ನವದೆಹಲಿ: ಭಾರತದ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಗ್ನಿಪಥ್ (Agnipath) ಎಂಬ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಭಾರತೀಯ ಸೇನೆಯ 3 ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ-ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿಯೇ ಈ ‘ಅಗ್ನಿಪಥ್’ ಯೋಜನೆ. ಈ ಅಗ್ನಿಪಥ್ ಯೋಜನೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳೂ ನಡೆಯುತ್ತಿದೆ. ಹೀಗಾಗಿ, ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶವೇನು? ಇದರ ಬಗ್ಗೆ ಹರಿದಾಡುತ್ತಿರುವ ವದಂತಿಗಳೇನು? ಇದರಿಂದ ಯಾರಿಗೆಲ್ಲ ಉಪಯೋಗವಾಗಲಿದೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಸ್ಪಷ್ಟನೆ ಇಲ್ಲಿದೆ.
ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೂನ್ 14ಕ್ಕೆ ಉದ್ಘಾಟನೆ ಮಾಡಿದ್ದರು. ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆಯಾಗಿದ್ದು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ 46,000 ಸೈನಿಕರನ್ನು ಸೇರಿಸಿಕೊಳ್ಳುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಅಗ್ನಿಪಥ್ ಅಥವಾ ಅಗ್ನಿಪತ್ ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವ ಭಾರತೀಯ ಯುವಕರಿಗೆ ನೇಮಕಾತಿ ಯೋಜನೆಯಾಗಿದೆ. ಪ್ರವೇಶವನ್ನು ಆರಂಭದಲ್ಲಿ 4 ವರ್ಷಗಳ ಅವಧಿಗೆ ನಿಗದಿಪಡಿಸಲಾಗುತ್ತದೆ. ಈ 4 ವರ್ಷಗಳಲ್ಲಿ, ನೇಮಕಗೊಂಡವರಿಗೆ ಅಗತ್ಯವಿರುವ ಕೌಶಲ್ಯಗಳಲ್ಲಿ ಸಶಸ್ತ್ರ ಪಡೆಗಳಿಂದ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.
ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ ಒಟ್ಟು 46 ಸಾವಿರ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಇವರಲ್ಲಿ ಶೇ. 25ರಷ್ಟು ಖಾಯಂ ಆಯೋಗಕ್ಕಾಗಿ 15 ವರ್ಷಗಳ ಹೆಚ್ಚುವರಿ ಅವಧಿಗೆ ಉಳಿಸಿಕೊಳ್ಳಲಾಗುವುದು. ಉಳಿದವರಿಗೆ ನಿವೃತ್ತಿಗೆ ಅವಕಾಶ ನೀಡಿ ಅವರಿಗೆ ಸೇವಾ ನಿಧಿಯನ್ನು ನೀಡಲಾಗುತ್ತದೆ. ಅದರ ಮೊತ್ತ 11.71 ಲಕ್ಷ ರೂ.ಗಳಾಗಿರುತ್ತವೆ. ಈ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ಸಶಸ್ತ್ರ ಪಡೆಗಳಲ್ಲಿ ನಿಯಮಿತ ಕೇಡರ್ ಆಗಿ ನೋಂದಣಿಗೆ ಆಯ್ಕೆಯಾದ ವ್ಯಕ್ತಿಗಳು ಕನಿಷ್ಠ 15 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: Agnipath Scheme: ಅಗ್ನಿಪಥ ಯೋಜನೆಗೆ ಅನುಮೋದನೆ, ಸಂಪುಟ ಸಮಿತಿ ಐತಿಹಾಸಿಕ ನಿರ್ಧಾರ: ರಾಜನಾಥ್ ಸಿಂಗ್
ವದಂತಿ: ಅಗ್ನಿವೀರರ ಭವಿಷ್ಯವು ಅಸುರಕ್ಷಿತವಾಗಿದೆ.
