ಅಕ್ರಮ ಆಸ್ತಿ ಗಳಿಗೆ ಕೇಸ್​ನಲ್ಲಿ 4 ವರ್ಷ ಶಿಕ್ಷೆ ಅನುಭವಿಸಿದ ಶಶಿಕಲಾಗೆ ಜೈಲುವಾಸ ಅಂತ್ಯ, ಕೊರೊನಾ ಚಿಕಿತ್ಸೆ ಬಳಿಕ ರಿಲೀಸ್ ಆಗಲಿದ್ದಾರಾ ಚಿನ್ನಮ್ಮ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:06 PM

ಇನ್ನೇನು 4 ವರ್ಷಗಳ ವನವಾಸ ಮುಗೀತು, ಭರ್ಜರಿ ಮೆರವಣಿಗೆಯಲ್ಲಿ‌ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ‌ಕೊಡೋ ಮೂಲಕ ಎದುರಾಳಿಗಳಿಗೆ ಟಕ್ಕರ್ ಕೊಡಬೇಕು‌ ಎಂಬ ಚಿನ್ನಮ್ಮನ ಪ್ಲಾನ್ ಠುಸ್ ಆಗಿದ್ದು, ನಾಲ್ಕು ವರ್ಷಗಳಿಂದ ಕ್ಷೇಮವಾಗಿದ್ದ ಚಿನ್ನಮ್ಮನಿಗೆ ಕೊನೇ ಕ್ಷಣದಲ್ಲಿ ಆರೋಗ್ಯ ಕೈಕೊಟ್ಟಿದೆ‌. ಯೋಗ, ಪೂಜೆಯಲ್ಲೇ ನಿರತರಾಗಿದ್ದ ಶಶಿಕಲಾ‌ರಿಗೆ ಕೊರೊನಾ ಅವಾಂತರ ತಂದಿಟ್ಟಿದೆ. ಹೀಗಾಗಿ ಅಂದುಕೊಂಡಿದ್ದು ಒಂದು. ಚಿನ್ನಮ್ಮನ ಬದುಕಲ್ಲಿ ಆಗ್ತಿರೋದು ಮತ್ತೊಂದು ಎಂಬಂತಾಗಿದೆ.

ಅಕ್ರಮ ಆಸ್ತಿ ಗಳಿಗೆ ಕೇಸ್​ನಲ್ಲಿ 4 ವರ್ಷ ಶಿಕ್ಷೆ ಅನುಭವಿಸಿದ ಶಶಿಕಲಾಗೆ ಜೈಲುವಾಸ ಅಂತ್ಯ, ಕೊರೊನಾ ಚಿಕಿತ್ಸೆ ಬಳಿಕ ರಿಲೀಸ್ ಆಗಲಿದ್ದಾರಾ ಚಿನ್ನಮ್ಮ?
ಶಶಿಕಲಾ
Follow us on

ಬೆಂಗಳೂರು: ದ್ರಾವಿಡ ನೆಲದಲ್ಲಿ ಮುಖ್ಯಮಂತ್ರಿಯಾಗಬೇಕು ಅನ್ನೋ ಕನಸು ಕಾಣುತ್ತಿದ್ದ ಶಶಿಕಲಾ ನಟರಾಜನ್ ಅವರ ಎಲ್ಲಾ ಪ್ಲಾನ್​ಗಳು ನಾಲ್ಕು ವರ್ಷದ ಹಿಂದೆಯೇ ಉಲ್ಟಾ ಆಗಿದ್ವು. ಮುಖ್ಯಮಂತ್ರಿ ಪಟ್ಟದಲ್ಲಿ ಕುಳಿತುಕೊಳ್ಳೋಕೆ ತಯಾರಿ ನಡೆಸಿದ್ದವರು, ಆದ್ರೆ ಅಕ್ರಮ ಆಸ್ತಿ ಗಳಿಕೆ ಕೇಸ್‌ನಲ್ಲಿ ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇದೀಗ ಶಶಿಕಲಾಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಆದ್ರೆ ಅದ್ಧೂರಿಯಾಗಿ ಬಿಡುಗಡೆಯಾಗ್ಬೇಕು ಅನ್ನೋ ಕನಸು ಕಂಡಿದ್ದ ಶಶಿಕಲಾಗೆ ಕೊರೊನಾ ಕಂಟಕ ಎದುರಾಗಿದೆ.

