ಅರುಣ್ ಗೋಯಲ್ ರಾಜೀನಾಮೆ ಬೆನ್ನಲ್ಲೇ ನೂತನ ಚುನಾವಣಾ ಆಯುಕ್ತರ ಆಯ್ಕೆಗೆ ಈ ವಾರದಲ್ಲೇ ಸಭೆ ಸಾಧ್ಯತೆ
Govt Searching for New Election Commissioner: ಚುನಾವಣಾ ಆಯುಕ್ತ ಅರುಣ್ ಗೋಯಲ್ ಸ್ಥಾನಕ್ಕೆ ನೇಮಕಾತಿ ಮಾಡಲು ಈ ವಾರದಲ್ಲಿ ಆಯ್ಕೆ ಸಮಿತಿಯ ಸಭೆ ಕರೆಯಲು ಸರ್ಕಾರ ನಿಶ್ಚಯಿಸಿದೆ ಎಂದು ವರದಿಗಳು ಹೇಳುತ್ತಿವೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಅರುಣ್ ಗೋಯಲ್ ರಾಜೀನಾಮೆ ಕೊಟ್ಟಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಫೆಬ್ರುವರಿಯಲ್ಲಿ ಅನುಪ್ ಪಾಂಡೆ ಕೂಡ ನಿವೃತ್ತರಾಗಿದ್ದರು. ಒಂದೇ ತಿಂಗಳ ಅಂತರದಲ್ಲಿ ಇಬ್ಬರು ಚುನಾವಣಾ ಆಯುಕ್ತರು ನಿವೃತ್ತಿ ಘೋಷಣೆ ಮಾಡಿದಂತಾಗಿದೆ.
ನವದೆಹಲಿ, ಮಾರ್ಚ್ 10: ಒಂದು ತಿಂಗಳ ಅಂತರದಲ್ಲಿ ಇಬ್ಬರು ಚುನಾವಣಾ ಆಯುಕ್ತರು ರಾಜೀನಾಮೆ ನೀಡಿರುವುದು ಭಾರತೀಯ ಚುನಾವಣಾ ಆಯೋಗದಲ್ಲಿ ನಿರ್ವಾತ ಸ್ಥಿತಿ ತಂದಿದೆ. ಈಗ ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ (CEC Rajeev Kumar) ಮಾತ್ರವೇ ಇರುವುದು. ಚುನಾವಣಾ ಆಯುಕ್ತರೊಬ್ಬರನ್ನು ಶೀಘ್ರದಲ್ಲೇ ನೇಮಕಾತಿ ಮಾಡಲು ಸರ್ಕಾರ ಯತ್ನಿಸುತ್ತಿದೆ. ಮುಂದಿನ ಒಂದು ವಾರದೊಳಗೆ ಆಯ್ಕೆ ಸಮಿತಿ ಸಭೆ ನಡೆಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೆ ತಯಾರಿಗಳು ನಡೆಯಬೇಕಾದ ಸಂದರ್ಭದಲ್ಲೇ ಇಬ್ಬರು ಆಯುಕ್ತರು ಹೊರಹೋಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಸರ್ಕಾರದ ಮೇಲೆ ವಿಪಕ್ಷಗಳು ಹರಿಹಾಯಲು ಅವಕಾಶ ಒದಗಿಸಿದೆ.
ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯಲ್ ಮಾರ್ಚ್ 9, ಶನಿವಾರ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಫೆಬ್ರುವರಿ 14ರಂದು ಮತ್ತೊಬ್ಬ ಆಯುಕ್ತ ಅನೂಪ್ ಚಂದ್ರ ಪಾಂಡೆ ಕೂಡ ರಾಜೀನಾಮೆ ಕೊಟ್ಟಿದ್ದರು. ಆದರೆ, ಅರುಣ್ ಗೋಯಲ್ ನಿವೃತ್ತಿ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಅವರು ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದರೆ 2027ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗುವ ಅವಕಾಶ ಇತ್ತು. ಈಗಿರುವ ಮುಖ್ಯ ಆಯುಕ್ತ ಅಥವಾ ಸಿಇಸಿ ರಾಜೀವ್ ಕುಮಾರ್ 2027ರಲ್ಲಿ ನಿವೃತ್ತರಾಗುತ್ತಾರೆ. ಅವರ ನಂತರದ ಸ್ಥಾನ ಅರುಣ್ ಗೋಯಲ್ಗೆ ದಕ್ಕುತ್ತಿತ್ತು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜೀನಾಮೆ ನೀಡಿದ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್
ಅರುಣ್ ಗೋಯಲ್ ಅವರು ಮಾರ್ಚ್ 12, ಮಂಗಳವಾರದಂದು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿ ಅಲ್ಲಿ ಚುನಾವಣೆ ನಡೆಸಲು ವಾತಾವರಣ ಹೇಗಿದೆ ಎಂದು ಪರಿಶೀಲಿಸಬೇಕಿತ್ತು. ಸೆಪ್ಟೆಂಬರ್ 30ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಆಗಬೇಕೆಂದು ಸುಪ್ರೀಂಕೋರ್ಟ್ ಡೆಡ್ಲೈನ್ ಕೊಟ್ಟಿದೆ. ಆದರೆ, ಈಗ ಲೋಕಸಭೆ ಚುನಾವಣೆ ಇರುವುದರಿಂದ ಲೋಕಸಭೆ ಮತ್ತು ವಿಧಾನಸಭೆ ಎರಡನ್ನೂ ಒಟ್ಟಿಗೆ ನಡೆಸಲು ಸಾಧ್ಯವಾ ಎಂಬುದನ್ನು ಚುನಾವಣಾ ಆಯೋಗ ಅವಲೋಕಿಸುತ್ತಿದೆ. ಈ ನಿಮಿತ್ತ, ಅರುಣ್ ಗೋಯಲ್ ಅವರು ಕಾಶ್ಮೀರ ಕಣಿವೆಗೆ ಹೋಗಿ ಪರಿಸ್ಥಿತಿ ತಿಳಿದುಕೊಂಡು ಬರಬೇಕಿತ್ತು. ಅದಕ್ಕೆ ಮುನ್ನವೇ ಅವರು ಆಯೋಗದಿಂದ ಹೊರಹೋಗಿದ್ದಾರೆ.
ಕುತೂಹಲ ಎಂದರೆ, ಇತ್ತೀಚೆಗೆ ಅವರು ಪಶ್ಚಿಮ ಬಂಗಾಳಕ್ಕೂ ಹೋಗಿ ಪರಿಸ್ಥಿತಿ ಅವಲೋಕಿಸಿಕೊಂಡು ಬಂದಿದ್ದರು. ಚುನಾವಣಾ ಆಯುಕ್ತರು ಒಂದು ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಅಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವುದು ವಾಡಿಕೆ. ಅದರಂತೆ ಐದು ದಿನಗಳ ಹಿಂದೆ ಗೋಯಲ್ ಅವರು ಕೋಲ್ಕತಾದಲ್ಲಿ ಸುದ್ದಿಗೋಷ್ಠಿ ನಡೆಸಬೇಕಿತ್ತು. ಅವರ ಬದಲು ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾತನಾಡಿದರು. ಆರೋಗ್ಯ ಕಾರಣಕ್ಕೆ ಗೋಯಲ್ ಪತ್ರಿಕಾಗೋಷ್ಠಿಗೆ ಬರಲಿಲ್ಲ ಎಂದು ರಾಜೀವ್ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ರಾಮನವಮಿ ದಿನ ಸಾರ್ವತ್ರಿಕ ರಜೆ ಎಂದು ಘೋಷಣೆ; ಇದ್ಯಾವ ನಾಟಕ ಎಂದು ಬಿಜೆಪಿ ವ್ಯಂಗ್ಯ
ಚುನಾವಣಾ ಆಯುಕ್ತರಿಲ್ಲದೇ ಆಯೋಗ ಕಾರ್ಯನಿರ್ವಹಿಸಬಹುದೇ?
ಸದ್ಯ ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾತ್ರವೇ ಇರುವುದು. ಸಂವಿಧಾನದಲ್ಲಿ ಒಬ್ಬರೇ ಸದಸ್ಯರಿದ್ದರೂ ಆಯೋಗ ಕಾರ್ಯನಿರ್ವಹಿಸಬಹುದು. ಆದರೆ, ಕೆಲ ನಿರ್ಧಾರಗಳನ್ನು ತಳೆಯಲು ಆಯೋಗದಲ್ಲಿ ಮೂರು ಸದಸ್ಯರಿರುವುದು ಉತ್ತಮ ಎನ್ನುವ ಅಭಿಪ್ರಾಯ ಇದೆ. ಈಗ ಸರ್ಕಾರ ಒಬ್ಬ ಚುನಾವಣಾ ಆಯುಕ್ತರನ್ನು ಸೇರ್ಪಡೆ ಮಾಡಲು ಮುಂದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