ವಾಸ್ತವ: ಉದ್ಯಮಿಗಳಾಗಲು ಬಯಸುವವರಿಗೆ ಹಣಕಾಸಿನ ಪ್ಯಾಕೇಜ್ ಮತ್ತು ಬ್ಯಾಂಕ್ ಸಾಲ ಯೋಜನೆಯನ್ನು ನೀಡಲಾಗುತ್ತದೆ. ಹೆಚ್ಚಿನ ಅಧ್ಯಯನ ಮಾಡಲು ಬಯಸುವವರಿಗೆ 12ನೇ ತರಗತಿಯ ಸಮಾನವಾದ ಪ್ರಮಾಣಪತ್ರ ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ಬ್ರಿಡ್ಜಿಂಗ್ ಕೋರ್ಸ್ ನೀಡಲಾಗುತ್ತದೆ. ಉದ್ಯೋಗಗಳನ್ನು ಪಡೆಯಲು ಬಯಸುವವರಿಗೆ CAPFಗಳು ಮತ್ತು ರಾಜ್ಯ ಪೊಲೀಸ್ ಹುದ್ದೆಯಲ್ಲಿ ಆದ್ಯತೆ ನೀಡಲಾಗುವುದು. ಇತರ ಕ್ಷೇತ್ರಗಳಲ್ಲಿಯೂ ಅವರಿಗೆ ಹಲವಾರು ಉದ್ಯೋಗಾವಕಾಶಗಳನ್ನು ನೀಡಲಾಗುತ್ತದೆ.
ವದಂತಿ: ಅಗ್ನಿಪಥದ ಪರಿಣಾಮವಾಗಿ ಯುವಕರಿಗೆ ಅವಕಾಶಗಳು ಕಡಿಮೆಯಾಗುತ್ತವೆ.
ವಾಸ್ತವ: ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಯುವಕರಿಗೆ ಅವಕಾಶಗಳು ಹೆಚ್ಚಾಗುತ್ತವೆ. ಮುಂಬರುವ ವರ್ಷಗಳಲ್ಲಿ ಅಗ್ನಿವೀರ್‌ಗಳ ನೇಮಕಾತಿಯು ಸಶಸ್ತ್ರ ಪಡೆಗಳಲ್ಲಿನ ಪ್ರಸ್ತುತ ನೇಮಕಾತಿಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ.
ವದಂತಿ: ರೆಜಿಮೆಂಟಲ್ ಬಾಂಡಿಂಗ್ ಮೇಲೆ ಪರಿಣಾಮ ಬೀರುತ್ತದೆ.
ವಾಸ್ತವ: ರೆಜಿಮೆಂಟಲ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಅಗ್ನಿವೀರ್‌ಗಳಲ್ಲಿ ಅತ್ಯುತ್ತಮವಾದವರನ್ನು ಆಯ್ಕೆ ಮಾಡಲಾಗುತ್ತದೆ. ಇದು ಘಟಕದ ಒಗ್ಗಟ್ಟನ್ನು ಮತ್ತಷ್ಟು ಹೆಚ್ಚಿಸುತ್ತದೆ.
ವದಂತಿ: ಅಗ್ನಿಪಥ್ ಸಶಸ್ತ್ರ ಪಡೆಗಳ ಪರಿಣಾಮಕಾರಿತನವನ್ನು ಹಾನಿಗೊಳಿಸುತ್ತದೆ.
ವಾಸ್ತವ: ಇಂತಹ ಅಲ್ಪಾವಧಿಯ ದಾಖಲಾತಿ ವ್ಯವಸ್ಥೆಯು ಹೆಚ್ಚಿನ ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಮೊದಲ ವರ್ಷದಲ್ಲಿ ನೇಮಕಗೊಳ್ಳುವ ಅಗ್ನಿವೀರ್‌ಗಳ ಸಂಖ್ಯೆಯು ಸಶಸ್ತ್ರ ಪಡೆಗಳಲ್ಲಿ ಕೇವಲ ಶೇ. 3ರಷ್ಟಿದೆ. ಹೆಚ್ಚುವರಿಯಾಗಿ, ನಾಲ್ಕು ವರ್ಷಗಳ ನಂತರ ಸೈನ್ಯದಲ್ಲಿ ಮರು ಸೇರ್ಪಡೆಗೊಳ್ಳುವ ಮೊದಲು ಅಗ್ನಿವೀರ್‌ಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತದೆ. ಆದ್ದರಿಂದ ಸೈನ್ಯವು ಮೇಲ್ವಿಚಾರಣಾ ಶ್ರೇಣಿಗಳಿಗೆ ಪರೀಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತದೆ.
