ಅಪ್ಪ ನಾನು ಅಜಿತ್ ಪವಾರ್ ಜತೆ ವಿಮಾನದಲ್ಲಿ ಹೋಗ್ತಿದ್ದೀನಿ, ತಂದೆ ಜತೆ ವಿಮಾನ ಸಿಬ್ಬಂದಿಯ ಕೊನೆಯ ಮಾತು
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ ಐವರಲ್ಲಿ ವಿಮಾನ ಸೇವಕಿ ಪಿಂಕಿ ಮಾಲಿ ಕೂಡ ಒಬ್ಬರು. ಸಾವಿಗೂ ಮುನ್ನ ತನ್ನ ತಂದೆಗೆ ಕರೆ ಮಾಡಿ ಅಜಿತ್ ಪವಾರ್ ಜೊತೆ ಪ್ರಯಾಣಿಸುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಇದು ಇಬ್ಬರಿಗೂ ಕೊನೆಯ ಭೇಟಿಯಾಗಿತ್ತು. ಈ ದುರಂತವು ರಾಜ್ಯಕ್ಕೆ ಆಘಾತ ತಂದಿದೆ.

ಪುಣೆ, ಜನವರಿ 29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಬುಧವಾರ ಬೆಳಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದಲ್ಲಿ ಅವರ ಜತೆ ಇತರೆ ನಾಲ್ವರು ಸಿಬ್ಬಂದಿ ಇದ್ದರು ಅದರಲ್ಲಿ ಪಿಂಕಿ ಮಾಲಿ ಕೂಡ ಒಬ್ಬರು. ಸಾಯುವ ಮುನ್ನ ತಂದೆಗೆ ಕರೆ ಮಾಡಿ ಅಪ್ಪ ನಾನು ಇವತ್ತು ಅಜಿತ್ ಪವಾರ್ ಜತೆ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದೀನಿ ಗೊತ್ತಾ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಆದರೆ ಇಬ್ಬರಿಗೂ ಅದು ಕೊನೆಯ ಭೇಟಿಯಾಗಿತ್ತು.
ಮುಂಬೈನ ವರ್ಲಿಯ ನಿವಾಸಿ ಪಿಂಕಿ ತನ್ನ ತಂದೆಗೆ, ಅಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ವಿಮಾನದಲ್ಲಿ ಹೋಗುತ್ತಿದ್ದೇನೆ. ಅವರನ್ನು ಬಿಟ್ಟು ಬಂದ ನಂತರ, ನಾನು ನಾಂದೇಡ್‌ಗೆ ಹೋಗುತ್ತೇನೆ. ನಾವು ನಾಳೆ ಮಾತನಾಡೋಣ ಎಂದು ಹೇಳಿದ್ದು.
ಇತ್ತೀಚಿನ ಹಲವಾರು ಪ್ರವಾಸಗಳಲ್ಲಿ ಅವರು ಪವಾರ್ ಜೊತೆಗಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ, ಏಕೆಂದರೆ ಅಂತಹ ಘಟನೆಗಳ ಬಗ್ಗೆ ನನಗೆ ಯಾವುದೇ ತಾಂತ್ರಿಕ ಜ್ಞಾನವಿಲ್ಲ. ನಾನು ಸಂಪೂರ್ಣವಾಗಿ ಛಿದ್ರಗೊಂಡಿದ್ದೇನೆ. ನನ್ನ ಮಗಳ ಅಂತ್ಯಕ್ರಿಯೆಯನ್ನು ಗೌರವದಿಂದ ಮಾಡಲು ನನಗೆ ಅವಳ ದೇಹ ಬೇಕು. ನಾನು ಬಯಸುವುದು ಇಷ್ಟೇ ಎಂದು ಅವರು ಹೇಳಿದರು.
ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನ ಅಪಘಾತಕ್ಕೀಡಾಗಿತ್ತು.
ಮತ್ತಷ್ಟು ಓದಿ: ಕೇವಲ 20 ದಿನಗಳ ಹಿಂದಷ್ಟೇ ಶಿಷ್ಟಾಚಾರವನ್ನು ಮುರಿದು ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ್ದ ಅಜಿತ್ ಪವಾರ್
ವಿಮಾನದಲ್ಲಿ ಐದು ಮಂದಿ ಇದ್ದರು ಅವರಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ವಿಮಾನ ಸೇವಕಿ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್.
ವಿಮಾನದ ವಿವರಗಳ ಪ್ರಕಾರ, ವಿಮಾನವು ಬೆಳಗ್ಗೆ 8.10 ಕ್ಕೆ ಮುಂಬೈನಿಂದ ಹೊರಟು 8.45 ರ ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಯಿತು, 8.50 ಕ್ಕೆ ಅಪಘಾತಕ್ಕೀಡಾಯಿತು. ಫೆಬ್ರವರಿ 5 ರಂದು ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಗೆ ಮುನ್ನ ಪುಣೆ ಜಿಲ್ಲೆಯಲ್ಲಿ ನಾಲ್ಕು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಪವಾರ್ ತೆರಳುತ್ತಿದ್ದರು.
ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡ ನಂತರ, ತುರ್ತು ಸೇವೆಗಳು ಮತ್ತು ಹಿರಿಯ ಭದ್ರತಾ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಓಡೋಡಿ ಬಂದಿದ್ದರು. ರಕ್ಷಣಾ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
