Ajit Doval: ಭಾರತಕ್ಕೆ ರಷ್ಯಾ, ಚೀನಾ ಸಹವಾಸ ತಪ್ಪಿಸಲು ಅಮೆರಿಕ ಪ್ಲಾನ್; ಅಜಿತ್ ದೋವಲ್ ಅಮೆರಿಕ ಭೇಟಿಗೆ ವಿಶೇಷತೆ ಇದೆ
India-US Defence Partnership: ಅಜಿತ್ ದೋವಲ್ ಅವರು ಅಮೆರಿಕದಲ್ಲಿ ಅಲ್ಲಿನ ರಕ್ಷಣಾ ಇಲಾಖೆ ಉಪಕಾರ್ಯದರ್ಶಿ ಡಾ. ಕ್ಯಾತಲೀನ್ ಹಿಕ್ಸ್ ಅವರನ್ನು ನಿನ್ನೆ ಮಂಗಳವಾರ ಭೇಟಿ ಮಾಡಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಜೊತೆಗಾರಿಕೆಯ ಆದ್ಯತೆಗಳ ಬಗ್ಗೆ ಇವರಿಬ್ಬರು ಚರ್ಚಿಸಿದ್ದಾರೆ ಎಂದು ಪೆಂಟಗಾನ್ ಹೇಳಿಕೆ ನೀಡಿದೆ.
ವಾಷಿಂಗ್ಟನ್: ರಷ್ಯಾ ಮತ್ತು ಚೀನಾ ವಿರುದ್ಧ ಪರೋಕ್ಷವಾಗಿ ಶೀತಲ ಸಮರದಲ್ಲಿ ತೊಡಗಿದಂತಿರುವ ಅಮೆರಿಕಕ್ಕೆ ಇದೀಗ ಭಾರತದ ಜೊತೆಗಾರಿಕೆ (India US Defence Partnership) ಅಗತ್ಯ ಇದೆ. ರಷ್ಯಾ ಜೊತೆ ಭಾರತಕ್ಕಿರುವ ಸ್ನೇಹದ ಗಾಢತೆಯನ್ನು ತಗ್ಗಿಸಲು ಅಮೆರಿಕ ಯೋಜಿಸುತ್ತಿರುವ ಸಂಗತಿಯನ್ನು ಈ ಹಿಂದೆ ಹಲವು ವರದಿಗಳು ಹೇಳಿವೆ. ಭಾರತ ತನ್ನ ಅನೇಕ ಮಿಲಿಟರಿ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳು ಮತ್ತು ಬಿಡಿಭಾಗಗಳನ್ನು ರಷ್ಯಾದಿಂದ ಆಮದು ಮಾಡುತ್ತದೆ. ಇದನ್ನು ತಪ್ಪಿಸಲು ಅಮೆರಿಕ ಕೆಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತದ ಜೊತೆ ಅತ್ಯಾಧುನಿಕ ರಕ್ಷಣಾ ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಹಂತಕ್ಕೂ ಅಮೆರಿಕ ಹೋಗುತ್ತಿದೆ. ಇದೇ ವೇಳೆ, ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕಕ್ಕೆ ಭೇಟಿ ನೀಡಿರುವುದು ಇದೇ ಕಾರಣಕ್ಕೆ ಎನ್ನಲಾಗಿದೆ.
ಅಜಿತ್ ದೋವಲ್ ಅವರು ಅಮೆರಿಕದಲ್ಲಿ ಅಲ್ಲಿನ ರಕ್ಷಣಾ ಇಲಾಖೆ ಉಪಕಾರ್ಯದರ್ಶಿ (US Deputy Defence Secretary- ರಕ್ಷಣಾ ಉಪಸಚಿವೆ) ಡಾ. ಕ್ಯಾತಲೀನ್ ಹಿಕ್ಸ್ ಅವರನ್ನು ನಿನ್ನೆ ಮಂಗಳವಾರ ಭೇಟಿ ಮಾಡಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಜೊತೆಗಾರಿಕೆಯ ಆದ್ಯತೆಗಳ ಬಗ್ಗೆ ಇವರಿಬ್ಬರು ಚರ್ಚಿಸಿದ್ದಾರೆ ಎಂದು ಪೆಂಟಗಾನ್ ಹೇಳಿಕೆ ನೀಡಿದೆ.
