Sonia Gandhi: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಕೊರೊನಾ ಸೋಂಕು (Coronavirus) ದೃಢಪಟ್ಟಿದೆ. ನ್ಯಾಷನಲ್ ಹೆರಾಲ್ಡ್ (National Herald) ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜೂನ್ 8ರಂದು ಅವರು ಜಾರಿ ನಿರ್ದೇಶನಾಲಯದ (Enforcement Directorate) ವಿಚಾರಣೆ ಎದುರಿಸಬೇಕಿತ್ತು.
ಸೋನಿಯಾ ಗಾಂಧಿ ಅವರಲ್ಲಿ ನಿನ್ನೆ (ಜೂನ್ 1) ಕೊರೊನಾದ ಲಕ್ಷಣಗಳು ಕಂಡು ಬಂದವು. ಹೀಗಾಗಿ ಅವರು ಸ್ವಯಂ ಪ್ರತ್ಯೇಕವಾಸಕ್ಕೆ (ಐಸೋಲೇಷನ್) ಮುಂದಾದರು. ಕಳೆದ ವಾರ ಸರಣಿ ಸಭೆಗಳನ್ನು ನಡೆಸಿದ್ದ ಸೋನಿಯಾರಿಗೆ ತುಸು ಬಳಲಿಕೆಯೂ ಕಾಣಿಸಿಕೊಂಡಿತ್ತು.
‘ನಿನ್ನೆ ಸಂಜೆ ಕೆಲವರಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ. ಸೋನಿಯಾ ಅವರಿಗೂ ಸಣ್ಣಗೆ ಜ್ವರ ಬಂದಿತ್ತು. ಕೊವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಐಸೊಲೇಷನ್ಗೆ ಮುಂದಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಗುಣಮುಖರಾಗುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.
ಇಡಿ ವಿಚಾರಣೆಗೆ ಹಾಜರಾಗಲು ಸೂಚನೆ
ನ್ಯಾಷನಲ್ ಹೆರಾಲ್ಡ್ (National Herald) ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (Enforcement Directorate – ED) ವಿಚಾರಣೆಗೆ ಹಾಜರಾಗಲು ರಾಹುಲ್ ಗಾಂಧಿ (Rahul Gandhi) ಸಮಯ ಕೇಳಿದ್ದಾರೆ. ಪ್ರಸ್ತುತ ವಿದೇಶ ಪ್ರವಾಸದಲ್ಲಿರುವ ಕಾರಣ ಹೆಚ್ಚಿನ ಸಮಯ ಬೇಕು ಎಂದು ರಾಹುಲ್ ಗಾಂಧಿ ಕೋರಿದ್ದಾರೆ. ಜೂನ್ 8ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಇಂದು (ಜೂನ್ 2) ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಸಮನ್ಸ್ ಜಾರಿ ಮಾಡಿತ್ತು.
‘ನಮ್ಮ ಇಬ್ಬರೂ ನಾಯಕರು ಇಡಿ ವಿಚಾರಣೆ ಎದುರಿಸಲಿದ್ದಾರೆ. ಇಂಥ ಬೆದರಿಕೆ ತಂತ್ರಗಳಿಂದ ನಮ್ಮನ್ನು ಮಣಿಸಲು ಆಗುವುದಿಲ್ಲ’ ಎಂದು ಕಾಂಗ್ರೆಸ್ನ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದರು. ನಂತರ ಮತ್ತೋರ್ವ ವಕ್ತಾರ ರಣದೀಪ್ ಸುರ್ಜೆವಾಲಾ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ‘ರಾಜಕೀಯ ಪ್ರೇರಿತ ಪ್ರಕರಣ. ಸರ್ಕಾರವು ತನ್ನ ಅಧೀನದಲ್ಲಿರುವ ಏಜೆನ್ಸಿಗಳನ್ನು ಮನಸ್ಸಿಗೆ ಬಂದಂತೆ ಬಳಸಿಕೊಳ್ಳುತ್ತಿದೆ’ ಎಂದು ಹೇಳಿದ್ದರು.
ಪ್ರಕರಣದ ವಿವರ ನೀಡಿದ್ದ ರಣದೀಪ್ ಸುರ್ಜೆವಾಲಾ, ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸುತ್ತಿತ್ತು. ಹಲವು ವರ್ಷಗಳ ಅವಧಿಗೆ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ₹ 90 ಕೋಟಿಯಷ್ಟು ಹಣವನ್ನು ನೀಡಿತ್ತು. ನಷ್ಟದ ಮೊತ್ತ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ಷೇರುಗಳಾಗಿ ಪರಿವರ್ತಿಸಿ, ಯಂಗ್ ಇಂಡಿಯಾ ಹೆಸರಿನ ಕಂಪನಿಗೆ ವರ್ಗಾಯಿಸಲಾಯಿತು. ಇದು ಜಗತ್ತಿನೆಲ್ಲೆಡೆ ನಡೆಯುವ ಪ್ರಕ್ರಿಯೆ’ ಎಂದು ಸುರ್ಜೆವಾಲಾ ವಿವರಿಸಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಮತ್ತಷ್ಟು ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ)
Published On - 12:52 pm, Thu, 2 June 22