ಶಶಿಕಲಾರ ಅದ್ಧೂರಿ ಬಿಡುಗಡೆ ಫ್ಲ್ಯಾನ್‌ಗೆ ಬ್ರೇಕ್
ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಶಶಿಕಲಾ ಬಿಡುಗಡೆಯಾಗ್ತಿದ್ದಂತೆ ಭರ್ಜರಿ ಸ್ವಾಗತ ಕೋರಿ ಬೃಹತ್ ಮೆರವಣಿಗೆ ಮೂಲಕ ಕರೆದೊಯ್ಯಲು ಬೆಂಬಲಿಗರು ಪ್ಲ್ಯಾನ್ ಮಾಡಿದ್ದರು. ಆದ್ರೆ ಶಶಿಕಲಾ ಹಾಗೂ ಅವರ ಬೆಂಬಲಿಗರ ಕನಸಿಗೆ ಕೊರೊನಾ ತಣ್ಣೀರೆರಚಿದೆ. ಯಾಕಂದ್ರೆ ಕೊರೊನಾ ಅಟ್ಯಾಕ್ ಆಗಿ, ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಶಶಿಕಲಾ ಕೊವಿಡ್ 19 ಪ್ರೋಟೋಕಾಲ್ ಪ್ರಕಾರ 14 ದಿನ ಯಾರ ಸಂಪರ್ಕದಲ್ಲಿಯೂ ಇರಬಾರದು. ಒಂದು ವಾರ ಹೋಮ್ ಕ್ವಾರಂಟೈನ್ ಕಡ್ಡಾಯ ಆಗಿರುತ್ತೆ. ಒಂದು ವೇಳೆ ಇಂದೇ ಬಿಡುಗಡೆಯಾದ್ರೂ ಶಶಿಕಲಾ ತಮ್ಮೂರಿಗೆ ಹೋಗುವಂತಿಲ್ಲ. ವೈದ್ಯರು ಡಿಸ್ಚಾರ್ಜ್ ಮಾಡಿದ ಬಳಿಕ ಌಂಬುಲೆನ್ಸ್‌ನಲ್ಲೇ ತೆರಳಿ ಹೋಮ್ ಕ್ವಾರಂಟೈನ್ ಆಗ್ಬೇಕಿದೆ.

ಚಿಕಿತ್ಸೆ ಮುಗಿದ ಬಳಿಕ ರಿಲೀಸ್ ಆಗ್ತಾರಾ ಶಶಿಕಲಾ?
ಅಂದಹಾಗೆ ಶಶಿಕಲಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಯಲ್ಲಿ ಜೈಲಿನ ಕೆಲ ಪ್ರಕ್ರಿಯೆಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದ್ದು ಜೈಲಾಧಿಕಾರಿಗಳು ಗುಣಮುಖರಾದ ನಂತರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿತ್ತು. ಆದ್ರೆ ಶಶಿಕಲಾ ಪರ ವಕೀಲರು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಜೈಲಿನಿಂದ ಹೊರ ಕರೆತರಲು ಮುಂದಾಗಿದ್ದಾರೆ. ಹೀಗಾಗಿ ಜೈಲಧಿಕಾರಿಗಳ ಸಮ್ಮುಖದಲ್ಲಿ ಆಸ್ಪತ್ರೆಗೆ ತೆರಳಿ ಶಶಿಕಲಾ ಸಹಿ ಪಡೆದು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆಯಿದೆ.

