ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ (ಎನ್‌ಸಿಆರ್) ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರವು ಗುರುಗ್ರಾಮ್, ಫರಿದಾಬಾದ್, ಸೋನಿಪತ್ ಮತ್ತು ಝಜ್ಜರ್ ಈ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ವಾರದಿಂದ ಬೆಸ-ಸಮ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರ ಜೊತೆಗೆ, ಹರಿಯಾಣ ಸರ್ಕಾರವು ಭಿವಾನಿ, ಚಾರ್ಖಿ, ಫರಿದಾಬಾದ್, ಗುರುಗ್ರಾಮ್, ಜಜ್ಜರ್, ಜಿಂದ್, ಕರ್ನಾಲ್, ನುಹ್, ಮೆಹೇಂದ್ರಗಢ, ಸೋನಿಪತ್, ರೋಹ್ಟಕ್, ರೆವಾರಿ ಮತ್ತು ಪಲ್ವಾಲ್ ಸೇರಿದಂತೆ 14 ಜಿಲ್ಲೆಗಳಲ್ಲಿ ಉದ್ಯೋಗಿಗಳಿಗೆ ನವೆಂಬರ್ 22ರವರೆಗೆ ಮನೆಯಿಂದ ಕೆಲಸದ ಆಯ್ಕೆಯನ್ನು (ವರ್ಕ್ ಫ್ರಂ ಹೋಂ) ವಿಸ್ತರಿಸಲು ನಿರ್ಧರಿಸಿದೆ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಭಾರತದಲ್ಲಿ ಮೊದಲು ಸ್ಥಾಪಿಸಿದ ಬೆಸ-ಸಮ ಸಂಚಾರ ನಿಯಮವನ್ನು ಇದೀಗ ಹರಿಯಾಣ ಸರ್ಕಾರ ಕೂಡ ಜಾರಿಗೆ ತರಲು ನಿರ್ಧರಿಸಿದೆ. ಭಾರತದಲ್ಲಿ ಬೆಸ-ಸಮ ಯೋಜನೆಯಡಿ, ಕ್ರಮವಾಗಿ ಬೆಸ ಮತ್ತು ಸಮ ಸಂಖ್ಯೆಗಳಲ್ಲಿ ಕೊನೆಗೊಳ್ಳುವ ನಂಬರ್ ಪ್ಲೇಟ್‌ಗಳಿರುವ ವಾಹನಗಳಿಗೆ ಸಂಚರಿಸಲು ದೆಹಲಿಯಲ್ಲಿ ಪರ್ಯಾಯ ದಿನಗಳನ್ನು ಗುರುತಿಸಲಾಗಿದೆ. ಬೆಸ ಸಂಖ್ಯೆಗಳಲ್ಲಿ ಕೊನೆಗೊಳ್ಳುವ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ವಾಹನಗಳನ್ನು ಬೆಸ ದಿನಗಳಲ್ಲಿ ಮಾತ್ರ ರಸ್ತೆಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗುತ್ತಿದೆ. ಸಮ ಸಂಖ್ಯೆಯ ವಾಹನಗಳನ್ನು ಸಮ ದಿನಗಳಲ್ಲಿ ಸಂಚರಿಸಲು ಅನುಮತಿಸಲಾಗುತ್ತದೆ.
ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಹರಿಯಾಣ ಸರ್ಕಾರವು ಮಾಲಿನ್ಯದ ಮಟ್ಟದಲ್ಲಿ ಇಳಿಕೆ ಮತ್ತು ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ದೆಹಲಿಯ ಮಾರ್ಗವನ್ನೇ ಅನುಸರಿಸುತ್ತಿದೆ. ಇದಲ್ಲದೆ, ಎನ್‌ಸಿಆರ್ ವ್ಯಾಪ್ತಿಯಲ್ಲಿ ಗಾಳಿಯಲ್ಲಿನ ವಿಷಕಾರಿ ಮಬ್ಬನ್ನು ಗಮನದಲ್ಲಿಟ್ಟುಕೊಂಡು, ಮನೆಯಿಂದ ಕೆಲಸ ಮಾಡುವ ಆಯ್ಕೆಯ ವಿಸ್ತರಣೆಯನ್ನು ಸಹ ಸೂಕ್ತವೆಂದು ಪರಿಗಣಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಅಪಾಯದ ಮಟ್ಟಕ್ಕೆ ಏರುತ್ತಲೇ ಇದೆ. ಇದರಿಂದ ಮಕ್ಕಳಲ್ಲಿ ಆಸ್ತಮಾದಂತಹ ದೀರ್ಘಕಾಲದ ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿವೆ. ಇದಲ್ಲದೆ, ಮಾರಣಾಂತಿಕ ಮಾಲಿನ್ಯಕಾರಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮಕ್ಕಳ ಅರಿವಿನ ಬೆಳವಣಿಗೆಯನ್ನು ಗಂಭೀರವಾಗಿ ದುರ್ಬಲಗೊಳಿಸಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ
Delhi Pollution: ವೀಕೆಂಡ್ ಲಾಕ್ಡೌನ್ಗೆ ಸಿದ್ಧ, ಕೋರ್ಟ್ ಸೂಚನೆಗೆ ಕಾಯುತ್ತಿದ್ದೇವೆ; ದೆಹಲಿ ಸರ್ಕಾರ