ಲಕ್ಷಾಂತರ Airtel ಮೊಬೈಲ್ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್
ಲಕ್ಷಾಂತರ ಮಂದಿ ಏರ್ಟೆಲ್ ಗ್ರಾಹಕರ ಫೋನ್ ನಂಬರ್ಗಳ ಜೊತೆಗೆ ಖಾಸಗಿ ಮಾಹಿತಿ ಸಹ ಸೋರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಏರ್ಟೆಲ್ ಗ್ರಾಹಕರ ವಿಳಾಸ, ಆಧಾರ್ ಕಾರ್ಡ್ ಮತ್ತು ಇತರೆ ಖಾಸಗಿ ಮಾಹಿತಿಯನ್ನು ಹ್ಯಾಕರ್ಗಳು ಮಾರಾಟ ಮಾಡಲು ಯತ್ನಿಸಿದರು ಎಂಬ ಮಾಹಿತಿ ಸಹ ಸಿಕ್ಕಿದೆ.
ದೆಹಲಿ: ಲಕ್ಷಾಂತರ ಮಂದಿ ಏರ್ಟೆಲ್ ಗ್ರಾಹಕರ ಫೋನ್ ನಂಬರ್ಗಳ ಜೊತೆಗೆ ಖಾಸಗಿ ಮಾಹಿತಿ ಸಹ ಸೋರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಏರ್ಟೆಲ್ ಗ್ರಾಹಕರ ವಿಳಾಸ, ಆಧಾರ್ ಕಾರ್ಡ್ ಮತ್ತು ಇತರೆ ಖಾಸಗಿ ಮಾಹಿತಿಯನ್ನು ಹ್ಯಾಕರ್ಗಳು ಮಾರಾಟ ಮಾಡಲು ಯತ್ನಿಸಿದರು ಎಂಬ ಮಾಹಿತಿ ಸಹ ಸಿಕ್ಕಿದೆ.
ರಾಜಶೇಖರ್ ರಾಜಾಹಾರಿಯಾ ಎಂಬ ಇಂಟರ್ನೆಟ್ ಭದ್ರತಾ ಸಂಶೋಧಕ ಈ ಮಾಹಿತಿ ಸೋರಿಕೆಯನ್ನು ಮೊದಲು ಪತ್ತೆಹಚ್ಚಿದ್ದಾರೆ. ಅಂದ ಹಾಗೆ, ಗ್ರಾಹಕರ ಮಾಹಿತಿ ಕದ್ದ ಹ್ಯಾಕರ್ಗಳು ಅದನ್ನು ಬಳಸಿ ಏರ್ಟೆಲ್ ಕಂಪನಿ ಬಳಿ ಸುಲಿಗೆ ಮಾಡಲು ಮುಂದಾಗಿದ್ದರಂತೆ. ಸುಮಾರು 3,500 ಬಿಟ್ಕಾಯಿನ್ಗಳಿಗೆ ಬೇಡಿಕೆ ಸಹ ಇಟ್ಟಿದ್ದರಂತೆ.
ಆದರೆ, ಕಂಪನಿ ಅವರ ಬೇಡಿಕೆಗಳನ್ನು ಒಪ್ಪದೆ ಇದ್ದಾಗ ಸಿಟ್ಟಿಗೆದ್ದ ಹ್ಯಾಕರ್ ತಂಡ ಎಲ್ಲಾ ಮಾಹಿತಿಯನ್ನು ವೆಬ್ಸೈಟ್ ಒಂದರಲ್ಲಿ ಮಾರಲು ಮುಂದಾದರಂತೆ. ಸದ್ಯ, ಈ ವೆಬ್ಸೈಟ್ನ ತೆಗೆದುಹಾಕಲಾಗಿದೆ.
ಈ ನಡುವೆ, ಕೆಲ ಮೂಲಗಳ ಪ್ರಕಾರ ಮಾಹಿತಿ ಸೋರಿಕೆ, ಏರ್ಟೆಲ್ ಕಂಪನಿ ಕಡೆಯಿಂದ ನಡೆದಿಲ್ಲ ಬದಲಿಗೆ ಮೊಬೈಲ್ ಗ್ರಾಹಕರ ಮೇಲೆ ನಿಗಾವಹಿಸುವ ಸರ್ಕಾರಿ ಏಜೆನ್ಸಿಗಳ ಮುಖಾಂತರ ಆಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಸೋರಿಕೆಯಾದ ಎಲ್ಲಾ ಮಾಹಿತಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಏರ್ಟೆಲ್ ಗ್ರಾಹಕರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಇನ್ನು, ಈ ಕುರಿತು ಏರ್ಟೆಲ್ ಸಂಸ್ಥೆ ಪ್ರತಿಕ್ರಿಯಿಸಿದ್ದು ನಮ್ಮ ಕಂಪನಿ, ಗ್ರಾಹಕರ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಕರಣದಲ್ಲಿ ಸಹ ನಮ್ಮ ಕಡೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಹೇಳಿದೆ. ಜೊತೆಗೆ, ಈ ಬಗ್ಗೆ ಸೂಕ್ತ ಅಧಿಕಾರಿಗಳಿಗೆ ಮಾಹಿತಿ ಸಹ ನೀಡಿದ್ದೇವೆ ಎಂದು ಹೇಳಿದೆ.