ಅಕ್ರಮ ಆಸ್ತಿಗಳಿಕೆಯಡಿ ನಾಲ್ಕು ವರ್ಷ ಜೈಲು ಶಿಕ್ಷೆ
ತಮಿಳುನಾಡು ಸಿಎಂ ಹುದ್ದೆಯ ಕನಸು ಕಾಣ್ತಿದ್ದ ಶಶಿಕಲಾರ ರಾಜಕೀಯ ಲೆಕ್ಕಾಚಾರವನ್ನು 2017ರ ಫೆಬ್ರವರಿ 15ರಂದು ಸುಪ್ರೀಂಕೋರ್ಟ್ ಬುಡಮೇಲು ಮಾಡಿತ್ತು. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅಪರಾಧಿಗಳೆಂಬ ವಿಶೇಷ ಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಇದೇ ವೇಳೆ ಜೈಲು ಶಿಕ್ಷೆ ವಿಧಿಸಲು ಸುಪ್ರೀಂಕೋರ್ಟ್ ಏಳು ಕಾರಣಗಳನ್ನು ನೀಡಿತ್ತು.

ಕಾರಣ ನಂಬರ್ 1
ಜಯಾ ಪಬ್ಲಿಕೇಷನ್ ನಲ್ಲಿ ಜಯಲಲಿತಾ ಪಾಲುದಾರರಾಗಿದ್ದರು. ಜಯಲಲಿತಾರಿಂದ ಜಿಪಿಎ ಅರ್ಥಾತ್ ಅಧಿಕಾರ ಪತ್ರವನ್ನು ಶಶಿಕಲಾ ನಟರಾಜನ್ ಪಡೆದಿದ್ದರು. ಜಯಲಲಿತಾ ಜಯಾ ಪಬ್ಲಿಕೇಷನ್ ನಿರ್ವಹಣೆಯನ್ನು ಜಿಪಿಎ ಮೂಲಕ ಶಶಿಕಲಾರಿಗೆ ನೀಡುವ ಮೂಲಕ ಕಾನೂನು ಸಂಕಷ್ಟಗಳಿಂದ ಪಾರಾಗಲು ಯತ್ನಿಸಲಾಗಿತ್ತು. ಜಯಲಲಿತಾ ಹಣದ ನಿರ್ವಹಣೆ ಯನ್ನು ಜಿಪಿಎ ಮೂಲಕವೇ ಶಶಿಕಲಾ ಮಾಡುತಿದ್ದರು. ಈ ಜಿಪಿಎ ಇವರ ನಡುವಿನ ವ್ಯವಹಾರಕ್ಕೆ ಸಾಕ್ಷಿಯಾಗಿತ್ತು.

ಕಾರಣ ನಂಬರ್ 2
ಜಯಲಲಿತಾ ಅಧಿಕಾರದಲ್ಲಿದ್ದ ಆ 5 ವರ್ಷಗಳ ಅವಧಿಯಲ್ಲಿ 18 ಹೊಸ ಕಂಪನಿಗಳನ್ನು ಶಶಿಕಲಾ ಮತ್ತು ಗ್ಯಾಂಗ್ ಆರಂಭಿಸಿದ್ದರು. ಈ ಪೈಕಿ ಒಂದೇ ದಿನ 10 ಕಂಪನಿಗಳ ನೋಂದಣಿ ಮಾಡಲಾಗಿತ್ತು. ಅಪರಾಧಿಗಳ ಒಳಸಂಚಿಗೆ ಇದೇ ಸಾಕ್ಷಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆಸ್ತಿ ಖರೀದಿ ಬಿಟ್ಟು ಈ ಕಂಪನಿಗಳು ಬೇರೆ ಕೆಲಸ ಮಾಡಿರಲಿಲ್ಲ. ಜಯಲಲಿತಾ, ಶಶಿಕಲಾಗೆ ಸೇರಿದ ‘ನಮಧು MGR​’ ‘ಜಯಾ ಪಬ್ಲಿಕೇಷನ್ಸ್​’ ಮೂಲಕ ಸಂಗ್ರಹಿಸಲಾದ ಅಕ್ರಮ ಹಣದಿಂದಲೇ ಇತರೆ 18 ಕಂಪನಿಗಳು ಆಸ್ತಿ ಖರೀದಿಸಿದ್ದವು. ಹೀಗಾಗಿ ಇವರ ನಡುವಿನ ಒಳಸಂಚಿಗೆ ಇದು ಸಾಕ್ಷಿಯಾಗಿತ್ತು.

