ರಾಜ್ಯಸಭೆಯ 12 ಸಂಸದರ ಅಮಾನತು; ಇಂದು ಬೆಳಗ್ಗೆ 10 ಗಂಟೆಗೆ ಪ್ರತಿಪಕ್ಷಗಳ ನಾಯಕರ ಸಭೆ ಕರೆದ ಕೇಂದ್ರ ಸರ್ಕಾರ

ಸಭೆಗೆ ಹಾಜರಾಗುವಂತೆ ಐದು ಪಕ್ಷಗಳ ನಾಯಕರಿಗೆ ಪತ್ರ ಬರೆದಿರುವ ಪ್ರಲ್ಹಾದ್ ಜೋಶಿ, ಅದರೊಂದಿಗೆ ಖುದ್ದಾಗಿ ಕರೆಯನ್ನೂ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯ 12 ಸಂಸದರ ಅಮಾನತು; ಇಂದು ಬೆಳಗ್ಗೆ 10 ಗಂಟೆಗೆ ಪ್ರತಿಪಕ್ಷಗಳ ನಾಯಕರ ಸಭೆ ಕರೆದ ಕೇಂದ್ರ ಸರ್ಕಾರ
ಸಾಂಕೇತಿಕ ಚಿತ್ರ
TV9kannada Web Team

| Edited By: Vinay Bhat

Dec 20, 2021 | 6:45 AM

ಮುಂಗಾರು ಅಧಿವೇಶನದ ಕೊನೇ ದಿನ ಅನುಚಿತವಾಗಿ ವರ್ತಿಸಿದ್ದ ಪ್ರತಿಪಕ್ಷಗಳ 12 ರಾಜ್ಯ ಸಭೆ ಸಂಸದ (Rajya Sabha MPs) ರನ್ನು ಈ ಬಾರಿ ಚಳಿಗಾಲದ ಅಧಿವೇಶ(Winter Session)ನದ ಮೊದಲ ದಿನವೇ ಅಮಾನತುಗೊಳಿಸಲಾಗಿದೆ. ಅವರ ಅಮಾನತು ಆದೇಶವನ್ನು ಇನ್ನೂ ಹಿಂಪಡೆದಿಲ್ಲ.  ಈ 12 ಸಂಸದರದಲ್ಲಿ ಕಾಂಗ್ರೆಸ್​, ಟಿಎಂಸಿ, ಸಿಪಿಐ, ಸಿಪಿಐ (ಎಂ), ಶಿವಸೇನೆಯ ಸಂಸದರಿದ್ದಾರೆ.  ಸಂಸದರ ಅಮಾನತು ವಿಷಯವೇ ರಾಜ್ಯಸಭೆಯ ಅಧಿವೇಶನದಲ್ಲಿ ದೊಡ್ಡದಾಗುತ್ತಿದೆ. ಅವರ ಅಮಾನತು ಹಿಂಪಡೆಯಬೇಕು ಎಂದು ಪ್ರತಿಪಕ್ಷಗಳ ನಾಯಕರು ಆಗ್ರಹ ಮಾಡುತ್ತಿದ್ದಾರೆ. ಕೂಗಾಟ, ಗದ್ದಲಗಳ ಕಾರಣಕ್ಕೆ ಪದೇಪದೆ ಕಲಾಪ ಮುಂದೂಡುವ ಪರಿಸ್ಥಿತಿಯೂ ಎದುರಾಗುತ್ತಿದೆ. ಹೀಗಿರುವಾಗ ಸಭಾಪತಿ ವೆಂಕಯ್ಯನಾಯ್ಡು ಅವರು, ರಾಜ್ಯಸಭೆಯಲ್ಲಿ ಅಮಾನತುಗೊಂಡ 12 ಸದಸ್ಯರ ವಿಚಾರಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಶೀಘ್ರವೇ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದರು.

ಇದೀಗ ಕೇಂದ್ರ ಸರ್ಕಾರ ಈ 12 ಸಂಸದರ ವಿಚಾರವಾಗಿ ಚರ್ಚಿಸಲು ಪ್ರತಿಪಕ್ಷಗಳ ಸಭೆಯನ್ನು ಇಂದು ಬೆಳಗ್ಗೆ ಕರೆದಿದೆ. ಯಾವೆಲ್ಲ ಪ್ರತಿಪಕ್ಷಗಳ ರಾಜ್ಯಸಭಾ ಸಂಸದರು ಅಮಾನತುಗೊಂಡಿದ್ದಾರೋ, ಆ ಪಕ್ಷಗಳ ನಾಯಕರಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು,  ಸೋಮವಾರ ಬೆಳಗ್ಗೆ (ಡಿಸೆಂಬರ್​ 20) 10 ಗಂಟೆಗೆ ಸಂಸತ್ತಿನಲ್ಲಿ ನಡೆಯಲಿರುವ ಸಭೆಗೆ ಹಾಜರಾಗಿ ಎಂದು ಹೇಳಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್​, ಟಿಎಂಸಿ, ಸಿಪಿಐ (ಎಂ), ಸಿಪಿಐಗಳ  ನಾಯಕರಿಗೆ ಪತ್ರ ಬರೆದಿದ್ದಾರೆ.   ತನಗೆ ಪ್ರಲ್ಹಾದ್​ ಜೋಶಿಯವರು ಫೋನ್​ ಕೂಡ ಮಾಡಿದ್ದಾರೆ. ಸಭೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ. ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್ ತಿಳಿಸಿದ್ದಾರೆ.

