ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ (VK Sasikala) ಅವರು ಎಐಎಡಿಎಂಕೆ (AIADMK) ಯಿಂದ ಉಚ್ಚಾಟನೆಗೊಂಡಿದ್ದರೂ, ಅವರಿನ್ನೂ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯೆಂದೇ ತಮ್ಮನ್ನು ತಾವು ಹೇಳಿಕೊಂಡಿದ್ದಾರೆ. ಪಕ್ಷದ ಟ್ಯಾಗ್ನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪಕ್ಷ ಮಾಜಿ ಸಚಿವ ಜಯಕುಮಾರ್ ದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಶಶಿಕಲಾ ಎಐಎಡಿಎಂಕೆಯಲ್ಲಿ ಇಲ್ಲ. ಪಕ್ಷದಲ್ಲಿ ಅವರಿಗೆ ಯಾವುದೇ ಹುದ್ದೆಯೂ ಇಲ್ಲ ಎಂದು ಎಐಎಡಿಎಂಕೆ ಜಂಟಿ ಸಂಯೋಜಕ ಕೆ.ಪಳನಿಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಿದ್ದಾಗ್ಯೂ ಕೂಡ ಶಶಿಕಲಾ ತಮ್ಮ ಪತ್ರಿಕಾ ಪ್ರಕಟಣೆ, ಇನ್ನಿತರ ಸ್ಟೇಟ್ಮೆಂಟ್ಗಳನ್ನು ಬಿಡುಗಡೆ ಮಾಡುವಾಗ ಎಐಎಡಿಎಂಕೆ ಪ್ರಧಾನಕಾರ್ಯದರ್ಶಿ ಎಂದೇ ಹೇಳಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ಸಂಸ್ಥಾಪಕ ಎಂ.ಜಿ ರಾಮಚಂದ್ರನ್ ಅವರ ಸ್ಮಾರಕ ಮನೆಯಲ್ಲಿ ಇದೇ ಟ್ಯಾಗ್ನಲ್ಲಿ ಒಂದು ಫಲಕವನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಯಕುಮಾರ್ ಅವರು ಇದೀಗ ನಗರ ಪೊಲೀಸ್ ಆಯುಕ್ತ ಶಂಕರ್ ಜೈವಾಲ್ ಅವರಿಗೆ ನೇರವಾಗಿ ದೂರು ನೀಡಿದ್ದಾರೆ. ಶಶಿಕಲಾ ವಿರುದ್ಧ ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಮಹಾಬಲಂ ಪೊಲೀಸ್ ಠಾಣೆ ಅಧಿಕಾರಿಗೆ ಸೂಚಿಸಿ ಎಂದು ಆಯುಕ್ತರ ಬಳಿ ಮನವಿ ಮಾಡಿದ್ದಾರೆ. ಡಿಸೆಂಬರ್ 24ರಂದು ಎಂಜಿಆರ್ ಪುಣ್ಯತಿಥಿ ನಿಮಿತ್ತ ಅವರ ಸ್ಮಾರಕ ಮನೆಗೆ ಶಶಿಕಲಾ ಭೇಟಿಯಾಗುವುದಾಗಿ ಹೇಳಿದ್ದಾರೆ. ಅದರ ಬೆನ್ನಲ್ಲೇ ಜಯಕುಮಾರ್ ಇಂಥದ್ದೊಂದು ದೂರು ನೀಡಿದ್ದಾರೆ.
ವಿ.ಕೆ.ಶಶಿಕಲಾ ಬೇನಾಮಿ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದಾರೆ. ಜೈಲಿಂದ ಬಿಡುಗಡೆಯಾದ ಬಳಿಕ ತಾವು ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿಯೇ ಹೇಳಿದ್ದರೂ, ಅವರ ನಡೆ ಸಂಪೂರ್ಣ ತದ್ವಿರುದ್ಧವಾಗಿದೆ. ತಾವು ಇನ್ನೂ ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿ ಎಂದೇ ಹೇಳಿಕೊಳ್ಳುತ್ತಿದ್ದಾರೆ. ಅಕ್ಟೋಬರ್ನಲ್ಲಿ ಶಶಿಕಲಾ ಚೆನ್ನೈನ ಟಿ.ನಗರದಲ್ಲಿರುವ ಎಂಜಿಆರ್ ಸ್ಮಾರಕದ ಬಳಿ ಎಐಎಡಿಎಂಕೆ ಪಕ್ಷದ ಧ್ವಜ ಹಾರಿಸಿದ್ದರು. ಆಗಲೂ ಸಹ ಮಾಜಿ ಸಚಿವ ಜಯಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ನಿಮಗೆ ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲ ಎಂದ ಮೇಲೆ ಪಕ್ಷದ ಬಾವುಟ, ಚಿಹ್ನೆ ಬಳಸುವಂತಿಲ್ಲ ಎಂದಿದ್ದರು.
ಇದನ್ನೂ ಓದಿ: ವಮಿಕಾಳ ಮುಖ ತೋರಿಸಿ ಎಂದವರಿಗೆ ಅನುಷ್ಕಾ ಶರ್ಮಾ ವಿಶೇಷ ಮನವಿ