Shocking News: ಗೆಳೆಯನನ್ನು ಕೊಂದು ಘಾಟ್‌ನಲ್ಲಿ ಶವ ಬಿಸಾಡುವಾಗ ತಾನೇ ಕಾಲು ಜಾರಿ ಬಿದ್ದು ಸತ್ತ ಹಂತಕ!
Murder News: 30 ವರ್ಷದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿದ್ದು, ಆತನ ಶವವನ್ನು ವಿಲೇವಾರಿ ಮಾಡುವಾಗ ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ಕಣಿವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಮುಂಬೈ: ಕರ್ಮ ಎಂಬುದು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ದುಡ್ಡಿನ ವಿಚಾರಕ್ಕೆ ತನ್ನ ಗೆಳೆಯನನ್ನೇ ಕೊಲೆ (Murder) ಮಾಡಿದ್ದ ವ್ಯಕ್ತಿಯೊಬ್ಬ ಆ ಶವವನ್ನು ಯಾರಿಗೂ ಗೊತ್ತಾಗದಂತೆ ಬಿಸಾಡಲು ಹೋದಾಗ ತಾನೇ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ! ಈ ವಿಚಿತ್ರವಾದ ಘಟನೆ ಮಹಾರಾಷ್ಟ್ರದ (Maharashtra) ಅಂಬೋಲಿ ಘಾಟ್‌ನಲ್ಲಿ (Amboli Ghat) ನಡೆದಿದೆ.
30 ವರ್ಷದ ವ್ಯಕ್ತಿಯೊಬ್ಬ ಆರ್ಥಿಕ ವಿವಾದದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತನನ್ನು ಕೊಲೆ ಮಾಡಿದ್ದು, ಆತನ ಶವವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಸಾವಂತವಾಡಿಯ ಅಂಬೋಲಿ ಘಾಟ್‌ನಲ್ಲಿ ಕಡಿದಾದ ಬೆಟ್ಟದ ಇಳಿಜಾರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಆ ಶವವನ್ನು ಎಸೆಯಲು ವ್ಯಕ್ತಿಗೆ ಸಹಾಯ ಮಾಡಿದ ಇನ್ನೊಬ್ಬ ವ್ಯಕ್ತಿ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಭೌಸೋ ಮಾನೆ ಎಂದು ಗುರುತಿಸಲಾಗಿದೆ. ಆತನ ಗೆಳೆಯ ಸುಶಾಂತ್ ಖಿಲ್ಲರೆ (30) ಎಂಬಾತನ ಜೊತೆಗಿನ ಆಸ್ತಿ ವಿವಾದದ ಬಳಿಕ ಭೌಸೋ ಮಾನೆ ಸುಶಾಂತ್ನನ್ನು ಭಾನುವಾರ ಕೊಲೆ ಮಾಡಿದ್ದ. ಅವರಿಬ್ಬರೂ ಒಂದೇ ಊರಿನವರಾಗಿದ್ದರು. ಬಳಿಕ, ತನ್ನ ಗೆಳೆಯನ ಸಹಾಯದಿಂದ ಅಂಬೋಲಿ ಘಾಟ್ನ ಬೆಟ್ಟದಿಂದ ಶವವನ್ನು ಬಿಸಾಡಲು ನಿರ್ಧರಿಸಿದ್ದ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲೊಂದು ಭೀಕರ ಘಟನೆ; ಗರ್ಲ್ಫ್ರೆಂಡ್ನ 3 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ
ಆ ಮೃತದೇಹವನ್ನು ಬೆಟ್ಟದ ಇಳಿಜಾರಿನಲ್ಲಿ ಎಸೆಯುವಾಗ ಭೌಸೋ ಮಾನೆ ಸಮತೋಲನ ಕಳೆದುಕೊಂಡು ಅದರೊಂದಿಗೆ ಕೆಳಗೆ ಬಿದ್ದಿದ್ದಾನೆ. ಎತ್ತರದಿಂದ ಬಿದ್ದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಜೊತೆಗಿದ್ದ ಇನ್ನೋರ್ವ ಗೆಳೆಯ ಸಮೀಪದ ದೇವಸ್ಥಾನಕ್ಕೆ ತೆರಳಿ, ನಡೆದ ಘಟನೆಗಳ ಬಗ್ಗೆ ತಮ್ಮ ಕುಟುಂಬಕ್ಕೆ ಫೋನ್ ಮಾಡಿ ತಿಳಿಸಿದ್ದಾನೆ.
ಭೌಸೋ ಮಾನೆ ತನ್ನ ಗೆಳೆಯ ಪವಾರ್ ಜೊತೆಗೆ ಸುಶಾಂತ್ನ ಶವವನ್ನು ಎಸೆಯಲು ಕಾರಿನಲ್ಲಿ ಅಂಬೋಲಿ ಘಾಟ್‌ಗೆ 400 ಕಿ.ಮೀ ಪ್ರಯಾಣಿಸಿದ್ದ. ಆದರೆ, ಘಾಟ್‌ನಲ್ಲಿ ಗಡಿಬಿಡಿಯಿಂದ ಶವ ತುಂಬಿದ್ದ ಚೀಲವನ್ನು ಬಿಸಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದ. ವಿಷಯ ತಿಳಿದ ಪೊಲೀಸರು ಸುಶಾಂತ್ನ ಶವ ಮತ್ತು ಬೌಸೋ ಮಾನೆಯ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಭೌಸೋ ಮಾನೆಯ ಮೃತದೇಹ ಘಾಟ್ನಿಂದ 150 ಅಡಿ ಇಳಿಜಾರಿನಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: Crime News: ಆನ್ಲೈನ್ ಕ್ಲಾಸ್ ವೇಳೆಯೇ ಶಿಕ್ಷಕನ ಹತ್ಯೆ; ಮೊಬೈಲ್ನಲ್ಲಿ ಸೆರೆಯಾಯ್ತು ಸಂಪೂರ್ಣ ಘಟನೆ!
ಕೊಲ್ಹಾಪುರದಿಂದ ಸಾವಂತವಾಡಿಗೆ ಹೋಗುವ ಮಾರ್ಗದಲ್ಲಿರುವ ಅಂಬೋಲಿ ಘಾಟ್ ಮಹಾರಾಷ್ಟ್ರದ ಅತ್ಯಂತ ಬೇಡಿಕೆಯ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ಇದುವರೆಗೂ ಅನೇಕ ಶವಗಳು ಪತ್ತೆಯಾಗಿವೆ. ಕೊಲೆ ಮಾಡಿದ ಬಳಿಕ ಶವವನ್ನು ಇಲ್ಲಿ ಬಿಸಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಳವಾದ ಕಣಿವೆಗಳು ಇರುವುದರಿಂದ ಶವ ಯಾರಿಗೂ ಸಿಗುವುದಿಲ್ಲ ಎಂಬುದು ಇದಕ್ಕೆ ಕಾರಣ.