ನೂಪುರ್ ಹತ್ಯೆಗೈದವರಿಗೆ ಬಹುಮಾನ ಘೋಷಿಸಿದ್ದ ಅಜ್ಮೇರ್ ಧಾರ್ಮಿಕ ಮುಖಂಡನ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 06, 2022 | 10:02 AM

ಭಾರತದಲ್ಲಿ ಮುಸ್ಲಿಮರನ್ನು ಬೇಕೆಂದೇ ಸಮಾಜದಿಂದ ಪ್ರತ್ಯೇಕಿಸಿ ಹತ್ಯೆ ಮಾಡಲಾಗುತ್ತಿದೆ ಎಂದು ಆತ ಆರೋಪಿಸಿದ್ದ.

ನೂಪುರ್ ಹತ್ಯೆಗೈದವರಿಗೆ ಬಹುಮಾನ ಘೋಷಿಸಿದ್ದ ಅಜ್ಮೇರ್ ಧಾರ್ಮಿಕ ಮುಖಂಡನ ಬಂಧನ
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ಬಂಧಿತ ಸಲ್ಮಾನ ಚಿಷ್ತಿ
Follow us on

ದೆಹಲಿ: ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡಿದವರಿಗೆ ತನ್ನ ಮನೆ ಮತ್ತು ಆಸ್ತಿ ಕೊಡುವುದಾಗಿ ಘೋಷಿಸಿದ್ದ ಅಜ್ಮೇರ್​ನ ಧಾರ್ಮಿಕ ಮುಖಂಡನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.  ನೂಪುರ್ ಹತ್ಯೆಗೆ ಕರೆ ನೀಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಸಲ್ಮಾನ್ ಚಿಷ್ತಿ ಎಂದು ಗುರುತಿಸಲಾಗಿದೆ. ವಿಡಿಯೊ ರೆಕಾರ್ಡ್ ಮಾಡಿದಾಗ ಅವನು ಕುಡಿತದ ಮತ್ತಿನಲ್ಲಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರವಾದಿ ಮೊಹಮದ್ ಪೈಗಂಬರ್ ಬಗ್ಗೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಖಂಡಿಸಿ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ನೂಪುರ್ ಶರ್ಮಾಗೆ ಬೆಂಬಲಿಸಿದ ಆರೋಪದ ಮೇಲೆ ಉದಯ್​ಪುರ್ ಮತ್ತು ಅಮರಾವತಿಯಲ್ಲಿ ತಲಾ ಒಬ್ಬರು ಕೊಲೆಯಾಗಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗಿತ್ತು. ನೂಪುರ್ ಶರ್ಮಾರ ತಲೆ ತಂದು ತೋರಿಸಿದವರಿಗೆ ನನ್ನ ಮನೆ ಮತ್ತು ಆಸ್ತಿ ಕೊಡುತ್ತೇನೆ ಎಂದು ಈತ ಘೋಷಿಸಿದ್ದ. ಖ್ವಾಜಾ ಸಾಹೇಬ್ ಮತ್ತು ಮೊಹಮದ್ ಸಾಹೇಬರ ಗೌರವವನ್ನೂ ಬಿಜೆಪಿ ನಾಯಕಿ ಹಾಳು ಮಾಡಿದ್ದಾರೆ. ಹೀಗಾಗಿಯೇ ಅವರನ್ನು ಕೊಂದವರಿಗೆ ತನ್ನ ಸರ್ವಸ್ವವನ್ನೂ ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ದ.

ಭಾರತದಲ್ಲಿ ಮುಸ್ಲಿಮರನ್ನು ಬೇಕೆಂದೇ ಸಮಾಜದಿಂದ ಪ್ರತ್ಯೇಕಿಸಿ ಹತ್ಯೆ ಮಾಡಲಾಗುತ್ತಿದೆ ಎಂದು ಆತ ಆರೋಪಿಸಿದ್ದ.

Published On - 9:56 am, Wed, 6 July 22