Adani Group: ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ; ಬ್ಯಾಂಕುಗಳಿಂದ ವಿವರ ಕೇಳಿದ ಆರ್​ಬಿಐ

|

Updated on: Feb 02, 2023 | 1:39 PM

Opposition Parties Attack Government: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸಿಜೆಐ ನೇಮಿತ ಸಮಿತಿಯೊಂದರಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ.

Adani Group: ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ; ಬ್ಯಾಂಕುಗಳಿಂದ ವಿವರ ಕೇಳಿದ ಆರ್​ಬಿಐ
ವಿಪಕ್ಷಗಳ ನಾಯಕರ ಸಭೆ
Follow us on

ನವದೆಹಲಿ: ಅದಾನಿ ಗ್ರೂಪ್​ನಿಂದ ಷೇರುಮೌಲ್ಯ ಹೆಚ್ಚಿಸಲು ವಂಚನೆಗಳಾಗಿವೆ ಎಂಬಂತೆ ಹಿಂಡನ್ಬರ್ಗ್ ರಿಸರ್ಚ್ ವರದಿ (Hindenburg Research Report) ಮಾಡಿದ ಬೆನ್ನಲ್ಲೇ ಭಾರತದಲ್ಲಿ ಷೇರುಪೇಟೆ ಅಲುಗಾಡಲು ಆರಂಭವಾಗಿದೆ. ಜೊತೆಗೆ, ನರೇಂದ್ರ ಮೋದಿ ನೇತೃತ್ವದ ಆಳಿತಾರೂಢ ಬಿಜೆಪಿಯನ್ನು ಅಲುಗಾಡಿಸಲು ವಿಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಇದೀಗ ಸಂಸತ್​ನಲ್ಲಿ ಅದಾನಿ ಗ್ರೂಪ್ ಪ್ರಕರಣವೇ (Adani Group) ಜೋರು ಸದ್ದು ಮಾಡುತ್ತಿದೆ. ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ– JPC- Joint Parliamentary Committee) ಅಥವಾ ಸಿಜೆಐ ನೇಮಿತ ಸಮಿತಿಯೊಂದರಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ.

ಸಂಸತ್​ನಲ್ಲಿ ಅದಾನಿ ಗ್ರೂಪ್ ವಿಚಾರವನ್ನು ಪ್ರಸ್ತಾಪಿಸಿ ಚರ್ಚಿಸಲು ವಿಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ, ಸರ್ಕಾರದಿಂದ ಅದಕ್ಕೆ ಅವಕಾಶ ಸಿಗುತ್ತಿಲ್ಲ ಎಂಬುದು ಕಾಂಗ್ರೆಸ್ ಮತ್ತಿತರ ಪಕ್ಷಗಳ ಆಕ್ರೋಶವಾಗಿದೆ. ಸಂಸದೀಯ ಅಧಿವೇಶನಕ್ಕೆ ಮುನ್ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾಜವಾದಿ ಪಕ್ಷ, ಎನ್​ಸಿಪಿ, ಶಿವಸೇನೆ, ಡಿಎಂಕೆ, ಟಿಎಂಸಿ, ಎಎಪಿ, ಸಿಪಿಐಎಂ ಮೊದಲಾದ ವಿಪಕ್ಷಗಳ ನಾಯಕರ ಸಭೆ ನಡೆದು ಅದಾನಿ ವಿಚಾರವನ್ನು ಚರ್ಚೆಗೆ ತರಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಅವಕಾಶ ಕಲ್ಪಿಸದೇ ಹೋದ್ದರಿಂದ ಗುರುವಾರದ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರು ಗಲಾಟೆ ನಡೆಸಿದ್ದಾರೆ.

ಇದನ್ನೂ ಓದಿ: ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಹುತಾತ್ಮರಾಗಿಲ್ಲ ಅದೊಂದು ಅಪಘಾತವಷ್ಟೇ ಎಂದ ಬಿಜೆಪಿ ಸಚಿವ