ಕಾರಣ ನಂಬರ್ – 3
ಇನ್ನೂ ವಿಶೇಷ ಅಂದ್ರೆ ಎಲ್ಲಾ ಕಂಪನಿಗಳಿಗೆ ಜಯಲಲಿತಾರ ಮನೆಯೇ ವಿಳಾಸವಾಗಿತ್ತು. ಚೆನ್ನೈನ ಪೋಯಸ್​ ಗಾರ್ಡನ್​​ನಲ್ಲಿರುವ ನಿವಾಸದ ವಿಳಾಸವನ್ನೇ ಕಂಪನಿಗಳಿಗೆ ನೀಡಲಾಗಿತ್ತು. ರಕ್ತ ಸಂಬಂಧಿಯಲ್ಲದಿದ್ದರೂ ಜಯಲಲಿತಾ ಜತೆಯಲ್ಲೇ ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ವಾಸ ಮಾಡುತಿದ್ದರು. ಹೀಗಿರುವಾಗ ಅಪರಾಧಿಗಳು ಅಮಾಯಕರೆಂದು ನಂಬಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಕಾರಣ ನಂಬರ್ – 4
ಜೆ.ಜಯಲಲಿತಾ ಜತೆ ಸೇರಿ ಅಕ್ರಮ ಆಸ್ತಿ ಸಂಪಾದನೆಗೆ ಶಶಿಕಲಾ ಸಂಚು ನಡೆಸಿದ್ದರು. ಇತರೆ ಅಪರಾಧಿಗಳೊಂದಿಗೆ ಸೇರಿ ಒಳಸಂಚು ನಡೆಸಿದ್ದ ಶಶಿಕಲಾ, ಜಯಾ ಹಣದಿಂದಲೇ ಸಾವಿರಾರು ಎಕರೆ ಭೂಮಿ ಖರೀದಿಸಿದ್ದರು. ವಿವಿಧ ಕಂಪನಿಗಳು, ವೈಯಕ್ತಿಕ ಹೆಸರಿನಲ್ಲಿ ಜಮೀನು ಖರೀದಿಸಿದ್ದರು. ಜಯಲಲಿತಾ ಶಶಿಕಲಾರನ್ನು ಇರಿಸಿಕೊಂಡಿದ್ದಕ್ಕೆ ಕಾರಣವಿಲ್ಲ, ಮಾನವೀಯ ಅಥವಾ ಸಾಮಾಜಿಕ ಕಾರಣವಾಗಲೀ ಇಲ್ಲ. ಜಯಲಲಿತಾ ಆಸ್ತಿ ಹಂಚಿಕೊಳ್ಳಲೆಂದೇ ಇವರೆಲ್ಲರೂ ಜೊತೆಯಲ್ಲಿ ವಾಸವಾಗಿದ್ದರು ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು.

ಕಾರಣ ನಂಬರ್ – 5
ಜಯಲಲಿತಾ ಶಶಿ ಎಂಟರ್​ಪ್ರೈಸಸ್​​ಗೆ 1 ಕೋಟಿ ಮುಂಗಡ ನೀಡಿದ್ದರು. ಷೇರು ಬಂಡವಾಳದ ರೂಪದಲ್ಲಿ 1 ಕೋಟಿ ಹಣ ಹೂಡಿಕೆ ಮಾಡಿದ್ದರು. ಈ ಸತ್ಯವನ್ನು ಐಟಿ ಅಧಿಕಾರಿಗಳ ಮುಂದೆ ಜೆ.ಜಯಲಲಿತಾ ಪ್ರತಿನಿಧಿ ಒಪ್ಪಿಕೊಂಡಿದ್ದರು. ಹೀಗಿರುವಾಗ ಶಶಿ ಎಂಟರ್​ಪ್ರೈಸಸ್​ ಜತೆ ಜಯಲಲಿತಾಗೆ ಸಂಬಂಧವಿಲ್ಲ ಎನ್ನಲು ಸಾಧ್ಯವಿಲ್ಲ.

