ಎನ್ಐಎ ದಾಳಿ ಖಂಡಿಸಿ ಕೇರಳದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 22, 2022 | 3:12 PM

ಗುರುವಾರ ಬೆಳಗ್ಗೆ ದಾಳಿ ನಡೆಸಿರುವುದು ಸುದ್ದಿಯಾಗುತ್ತಿದ್ದಂತೆ, ಪಿಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ ಸ್ಥಳಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ಅದರ ತನಿಖಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಎನ್ಐಎ ದಾಳಿ ಖಂಡಿಸಿ ಕೇರಳದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ
ಪಿಎಫ್ಐ
Follow us on

ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೇತೃತ್ವದ ಏಜೆನ್ಸಿಗಳು ಇಂದು(ಗುರುವಾರ)  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಕಚೇರಿಗಳು, ಮುಖಂಡರ ಮನೆ ಮತ್ತು ಇತರ ಸ್ಥಳಗಳ ಮೇಲೆ  ನಡೆಸಿದ ದಾಳಿಗಳನ್ನು ವಿರೋಧಿಸಿ  ಪಿಎಫ್ಐ ಕಾರ್ಯಕರ್ತರು  ಕೇರಳದಾದ್ಯಂತ ಪ್ರತಿಭಟನೆ ನಡೆಸಿದರು. ಗುರುವಾರ ಬೆಳಗ್ಗೆ ದಾಳಿ ನಡೆಸಿರುವುದು ಸುದ್ದಿಯಾಗುತ್ತಿದ್ದಂತೆ, ಪಿಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ ಸ್ಥಳಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ಅದರ ತನಿಖಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಆದಾಗ್ಯೂ, ಭದ್ರತೆಯನ್ನು ಬಲಪಡಿಸುವ ಭಾಗವಾಗಿ ಈಗಾಗಲೇ ಅಂತಹ ಎಲ್ಲಾ ಸ್ಥಳಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಕೋಟ್ಟಯಂ, ಎರ್ನಾಕುಲಂ ಮತ್ತು ತ್ರಿಶೂರ್ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಯಿತು ಎಂದು ಪಿಎಫ್‌ಐ ಮೂಲಗಳು ತಿಳಿಸಿವೆ.  ಮುಖ್ಯವಾಗಿ ರಾಜ್ಯ ಮತ್ತು ಜಿಲ್ಲಾ ಸಮಿತಿಗಳ ಕಚೇರಿಗಳು ಮತ್ತು ಅದರ ಪದಾಧಿಕಾರಿಗಳ ಮನೆಗಳಲ್ಲಿ ಶೋಧಗಳನ್ನು ನಡೆಸಲಾಯಿತು. ಆರಂಭದಲ್ಲಿ ಜಾರಿ ನಿರ್ದೇಶನಾಲಯವು ಶೋಧಗಳನ್ನು ನಡೆಸಿದೆ ಎಂದು ನಾವು ಭಾವಿಸಿದ್ದರೂ, ನಂತರ ಅದು ಎನ್ಐಎ ಎಂಬುದು ಗೊತ್ತಾಯಿತು ಎಂದು ಪಿಎಫ್ಐ ಮೂಲವೊಂದು ಪಿಟಿಐಗೆ ಹೇಳಿದೆ.

ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ನಾಯಕರು ಸೇರಿದಂತೆ ಪಿಎಫ್‌ಐನ 14 ಪದಾಧಿಕಾರಿಗಳನ್ನು ಕೇಂದ್ರೀಯ ಸಂಸ್ಥೆಗಳು ವಶಕ್ಕೆ ಪಡೆದಿವೆ ಎಂದು ಮೂಲಗಳು ತಿಳಿಸಿವೆ. ಪಿಎಫ್‌ಐ ರಾಜ್ಯಾಧ್ಯಕ್ಷ ಸಿಪಿ ಮಹಮ್ಮದ್ ಬಶೀರ್, ರಾಷ್ಟ್ರೀಯ ಅಧ್ಯಕ್ಷ ಒಎಂಎ ಸಲಾಂ, ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್ ಎಲಮರಮ್ ಮತ್ತಿತರರು ಬಂಧನಕ್ಕೊಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ವಿವಿಧೆಡೆಯಿಂದ ಬಂಧನಕ್ಕೊಳಗಾಗಿದ್ದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರನ್ನು ಕೊಚ್ಚಿಯಲ್ಲಿರುವ ಎನ್‌ಐಎ ಕಚೇರಿಗೆ ಕರೆತರಲಾಗುವುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಪಿಎಫ್‌ಐ ಆವರಣದಲ್ಲಿ ದೇಶಾದ್ಯಂತ ನಡೆದ ದಾಳಿಗಳು ಇತ್ತೀಚಿನ ಉದಾಹರಣೆ ಎಂದು ಹಿರಿಯ ನಾಯಕ ಅಬ್ದುಲ್ ಸತಾರ್ ಕೋಯಿಕ್ಕೋಡ್​​ನಲ್ಲಿ ಆರೋಪಿಸಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಘಟನೆಯ ತ್ರಿಶೂರ್ ಮೂಲದ ನಾಯಕರೊಬ್ಬರ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ ತಿಳಿಸಿದ್ದಾರೆ.

ಇದನ್ನೂ ಓದಿ
ಪಿಎಫ್​ಐ, ಎಸ್​ಡಿಪಿಐ ಮೇಲೆ ಎನ್​ಐಎ ದಾಳಿಯ ಬೆನ್ನಿಗೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ, ಅಜಿತ್ ದೋವಲ್ ಭಾಗಿ
Breaking News: ದೇಶದ ವಿವಿಧೆಡೆ NIA, ED ನಡೆಸಿದ ದಾಳಿಯಲ್ಲಿ 106 PFI ಕಾರ್ಯಕರ್ತರ ಬಂಧನ
NIA Raid on PFI, SDPI: ದೇಶಾದ್ಯಂತ SDPI, PFI ನಾಯಕರ ಮನೆ ಕಚೇರಿ ಮೇಲೆ NIA ದಾಳಿ

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸಂವಿಧಾನವನ್ನು ನಂಬುವವರು ಮತ್ತು ಅದರಂತೆ ನಡೆದುಕೊಳ್ಳುವವರು ಆರ್‌ಎಸ್‌ಎಸ್ ಆಡಳಿತದ ಭಾರತದಲ್ಲಿ ತಮ್ಮ ವಿರುದ್ಧ ಇಂತಹ ಫ್ಯಾಸಿಸ್ಟ್ ನಡೆಯನ್ನು ನಿರೀಕ್ಷಿಸಬೇಕು. ಇಂತಹ ಕಾರ್ಯಗಳ ಮೂಲಕ ಕೇಂದ್ರವು ಸಾಕ್ಷಾತ್ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು, ದೇಶವನ್ನು ರಕ್ಷಿಸಲು ಇಂತಹ ಆಚರಣೆಗಳ ವಿರುದ್ಧ ಸಾರ್ವಜನಿಕ ಸಮಾಜ ಧ್ವನಿ ಎತ್ತಬೇಕಿದೆ ಎಂದರು. ಕೇಂದ್ರ ತನಿಖಾ ಸಂಸ್ಥೆಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳ ವಿರುದ್ಧ ಮಸಿ ಎರಚಲು ಯತ್ನಿಸುತ್ತಿದ್ದು, ರಾಷ್ಟ್ರೀಯ ನಾಯಕತ್ವದೊಂದಿಗೆ ಸಮಾಲೋಚಿಸಿ ಅಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ದಾಳಿಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿರುವ ಆ ದಾಖಲೆಗಳು ತನ್ನ ಪ್ರಚಾರಕ್ಕಾಗಿ ಸಂಘಟನೆಗಳು ಬಳಸಿದ ಸಾರ್ವಜನಿಕ ಸಂಪರ್ಕ ಸಾಮಗ್ರಿಗಳಾಗಿವೆ ಎಂದು ನಾಯಕರು ಹೇಳಿದ್ದಾರೆ.

Published On - 3:11 pm, Thu, 22 September 22