ಎಸ್​ಬಿಐ ಮತ್ತು ಎಲ್​ಐಸಿಯಲ್ಲಿರುವ ಬಹಳಷ್ಟು ಸಾರ್ವಜನಿಕರ ಹಣವು ಅದಾನಿ ಗ್ರೂಪ್​ಗಳಲ್ಲಿ ಹೂಡಿಕೆಯಾಗಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೋಟ್ಯಂತರ ಜನರ ಹಣವು ಎಲ್​ಐಸಿ ಮತ್ತು ಎಸ್​ಬಿಐನಂತರ ಸಂಸ್ಥೆಗಳ ಮೂಲಕ ಕೆಲ ಆಯ್ದ ಕಂಪನಿಗಳಿಗೆ ಸಂದಾಯವಾಗಿದೆ. ಈ ಕಂಪನಿ (ಅದಾನಿ ಎಂಟರ್ಪ್ರೈಸಸ್) ಬಗ್ಗೆ ಹಿಂಡನ್ಬರ್ಗ್ ರೀಸರ್ಚ್ ವರದಿಯಲ್ಲಿ ಎತ್ತಿತೋರಿಸಲಾಗಿದೆ. ಅದಾದ ಬಳಿಕ ಆ ಕಂಪನಿಯ ಷೇರುಗಳು ಬಿದ್ದಿವೆ. ಈ ಕಂಪನಿಯ ಮಾಲೀಕ ಯಾರು ಎಂದು ನಿಮಗೆ ಗೊತ್ತು. ಇಂಥ ಕಂಪನಿಗಳಿಗೆ ಸರ್ಕಾರ ಯಾಕೆ ಹಣ ಕೊಡುತ್ತಿದೆ? ಎಲ್​ಐಸಿ, ಎಸ್​ಬಿಐ ಮೊದಲಾದ ಸಂಸ್ಥೆಗಳು ಈ ಕಂಪನಿಗೆ ಹಣ ಕೊಟ್ಟಿವೆ. ಇದರ ತನಿಖೆ ಆಗಬೇಕು. ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಅಥವಾ ಭಾರತೀಯ ಮುಖ್ಯ ನ್ಯಾಯಮೂರ್ತಿ ಮಾರ್ಗದರ್ಶನದಲ್ಲಿ ಸಮಿತಿ ರಚನೆಯಾಗಿ ಅದರಿಂದಲಾದರೂ ತನಿಖೆ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಬ್ಯಾಂಕ್​ಗಳಿಂದ ವಿವರ ಕೋರಿದ ಆರ್​ಬಿಐ

ಅದಾನಿ ಗ್ರೂಪ್​ನ ವಿವಿಧ ಕಂಪನಿಗಳಿಗೆ ಯಾವ್ಯಾವ ಬ್ಯಾಂಕುಗಳು ಸಾಲ ನೀಡಿವೆ ಎಂದು ಆರ್​ಬಿಐ ಮಾಹಿತಿ ಕಲೆಹಾಕುತ್ತಿದೆ. ಈ ಸಂಬಂಧ ಸ್ಥಳೀಯ ಬ್ಯಾಂಕುಗಳಿಂದ ಆರ್​ಬಿಐ ವಿವರ ಕೋರುತ್ತಿದೆ.

ಇದನ್ನೂ ಓದಿ: Share Market: ಭಾರತದ ಷೇರುಪೇಟೆ ಗುರುವಾರವೂ ಕುಸಿತ; ಅದಾನಿ ಷೇರು ಇನ್ನಷ್ಟು ಇಳಿಕೆ

ಕ್ರೆಡಿಟ್ ಸ್ಯೂಸ್, ಸಿಟಿ ಗ್ರೂಪ್ ಕಂಪನಿಗಳು ಅದಾನಿ ಗ್ರೂಪ್​ನಿಂದ ಬಾಂಡ್​ಗಳನ್ನು ಅಡವಾಗಿ ಪಡೆದು ಸಾಲ ನೀಡುವುದನ್ನು ನಿಲ್ಲಿಸಿವೆ. ಈ ಬೆಳವಣಿಗೆಯಿಂದಾಗಿ ಆರ್​ಬಿಐ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಆರ್​ಬಿಐನಿಂದ ಈ ಬಗ್ಗೆ ಮಾಧ್ಯಮಗಳಿಗೆ ಅಧಿಕೃತವಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ.

ನಿನ್ನೆ ಅದಾನಿ ಎಂಟರ್ಪ್ರೈಸಸ್ ಸಂಸ್ಥೆ ತನ್ನ ಎಫ್​ಪಿಒ ಯೋಜನೆಯನ್ನು ರದ್ದು ಮಾಡಿತ್ತು. ಎಫ್​ಪಿಒದಲ್ಲಿ ಭರ್ತಿ ಹೂಡಿಕೆಯಾಗಿದ್ದ 20 ಸಾವಿರ ಕೋಟಿ ರೂ ಹಣವನ್ನು ಜನರಿಗೆ ಮರಳಿಸಲೂ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಅದಾನಿ ಗ್ರೂಪ್​ನ ಕಂಪನಿಗಳ ಷೇರುಗಳು ಕುಸಿಯುವುದು ಮುಂದುವರಿದಿದೆ. ಹಿಂಡನ್ಬರ್ಗ್ ರಿಸರ್ಚ್​ನ ವರದಿ ಬಿಡುಗಡೆ ಆದ ಬಳಿಕ ಅದಾನಿ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಧುಮುಕುತ್ತಿವೆ. ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಂಡ ಅದಾನಿ ಗ್ರೂಪ್​ನ ಕಂಪನಿಗಳಲ್ಲಿ ದೊಡ್ಡ ರಿಟರ್ನ್ಸ್ ನಿರೀಕ್ಷೆಯಲ್ಲಿ ಹಣ ಹೂಡಿಕೆ ಮಾಡಿದ್ದವರು ಈಗ ಆತಂಕಗೊಂಡಿದ್ದಾರೆ.