ವದಂತಿ: 21 ವರ್ಷ ವಯಸ್ಸಿನವರು ಪ್ರೌಢರಾಗಿರುವುದಿಲ್ಲ ಮತ್ತು ಸೈನ್ಯಕ್ಕೆ ವಿಶ್ವಾಸಾರ್ಹರಲ್ಲ.
ವಾಸ್ತವ: ಪ್ರಪಂಚದಾದ್ಯಂತದ ಹೆಚ್ಚಿನ ಸೈನ್ಯಗಳು ತಮ್ಮ ಯುವಕರ ಮೇಲೆಯೇ ಅವಲಂಬಿಸಿವೆ. ಎಲ್ಲ ದೇಶಗಳ ಸೇನೆಯಲ್ಲಿ ಅನುಭವಿ ಜನರಿಗಿಂತ ಹೆಚ್ಚು ಯುವಕರಿಗೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ, ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವುದರಿಂದ ಯಾವುದೇ ತೊಂದರೆ, ಹಿನ್ನಡೆಯಾಗದು.
ವದಂತಿ: ಅಗ್ನಿವೀರ್ಗಳು ಸಮಾಜಕ್ಕೆ ಅಪಾಯವನ್ನು ಉಂಟುಮಾಡುತ್ತಾರೆ ಮತ್ತು ಭಯೋತ್ಪಾದಕರೊಂದಿಗೆ ಸೇರುತ್ತಾರೆ.
ವಾಸ್ತವ: ಇದು ಭಾರತೀಯ ಸಶಸ್ತ್ರ ಪಡೆಗಳ ನೈತಿಕತೆ ಮತ್ತು ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ. 4 ವರ್ಷಗಳಿಂದ ಸಮವಸ್ತ್ರ ಧರಿಸಿದ ಯುವಕರು ತಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ಬದ್ಧರಾಗಿರುತ್ತಾರೆ. ಈಗಲೂ ಸಹ ಸಾವಿರಾರು ಮಂದಿ ಸಶಸ್ತ್ರ ಪಡೆಗಳಿಂದ ನಿವೃತ್ತರಾಗುತ್ತಿದ್ದಾರೆ.
ವದಂತಿ: ಮಾಜಿ ಸಶಸ್ತ್ರ ಪಡೆ ಅಧಿಕಾರಿಗಳಿಗೆ ಯಾವುದೇ ಕನ್ಸಲ್ಟೇಷನ್ ಮಾಡುವುದಿಲ್ಲ.
ವಾಸ್ತವ: ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಶಸ್ತ್ರ ಪಡೆಗಳ ಅಧಿಕಾರಿಯೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಈ ಪ್ರಸ್ತಾವನೆಯನ್ನು ಮಿಲಿಟರಿ ಅಧಿಕಾರಿಗಳ ಇಲಾಖೆಯಿಂದ ರಚಿಸಲಾಗಿದೆ. ಅನೇಕ ಮಾಜಿ ಅಧಿಕಾರಿಗಳು ಈ ಯೋಜನೆಯ ಅನುಕೂಲಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಅದನ್ನು ಸ್ವಾಗತಿಸಿದ್ದಾರೆ.
ವಾಯುಪಡೆ, ನೌಕಾಪಡೆ, ಭೂಸೇನೆಗೆ ಆನ್‌ಲೈನ್ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ದಾಖಲಾತಿಯನ್ನು ಮಾಡಲಾಗುತ್ತದೆ. ಈ ದಾಖಲಾತಿಯು ‘ಅಖಿಲ ಭಾರತ ಎಲ್ಲಾ ವರ್ಗ’ ಆಧಾರದ ಮೇಲೆ ಇರಲಿದ್ದು, 17.5ರಿಂದ 21 ವರ್ಷಗಳೊರಗಿನವರು ದಾಖಲಾತಿ ಮಾಡಿಕೊಳ್ಳಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Thu, 16 June 22