ವಿಮಾನ ಪತನದಲ್ಲಿ ಡಿಸಿಎಂ ಅಜಿತ್ ಪವಾರ್ ನಿಧನ; ಇದುವರೆಗೂ ಏನೇನಾಯ್ತು?
Ajit Pawar Aircraft Crash: ಮಹಾರಾಷ್ಟ್ರದ ಬಾರಾಮತಿಗೆ ತೆರಳುವಾಗ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಇದರಿಂದ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ಹಿನ್ನೆಲೆಯಲ್ಲಿ 3 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ನಿಯಮಿತವಾಗಿ ರಾಷ್ಟ್ರಧ್ವಜ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು.

ಪುಣೆ, ಜನವರಿ 28: ಮಹಾರಾಷ್ಟ್ರದ ಪುಣೆ ಬಳಿ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಮತ್ತು ಇತರ 5 ಜನರು ಸಾವನ್ನಪ್ಪಿದ್ದಾರೆ. ಅಜಿತ್ ಪವಾರ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಅಜಿತ್ ಪವಾರ್ ಅವರ ನಿಧನದ ನಂತರ 3 ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದಿಲ್ಲ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಬಾರಾಮತಿಯಲ್ಲಿ ಇಳಿಯುವ ಮೊದಲೇ ಅಪಘಾತಕ್ಕೀಡಾಯಿತು. ವಿಮಾನ ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತು, ವಿಮಾನ ಛಿದ್ರವಾಯಿತು. ಅಜಿತ್ ಪವಾರ್ ಇಂದು ಬಾರಾಮತಿಯಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ತವರು ಕ್ಷೇತ್ರವಾದ ಬಾರಾಮತಿಗೆ ತೆರಳುತ್ತಿದ್ದರು. ಭದ್ರತಾ ಪಡೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿದವು.
Shocking & tragic
Maharashtra Deputy CM Ajit dada Pawar ji DEAD !!
He went by chartered flight from Mumbai to Baramati today morning
The plane crash landed in Baramati, his karmabhoomi & burst into flames 🔥
DGCA confirms no survivors
5 people – 3 passengers 1 pilot 1 crew… pic.twitter.com/OQDnPz8cgE
— PallaviCT (@pallavict) January 28, 2026
ಇಂದು ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗುವ ಆ 40 ನಿಮಿಷಗಳ ಕಾಲ ಏನೇನಾಯ್ತು? ಇದುವರೆಗೂ ಏನೆಲ್ಲ ಬೆಳವಣಿಗೆಗಳಾದವು ಎಂಬುದರ ಪೂರ್ತಿ ಮಾಹಿತಿ ಇಲ್ಲಿದೆ.
- ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್‌ನ ಲಿಯರ್‌ಜೆಟ್ 45 ವಿಮಾನ (ವಿಟಿ-ಎಸ್‌ಎಸ್‌ಕೆ) ಇಂದು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತು. ಬೆಳಿಗ್ಗೆ 8.45ರ ಸುಮಾರಿಗೆ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತು.
- ಕೆಟ್ಟ ಹವಾಮಾನದಿಂದಾಗಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್ಗೆ ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ಅತಿಯಾದ ಮಂಜು ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಆ ವಿಮಾನದಿಂದ ಕರೆ ಬಂದ ನಂತರ ಅವರಿಗೆ ಲ್ಯಾಂಡ್ ಮಾಡಲು ಸಲಹೆ ನೀಡಲಾಯಿತು.
- ಆಗ ಸಿಬ್ಬಂದಿಯ ಬಳಿ ಆಗಸದಲ್ಲಿ ಗಾಳಿ ಮತ್ತು ಗೋಚರತೆಯ ಬಗ್ಗೆ ವಿಚಾರಿಸಲಾಯಿತು. ಆಗ ಗಾಳಿಯು ಶಾಂತವಾಗಿದೆ ಮತ್ತು ಗೋಚರತೆ ಸುಮಾರು 3000 ಮೀಟರ್‌ಗಳಿವೆ ಎಂದು ಪೈಲಟ್ಗೆ ತಿಳಿಸಲಾಯಿತು.
- ಮುಂದೆ ವಿಮಾನವು ರನ್‌ವೇ 11ರ ಅಂತಿಮ ಮಾರ್ಗವನ್ನು ವರದಿ ಮಾಡಿದೆ. ಆದರೆ, ರನ್‌ವೇ ಅವರಿಗೆ ಕಾಣುತ್ತಿರಲಿಲ್ಲ. ಅಷ್ಟರಲ್ಲಿ ವಿಮಾನ ಪತನವಾಯಿತು. ಆ ವಿಮಾನದಲ್ಲಿ ಒಟ್ಟು 5 ಜನರಿದ್ದರು. ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನ ಬೆಳಿಗ್ಗೆ 8.50ಕ್ಕೆ ಪತನವಾಯಿತು.
- ಅಜಿತ್ ಪವಾರ್ ಅವರ ದೇಹವನ್ನು ಅವರ ಕೈಗಡಿಯಾರದಿಂದ ಗುರುತಿಸಲಾಯಿತು. ಈ ವಾಚ್ ಅವರ ಗುರುತಿನ ಮುಖ್ಯ ಸುಳಿವು ಆಯಿತು.
- ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಸಹ ಪೈಲಟ್ ಕ್ಯಾಪ್ಟನ್ ಶಾಂಭವಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತನಿಖೆಯ ನಂತರವೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬರಲಿದೆ.
- ಅಜಿತ್ ಪವಾರ್ ಅವರ ಜೊತೆ ಅವರ ಭದ್ರತಾ ಸಿಬ್ಬಂದಿ ವಿದೀಪ್ ಜಾಧವ್ ಇದ್ದರು. ಈ ಅಪಘಾತದಲ್ಲಿ ವಿದೀಪ್ ಜಾಧವ್ ಕೂಡ ಸಾವನ್ನಪ್ಪಿದರು.
- ಅಜಿತ್ ಪವಾರ್ ಅವರ ನಿಧನದ ನಂತರ, ಮಹಾರಾಷ್ಟ್ರ ಸರ್ಕಾರ ಇಂದಿನ ಎಲ್ಲಾ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಮಹಾರಾಷ್ಟ್ರದಲ್ಲಿ 3 ದಿನಗಳ ರಾಜ್ಯ ಶೋಕಾಚರಣೆ ಘೋಷಿಸಲಾಗಿದೆ.
- ಬಾರಾಮತಿ ವಿಮಾನ ಅಪಘಾತದ ತನಿಖೆ ಪೂರ್ಣ ವೇಗದಲ್ಲಿ ಆರಂಭವಾಗಿದೆ. ಎಎಐಬಿ (ವಿಮಾನ ಅಪಘಾತ ತನಿಖಾ ಬ್ಯೂರೋ) ತಂಡವು ದೆಹಲಿಯಿಂದ ಬಾರಾಮತಿಗೆ ತೆರಳಿದ್ದು, ತನಿಖೆ ನಡೆಸಲು ಸ್ಥಳಕ್ಕೆ ತೆರಳಲಿದೆ.
- ಈಗಾಗಲೇ ಅಜಿತ್ ಪವಾರ್ ಅವರ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