ಕಾರಣ ನಂಬರ್ – 6
ಜಯಲಲಿತಾ ಗಳಿಸಿದ ಅಕ್ರಮ ಹಣ ವರ್ಗಾವಣೆಗೆ ಅಪರಾಧಿಗಳು ಸಂಚು ನಡೆಸಿದ್ದರು. ಅಕ್ರಮ ಹಣವನ್ನು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಒಬ್ಬರ ಖಾತೆಯಿಂದ ಮತ್ತೊಬ್ಬರ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಈ ಹಣದಿಂದಲೇ ಅಪರಾಧಿಗಳು ಅಕ್ರಮವಾಗಿ ಆಸ್ತಿ ಗಳಿಸಿದ್ದರು. ಅಪರಾಧಿಗಳು ಒಳಸಂಚಿನಲ್ಲಿ ಭಾಗಿಯಾಗಿದ್ದಕ್ಕೆ ಇದು ಸಾಕ್ಷಿ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಕಾರಣ ನಂಬರ್ – 7
ಅಕ್ರಮ ಸಂಪಾದನೆಯ ಹಣದಿಂದ ಆಸ್ತಿಗಳಿಸುವ ಅಪರಾಧಿಗಳ ಒಳಸಂಚಿಗೆ ಸರ್ಕಾರಿ ಅಧಿಕಾರಿಗಳು ಸಾಕ್ಷಿ ನುಡಿದಿದ್ದಾರೆ. ನಾರ್ಥ್​ ಬೀಚ್​ನ ಸಬ್​ರಿಜಿಸ್ಟ್ರಾರ್​ ಹಾಗೂ ತೋಟಗಾರಿಕೆ ಅಧಿಕಾರಿ ರಾಧಾಕೃಷ್ಣನ್​​ ಕೂಡಾ ಸಾಕ್ಷ್ಯ ನುಡಿದಿದ್ದಾರೆ. ಈ ಸಾಕ್ಷ್ಯ ಅಪರಾಧಿಗಳ ಒಳಸಂಚನ್ನು ಸಾಬೀತು ಪಡಿಸಿದೆ.

ಅಂದು ಸುಪ್ರೀಂಕೋರ್ಟ್ ಈ ಏಳೂ ಕಾರಣಗಳನ್ನು ನೀಡುವ ಮೂಲಕ ಭ್ರಷ್ಟರ ವಿರುದ್ದ ಕಾನೂನಿದೆ ಎಂದು ಸಾರಿತ್ತು. 4 ವರ್ಷ ಸೆರೆವಾಸ ಹಾಗೂ 10ಕೋಟಿ ದಂಡ ವಿಧಿಸಿತ್ತು. ಇದ್ರ ಜೊತೆಗೆ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆದೇಶಿಸಿತ್ತು. ಇದೀಗ ಶಶಿಕಲಾ ನಟರಾಜನ್ ಶಿಕ್ಷೆ ಅನುಭವಿಸಿ, 10 ಕೋಟಿ ರೂಪಾಯಿ ದಂಡ ಕಟ್ಟಿ, ಜೈಲಿನಿಂದ ಹೊರಬರಲು ಸಜ್ಜಾಗಿದ್ದಾರೆ. ಪರಪ್ಪನ ಅಗ್ರಹಾರದ ಜರ್ನಿ ಮುಗಿಸಿರುವ ಶಶಿಕಲಾ ಇದೀಗ ಚೆನ್ನೈನ ಪೋಯಸ್ ಗಾರ್ಡನ್‌ಗೆ ಹಿಂತಿರುಗಲು ಕ್ಷಣಗಣನೆ ಆರಂಭವಾಗಿದೆ. ಆದ್ರೆ ಭರ್ಜರಿ ಸ್ವಾಗತ.. ಅದ್ಧೂರಿ ಮೆರವಣಿಗೆ ಕೊರೊನಾ ಬ್ರೇಕ್ ಹಾಕಿದೆ.

ಶಶಿಕಲಾಗೆ ಕೊರೊನಾ ಹಿನ್ನೆಲೆ: ಗೆಳತಿ ಇಳವರಸಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್

Published On - 7:32 am, Wed, 27 January 21