ಅಪಘಾತ ನಡೆದ ಹಾಸ್ಟೆಲ್ ಮೇಲ್ಭಾಗದಲ್ಲಿ ವಿಮಾನದ 1 ಬ್ಲಾಕ್ ಬಾಕ್ಸ್ ಪತ್ತೆ; ಏನಿದರ ಮಹತ್ವ?
ಗುರುವಾರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಕಪ್ಪು ಪೆಟ್ಟಿಗೆಯನ್ನು (ಬ್ಲಾಕ್ ಬಾಕ್ಸ್ ) ಪತ್ತೆ ಹಚ್ಚಲಾಗಿದ್ದು, ಇದು ಈ ವಿಮಾನ ದುರಂತದ ನಿಜವಾದ ಕಾರಣದ ಬಗ್ಗೆ ನಿರ್ಣಾಯಕ ಮಾಹಿತಿ ನೀಡುತ್ತದೆ. ವಿಮಾನದ ಡೇಟಾ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ಗಳನ್ನು ಒಳಗೊಂಡಿರುವ ಈ ಬ್ಲಾಕ್ ಬಾಕ್ಸ್ ವಿಮಾನ ಅಪಘಾತದ ಹಿಂದಿನ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಬ್ಲಾಕ್ ಬಾಕ್ಸ್ ಅನ್ನು ವೈದ್ಯಕೀಯ ಹಾಸ್ಟೆಲ್‌ನ ಟೆರೇಸ್ನಲ್ಲಿ ಪತ್ತೆಹಚ್ಚಲಾಗಿದೆ.

ನವದೆಹಲಿ, ಜೂನ್ 13: ಗುಜರಾತ್ನ ಅಹಮದಾಬಾದ್‌ನಲ್ಲಿ (Ahmedabad Plane Crash) ನಡೆದ ವಿಮಾನ ದುರಂತಕ್ಕೆ ಇನ್ನೂ ನಿಖರ ಕಾರಣ ಪತ್ತೆಯಾಗಿಲ್ಲ. ಆ ವಿಮಾನದಲ್ಲಿದ್ದ 242 ಜನರ ಪೈಕಿ ಓರ್ವ ಪ್ರಯಾಣಿಕ ಮಾತ್ರ ಬದುಕಿರುವುದರಿಂದ ಆ ವಿಮಾನದಲ್ಲಿ ಏನಾಯ್ತು ಎಂಬ ಮಾಹಿತಿ ನೀಡುವವರು ಯಾರೂ ಇಲ್ಲ. ಹೀಗಾಗಿ, ಟೆಕ್ನಾಲಜಿಯ ಮೂಲಕ ವಿಮಾನ ಅಪಘಾತದ ಸಂದರ್ಭದಲ್ಲಿ ಏನಾಯಿತೆಂಬುದನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ವಿಮಾನ ಅಪಘಾತದ ಅವಶೇಷಗಳಿಂದ ಡಿವಿಆರ್ ಅನ್ನು ಪತ್ತೆಹಚ್ಚಲಾಗಿದೆ. ಇನ್ನೊಂದು ಮಹತ್ವದ ವಿವರಗಳನ್ನು ನೀಡುವ ಬ್ಲಾಕ್ ಬಾಕ್ಸ್ (Black Box) ಅನ್ನು ಕೂಡ ಇದೀಗ ಪತ್ತೆಹಚ್ಚಲಾಗಿದೆ. ವಿಮಾನ ಡಿಕ್ಕಿ ಹೊಡೆದು ಸ್ಫೋಟಗೊಂಡ ಬಿ.ಜೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಟೆರೇಸ್ನಲ್ಲಿ 1 ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಇದರಿಂದಾಗಿ ತನಿಖೆಗೆ ವೇಗ ಸಿಗಲಿದೆ.
ಈಗಾಗಲೇ ಗುಜರಾತ್ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ತಂಡ ಬ್ಲಾಕ್ ಬಾಕ್ಸ್ ಅನ್ನು ಪತ್ತೆಹಚ್ಚಿ, ವಶಕ್ಕೆ ಪಡೆದಿದ್ದಾರೆ. ನಿನ್ನೆಯಿಂದ ಇದಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಈ ಬ್ಲಾಕ್ ಬಾಕ್ಸ್ ವಿಮಾನದ ತಾಂತ್ರಿಕ ಸಮಸ್ಯೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ವಿಮಾನ ಡಿಕ್ಕಿ ಹೊಡೆದ ವೈದ್ಯರ ಹಾಸ್ಟೆಲ್‌ನ ಛಾವಣಿಯ ಮೇಲೆ ಈ ಸಾಧನ ಕಂಡುಬಂದಿದೆ ಎಂದು ವರದಿಯಾಗಿದೆ. ಗುಜರಾತ್ ಸರ್ಕಾರದ 40 ಸಿಬ್ಬಂದಿಯ ಸಹಾಯದಿಂದ ತಂಡವು ಈ ಕಪ್ಪು ಪೆಟ್ಟಿಗೆಯನ್ನು ಪತ್ತೆಹಚ್ಚಿದೆ.
ಇದನ್ನೂ ಓದಿ: Plane Crash: ಕೊನೆಗೂ ಸಿಕ್ಕಿತು ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಡಿವಿಆರ್; ಇದರಿಂದ ಏನು ಪ್ರಯೋಜನ?
ಜೂನ್ 12ರಂದು, ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊಂದಿದ್ದು, ಒಟ್ಟು 242 ಜನರಿದ್ದರು. ಅವರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ.
ಬ್ಲಾಕ್ ಬಾಕ್ಸ್ ಎಂದರೇನು?:
ಬ್ಲಾಕ್ ಬಾಕ್ಸ್ ಅಥವಾ ಕಪ್ಪು ಪೆಟ್ಟಿಗೆಯು ವಿಮಾನದ ಬಹು ಮುಖ್ಯ ಭಾಗವಾಗಿದೆ. ಇದು ವಿಮಾನದ ಕಾರ್ಯಾಚರಣೆಯ ಸಮಯದಲ್ಲಿ ಅದರ ಮಾಹಿತಿಯನ್ನು ದಾಖಲಿಸುವ ಒಂದು ಸಣ್ಣ ಯಂತ್ರವಾಗಿದೆ. ಇದನ್ನು ಒಂದು ರೀತಿಯ ಹಾರಾಟ ರೆಕಾರ್ಡರ್ ಎನ್ನಬಹುದು. ಕಪ್ಪು ಪೆಟ್ಟಿಗೆಯು 1950ರ ದಶಕದ ಆರಂಭದಲ್ಲಿ ಹುಟ್ಟಿಕೊಂಡಿತು. ಇದನ್ನು ವಿಮಾನದೊಳಗೆ ಸ್ಫೋಟಗಳು, ಬೆಂಕಿ, ನೀರಿನ ಒತ್ತಡ ಮತ್ತು ಹೆಚ್ಚಿನ ವೇಗದ ಅಪಘಾತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ತಯಾರಿಸಲಾಗಿರುತ್ತದೆ.
ಇದನ್ನೂ ಓದಿ: Air India Plane Crash: ಅಹಮದಾಬಾದ್ ವಿಮಾನ ದುರಂತ; 200 ಡಿಎನ್‌ಎ ಮಾದರಿಗಳ ಸಂಗ್ರಹ, 110 ಜನರ ಗುರುತು ಪತ್ತೆ
ಕಪ್ಪು ಪೆಟ್ಟಿಗೆಯ ಆವಿಷ್ಕಾರವನ್ನು ಆಸ್ಟ್ರೇಲಿಯಾದ ವಿಜ್ಞಾನಿ ಡೇವಿಡ್ ರೊನಾಲ್ಡ್ ಡಿ ಮೇ ವಾರೆನ್ ಮಾಡಿದರು. ವಿಮಾನ ಅಪಘಾತದ ಹಿಂದಿನ ಕಾರಣವನ್ನು ಬಹಿರಂಗಪಡಿಸಲು ಇದನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಕಪ್ಪು ಪೆಟ್ಟಿಗೆಯು ಎರಡು ರೆಕಾರ್ಡರ್‌ಗಳನ್ನು ಒಳಗೊಂಡಿರುತ್ತದೆ. ಪೈಲಟ್ ಧ್ವನಿಗಳು ಮತ್ತು ಕಾಕ್‌ಪಿಟ್ ಶಬ್ದಗಳಿಗಾಗಿ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಮತ್ತು ಎತ್ತರ, ವೇಗ, ಎಂಜಿನ್ ಒತ್ತಡ ಮತ್ತು ಹಾರಾಟದ ಮಾರ್ಗದ ಡೇಟಾವನ್ನು ಒಳಗೊಂಡಂತೆ ನಿರ್ಣಾಯಕ ತಾಂತ್ರಿಕ ನಿಯತಾಂಕಗಳನ್ನು ದಾಖಲಿಸುವ ಪ್ರತ್ಯೇಕ ಹಾರಾಟ ದತ್ತಾಂಶ ರೆಕಾರ್ಡರ್ ಅನ್ನು ಹೊಂದಿರುತ್ತದೆ.
ಅಪಘಾತಕ್ಕೆ ಕಾರಣವಾಗುವ ಘಟನೆಗಳನ್ನು ಬಿಚ್ಚಿಡಲು ಬ್ಲ್ಯಾಕ್ ಬಾಕ್ಸ್ ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತದೆ. ಇದು ಕಾಕ್‌ಪಿಟ್‌ನಲ್ಲಿ ಮತ್ತು ವಿಮಾನ ವ್ಯವಸ್ಥೆಗಳಲ್ಲಿ ಏನಾಯಿತು ಎಂಬುದರ ಬಗ್ಗೆ ಒಂದು ಚಿತ್ರಣವನ್ನು ನೀಡುತ್ತದೆ. ಇದು ಕ್ರಿಮಿನಲ್ ಪ್ರಕರಣಗಳಲ್ಲಿ ಡಿಎನ್‌ಎ ಸಾಕ್ಷಿಯ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಹೀಗಾಗಿಯೇ ಈ ವಿಮಾನ ಅಪಘಾತದ ತನಿಖೆಯಲ್ಲಿ ಈ ಬ್ಲಾಕ್ ಬಾಕ್ಸ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಹಾಗೇ, ಅಹಮದಾಬಾದ್ ಏರ್ಪೋರ್ಟ್ ಬಳಿ ವಿಮಾನ ದುರಂತ ಪ್ರಕರಣ ಸಂಭವಿಸಿತ್ತು. ಇದೀಗ ಆ ವಿಮಾನದ ಎಮರ್ಜೆನ್ಸಿ ಲೊಕೇಟರ್ ಟ್ರಾನ್ಸ್‌ಮೀಟರ್ ಪತ್ತೆಯಾಗಿದೆ. ವಿಮಾನದಲ್ಲಿ ಒಂದು ನಿರ್ಣಾಯಕ ಸುರಕ್ಷತಾ ಸಾಧನವಾಗಿರುವ ಇಎಲ್‌ಟಿ ತೊಂದರೆಯ ಸಂಕೇತಗಳನ್ನು ಕಳುಹಿಸಲು ಮತ್ತು ಪತನಗೊಂಡ ವಿಮಾನವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