ಜಿಇ ಜೆಟ್ ಎಂಜಿನ್ ತಯಾರಿಕೆ
ಗಂಭೀರವೆನಿಸಿದ ಮತ್ತು ಭವಿಷ್ಯತ್ತಿನದ್ದೆನ್ನಲಾದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತದ ಜೊತೆ ಅಮೆರಿಕ ಜೊತೆಗಾರಿಕೆಯು ಅಮೆರಿಕದ ಮಾಸ್ಟರ್ ಪ್ಲಾನ್ಗಳಲ್ಲಿ ಒಂದಾಗಿದೆ. ಈ ನಿಟ್ಟನಿನಲ್ಲಿ ಅಮೆರಿಕದ ಜನರಲ್ ಎಲೆಕ್ಟ್ರಿಕ್ ಸಂಸ್ಥೆಯ ಜೆಟ್ ಎಂಜಿನ್ ಅನ್ನು ಭಾರತದಲ್ಲಿ ತಯಾರಿಸಲು ಅನುವಾಗುವ ನಿಟ್ಟಿನಲ್ಲಿ ಅಮೆರಿಕ ಯೋಜನೆ ಹಮ್ಮಿಕೊಂಡಿದೆ.
ಮಿಲಿಟರಿ ಉಪಕರಣಗಳಲ್ಲಿ ಜೆಟ್ ಎಂಜಿನ್ ಪ್ರಮುಖವಾದುದು. ಇದರಲ್ಲಿ ರಷ್ಯಾ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ. ಇದನ್ನು ತಪ್ಪಿಸಲು ಜಿಇ ಜೆಟ್ ಎಂಜಿನ್ ತಯಾರಿಕೆಗೆ ಭಾರತಕ್ಕೆ ಅವಕಾಶ ಕೊಡಲಾದರಲ್ಲಿ. ಇದರಲ್ಲಿ ಆ ಎಂಜಿನ್ ತಯಾರಿಕೆಗೆ ಅಗತ್ಯ ಇರುವ ತಂತ್ರಜ್ಞಾನವನ್ನೂ ಭಾರತಕ್ಕೆ ಕೊಡಲಾಗುತ್ತದೆ. ಇಂಥದ್ದೊಂದು ಯೋಜನೆಯ ಪ್ರಸ್ತಾಪವನ್ನು ಜಿಇ ಕಂಪನಿಯೇ ಮುಂದಿಟ್ಟಿದ್ದು ಅಮೆರಿಕ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಈ ಪ್ರಸ್ತಾವಕ್ಕೆ ಅಮೆರಿಕ ಒಪ್ಪಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ.
ಜಿಇ ಎಂಜಿನ್ ಮಾತ್ರವಲ್ಲ, ಸೆಮಿಕಂಡಕ್ಟರ್, ಕ್ವಾಂಟಮ್ ಕಂಪ್ಯೂಟಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿ ತಯಾರಿಕೆಯಲ್ಲಿ ಎರಡೂ ದೇಶಗಳ ಸಹಭಾಗಿತ್ವ ಸ್ಥಾಪಿಸುವ ಉದ್ದೇಶ ಇದೆ.
ಇವೆಲ್ಲವೂ ಕೂಡ ಭಾರತವನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಅಮೆರಿಕದ ತಂತ್ರ. ಭಾರತ ಅತ್ಯಂತ ದೊಡ್ಡ ಮಾರುಕಟ್ಟೆಗಳಲ್ಲಿ ಒಂದು ಎಂಬುದು ಮಾತ್ರವಲ್ಲ, ಚೀನಾದ ಅಗಾಧ ಶಕ್ತಿಯ ನಿಯಂತ್ರಣಕ್ಕೆ ಭಾರತದ ಅಗತ್ಯತೆ ಅಮೆರಿಕಕ್ಕೆ ಇದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸಂಗತಿ.
ಇದೇ ವೇಳೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೊನ್ನೆ ಅಮೆರಿಕಕ್ಕೆ ಭೇಟಿ ನೀಡಿ ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲೈವಾನ್ ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರ ಮಧ್ಯೆ ಹಲವು ಮಹತ್ವದ ರಕ್ಷಣಾ ವಿಚಾರಗಳ ಬಗ್ಗೆ ಮಾತುಕತೆಯಾಗಿರುವುದು ತಿಳಿದುಬಂದಿದೆ. ಇಂದು ಅಜಿತ್ ದೋವಲ್ ಅವರು ಅಮೆರಿಕದ ಉಪ ರಕ್ಷಣಾ ಕಾರ್ಯದರ್ಶಿ ಡಾ. ಕ್ಯಾತಲೀನ್ ಹಿಕ್ಸ್ರನ್ನೂ ಭೇಟಿ ಮಾಡಿದ್ದಾರೆ.
ಸೆಪ್ಟಂಬರ್ ತಿಂಗಳಲ್ಲಿ ಜಿ20 ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭಾರತಕ್ಕೆ ಆಗಮಿಸಲಿದ್ದಾರೆ. ನಂತರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕ್ವಾಡ್ ಸದಸ್ಯರ ಸಭೆಗೂ ಅವರು ಹೋಗಲಿದ್ದು, ಅಲ್ಲಿ ಭಾರತದ ಪ್ರಧಾನಿ ಜೊತೆ ಮಾತುಕತೆ ನಡೆಸುವ ನಿರೀಕ್ಷೆ ಇದೆ.