ಸಭೆಗೆ ಹಾಜರಾಗುವಂತೆ ಐದು ಪಕ್ಷಗಳ ನಾಯಕರಿಗೆ ಪತ್ರ ಬರೆದಿರುವ ಪ್ರಲ್ಹಾದ್ ಜೋಶಿ, ಅದರೊಂದಿಗೆ ಖುದ್ದಾಗಿ ಕರೆಯನ್ನೂ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೇ, ಈ ಪ್ರತಿಪಕ್ಷಗಳ ನಾಯಕರು ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸುವುದಕ್ಕೂ ಮೊದಲು, ಇಂದು ಬೆಳಗ್ಗೆ 9.45ರ ಹೊತ್ತಿಗೆ ಕಾಂಗ್ರೆಸ್ ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎಂದೂ ಹೇಳಲಾಗಿದೆ.  ಇನ್ನು 12 ಸಂಸದರ ಅಮಾನತು ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿಯೂ ಪ್ರತಿಪಕ್ಷಗಳು ಹೇಳಿಕೊಂಡಿವೆ.

ಅಮಾನತುಗೊಂಡ ರಾಜ್ಯಸಭೆ ಸದಸ್ಯರು ಇವರು.. 1. ಎಲಮರಮ್ ಕರೀಂ (ಸಿಪಿಎಂ), 2. ಫುಲೋ ದೇವಿ ನೇತಾಮ್​ (ಕಾಂಗ್ರೆಸ್​), 3. ಛಾಯಾ ವರ್ಮಾ (ಕಾಂಗ್ರೆಸ್​), 4. ರಿಪುನ್​ ಬೋರಾ (ಕಾಂಗ್ರೆಸ್​), 5. ಬಿನೋಯ್​ ವಿಶ್ವಂ (ಸಿಪಿಐ) 6.ರಾಜಮಣಿ ಪಟೇಲ್​ (ಕಾಂಗ್ರೆಸ್​), 7. ಡೋಲಾ ಸೇನ್​ (ಟಿಎಂಸಿ), 8. ಶಾಂತಾ ಛೆಟ್ರಿ (ಟಿಎಂಸಿ), 9. ಸೈಯದ್ ನಾಸೀರ್​ ಹುಸೇನ್​ (ಕಾಂಗ್ರೆಸ್​), 10. ಪ್ರಿಯಾಂಕಾ ಚತುರ್ವೇದಿ (ಶಿವಸೇನೆ), 11. ಅನಿಲ್​ ದೇ​ಸಾಯಿ (ಶಿವಸೇನೆ​) 12. ಅಖಿಲೇಶ್ ಪ್ರಸಾದ್ ಸಿಂಗ್​ (ಕಾಂಗ್ರೆಸ್)

ಇವರೆಲ್ಲರ ಅಮಾನತು ವಾಪಸ್ ಪಡೆಯಬೇಕು ಎಂದು ಈಗಾಗಲೇ ಹಲವು ಬಾರಿ ಪ್ರತಿಪಕ್ಷಗಳು ಆಗ್ರಹ ಮಾಡಿವೆ. ಹೀಗಿದ್ದಾಗ್ಯೂ ಪ್ರಲ್ಹಾದ್​ ಜೋಶಿ, 12 ಸಂಸದರು ಕ್ಷಮೆ ಕೇಳಿದರೆ ಮಾತ್ರ ಅದನ್ನು ಹಿಂಪಡೆಯುವ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದರು. ಆದರೆ ಮಲ್ಲಿಕಾರ್ಜುನ್​ ಖರ್ಗೆ, ರಾಹುಲ್​ ಗಾಂಧಿ ಸೇರಿ ಅನೇಕರು, ರಾಜ್ಯ ಸಭೆಯಲ್ಲಿ ಅಮಾನತುಗೊಂಡ ಸಂಸದರು ಯಾರೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಅಂದಹಾಗೆ, ಇವರೆಲ್ಲ ಮುಂಗಾರು ಅಧಿವೇಶನದ ಕೊನೇ ದಿನ ದೊಡ್ಡಮಟ್ಟದಲ್ಲಿ ದಾಂಧಲೆ ಎಬ್ಬಿಸಿದ್ದರು. ಕುರ್ಚಿಗಳನ್ನು ಕಿತ್ತೆಸೆದಿದ್ದರು. ರಾಜ್ಯಸಭೆ ಮಾರ್ಷಲ್​ಗಳನ್ನು ಹಿಡಿದು ಎಳೆದಾಡಿದ್ದರು. ಈ ಮೂಲಕ ಪೀಠದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿ ಅಮಾನತು ಮಾಡಲಾಗಿತ್ತು.

ಇದನ್ನೂ ಓದಿ: ಕೋಲ್ಕತ್ತ ಮುನ್ಸಿಪಲ್ ಕಾರ್ಪೋರೇಶನ್​ ಚುನಾವಣೆ; ಟಿಎಂಸಿ ವಿರುದ್ಧ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಆಕ್ರೋಶ, ಮರು ಮತದಾನಕ್ಕೆ ಆಗ್ರಹ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada