Agniveer Recruitment: ಬದಲಾಗಿದೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ; ಇನ್ನು ಆನ್​ಲೈನ್ ಪ್ರವೇಶ ಪರೀಕ್ಷೆ ನಂತರವೇ ಆಯ್ಕೆ

|

Updated on: Feb 22, 2023 | 1:00 PM

ಮೊದಲು ಪ್ರವೇಶ ಪರೀಕ್ಷೆ ಮಾಡುವುದರಿಂದ ಅರ್ಹ ಅಭ್ಯರ್ಥಿಗಳು ಮಾತ್ರ ನೇಮಕಾತಿ ರ್ಯಾಲಿಗಳಿಗೆ ಬರುವಂತಾಗುತ್ತದೆ. ಇದು ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ ಎಂದು ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Agniveer Recruitment: ಬದಲಾಗಿದೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ; ಇನ್ನು ಆನ್​ಲೈನ್ ಪ್ರವೇಶ ಪರೀಕ್ಷೆ ನಂತರವೇ ಆಯ್ಕೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಅಗ್ನಿಪಥ (Agnipath) ಯೋಜನೆಯಡಿ ಅಗ್ನಿವೀರ(Agniveer) ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿರುವುದಾಗಿ ಭಾರತೀಯ ಸೇನೆ (Indian Army) ಘೋಷಿಸಿದೆ. ಇದರಂತೆ, ಅಗ್ನಿವೀರರಾಗಿ ನೇಮಕಗೊಳ್ಳಲು ಬಯಸುವ ಅಭ್ಯರ್ಥಿಗಳು ಮೊದಲು ಆನ್​ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಬರೆಯಬೇಕಾಗುತ್ತದೆ. ನಂತರ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ನೇಮಕಾತಿಗೂ ಮುನ್ನ ನಡೆಸುವ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ಈ ವಿಚಾರವಾಗಿ ರಕ್ಷಣಾ ಇಲಾಖೆಯ ನೇಮಕಾತಿ ವಿಭಾಗದ ಹೆಚ್ಚುವರಿ ನಿರ್ದೇಶಕ ಮೇಜರ್ ಜನರಲ್ ಪಿ.ರಮೇಶ್ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸೇನೆಯು ಜಾಹೀರಾತು ಬಿಡುಗಡೆ ಮಾಡಿದ್ದು ಅಗ್ನಿವೀರರ ನೇಮಕಕ್ಕೆ ಸಂಬಂಧಿಸಿದ ಮೂರು ಹಂತಗಳ ಬಗ್ಗೆ ವಿವರಣೆ ನೀಡಿದೆ. ಈ ಹಿಂದೆ ಅಗ್ನಿವೀರರ ನೇಮಕ ಪ್ರಕ್ರಿಯೆ ಭಿನ್ನವಾಗಿತ್ತು. ಅಭ್ಯರ್ಥಿಗಳು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿತ್ತು. ನಂತರ ದೈಹಿಕ ಕ್ಷಮತೆ ಪರೀಕ್ಷೆಗೆ ಒಳಗಾಗಬೇಕಿತ್ತು. ಅದಾದ ಮೇಲೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಿತ್ತು.

ಈವರೆಗೆ 19,000 ಅಗ್ನಿವೀರರು ಸೇನೆ ಸೇರಿದ್ದು, 21,000 ಮಂದಿ ಮಾರ್ಚ್ ಮೊದಲ ವಾರ ಸೇನೆ ಸೇರಲಿದ್ದಾರೆ. ಹೊಸ ನೇಮಕಾತಿ ನಿಯಮ 2023-24ರಲ್ಲಿ ಸೇನೆ ಸೇರ ಬಯಸುವ 40,000 ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ವ್ಯತ್ಯಾಸವಿರುತ್ತದೆ. ಇದು ದೊಡ್ಡ ನಗರಗಳಲ್ಲಿ 1.5 ಲಕ್ಷದವರೆಗೆ ಇದ್ದರೆ ಸಣ್ಣ ನಗರಗಳಲ್ಲಿ 5,000 ವರೆಗೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Shocking News: ಗೆಳೆಯನನ್ನು ಕೊಂದು ಘಾಟ್​ನಲ್ಲಿ ಶವ ಬಿಸಾಡುವಾಗ ತಾನೇ ಕಾಲು ಜಾರಿ ಬಿದ್ದು ಸತ್ತ ಹಂತಕ!

ನೇಮಕಾತಿ ರ್ಯಾಲಿಗಳಿಗೆ ಬರುವ ಸಾವಿರಾರು ಅಭ್ಯರ್ಥಿಗಳನ್ನು ನಿಭಾಯಿಸಲು ತಗಲುವ ಆಡಳಿತಾತ್ಮಕ ವೆಚ್ಚ, ಸಾಗಾಟದ ವ್ಯವಸ್ಥೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದಿನ ಪ್ರಕ್ರಿಯೆಯಲ್ಲಿ ಅಪಾರ ಸಂಖ್ಯೆಯ ಅಭ್ಯರ್ಥಿಗಳ ಸ್ಕ್ರೀನಿಂಗ್ ಮಾಡುವುದು ಸೇನಾಡಳಿತಕ್ಕೆ ದೊಡ್ಡ ತಲೆನೋವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿ ಬರುತ್ತಿತ್ತು. ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನೂ ನಿಯೋಜಿಸಬೇಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಇದೀಗ ಮೊದಲು ಪ್ರವೇಶ ಪರೀಕ್ಷೆ ಮಾಡುವುದರಿಂದ ಅರ್ಹ ಅಭ್ಯರ್ಥಿಗಳು ಮಾತ್ರ ನೇಮಕಾತಿ ರ್ಯಾಲಿಗಳಿಗೆ ಬರುವಂತಾಗುತ್ತದೆ. ಇದು ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ ಎಂದು ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದುಲು ಇಲ್ಲಿ ಕ್ಲಿಕ್ ಮಾಡಿ

Published On - 11:59 am, Sat, 4 February 23