದೊಡ್ಡ ಬ್ಯಾನರ್, ಟೆಂಟ್ಗಳನ್ನೆಲ್ಲ ತೆಗೆದುಹಾಕಿದೆ. ಇನ್ನು ಅತ್ಯಾಚಾರದ ಆರೋಪಿಗಳನ್ನು ಚಳುವಳಿಯಿಂದ ಅದಾಗಲೇ ದೂರವಿಟ್ಟಿರುವ ಸಂಘಟನೆ, ಅವರಿಗೆ ಸಾರ್ವಜನಿಕ ಬಹಿಷ್ಕಾರ ಹಾಕುವಂತೆ ಜನರಲ್ಲಿ ಮನವಿಯನ್ನೂ ಮಾಡಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 12 ಜನ ಕೊರೊನಾ ಸೋಂಕಿಗೆ ಬಲಿ; ಜನರಲ್ಲಿ ಹೆಚ್ಚಾದ ಆತಂಕ
ನಿನ್ನ ದೇಣಿಗೆ ಹಣದಲ್ಲಿ ಒಂದು ವೆಂಟಿಲೇಟರ್ ಸಹ ಬರುವುದಿಲ್ಲ; ದೇಣಿಗೆ ನೀಡಿ ಟ್ರೋಲ್ ಆದ ಯಜ್ವೇಂದ್ರ ಚಹಲ್
Published On - 10:22 am, Mon, 10 May 21