ಆಂಧ್ರಪ್ರದೇಶ: ಚಂದ್ರಬಾಬು ನಾಯ್ಡು ಗೃಹ ಬಂಧನ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

|

Updated on: Sep 12, 2023 | 6:21 PM

ತೀರ್ಪಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಪತ್ನಿ ನಾರಾ ಭುವನೇಶ್ವರಿ, ನನ್ನ ಪತಿ ಆಂಧ್ರಪ್ರದೇಶದ ಜನರ ಹಕ್ಕುಗಳಿಗಾಗಿ ಹೋರಾಡಿದರು. ಈಗ, ಅವರು ನಿರ್ಮಿಸಿದ ಕಟ್ಟಡದಲ್ಲಿ ಅವರನ್ನು ಬಂಧಿಯಾಗಿಡಲಾಗಿದೆ ಎಂದಿದ್ದಾರೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಡಿಪಿ ಶಾಸಕ ಹಾಗೂ ಚಿತ್ರನಟ ನಂದಮೂರಿ ಬಾಲಕೃಷ್ಣ ಅವರು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಆಂಧ್ರಪ್ರದೇಶ: ಚಂದ್ರಬಾಬು ನಾಯ್ಡು ಗೃಹ ಬಂಧನ ಅರ್ಜಿ ವಜಾಗೊಳಿಸಿದ ನ್ಯಾಯಾಲಯ
ಚಂದ್ರಬಾಬು ನಾಯ್ಡು
Follow us on

ಹೈದರಾಬಾದ್ ಸೆಪ್ಟೆಂಬರ್ 12: ಮಂಗಳವಾರ ಎಸಿಬಿ ನ್ಯಾಯಾಲಯ ಚಂದ್ರಬಾಬು ನಾಯ್ಡು (Chandrababu Naidu) ಅವರ ಗೃಹ ಬಂಧನ ಅರ್ಜಿಯನ್ನು ವಜಾಗೊಳಿಸಿದೆ. ಏತನ್ಮಧ್ಯೆ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಭದ್ರತೆ ಇದೆ ಎಂದು ಟಿವಿ9 ತೆಲುಗು ವರದಿ ಮಾಡಿದೆ. ನ್ಯಾಯಾಂಗ ಬಂಧನದ ಅವಧಿಗೆ ಜೈಲಿನ ಭದ್ರತೆಯ ಎಲ್ಲಾ ಅಂಶಗಳನ್ನು ಸಿಐಡಿ ಸ್ಪಷ್ಟವಾಗಿ ಹೇಳಿದೆ ಎಂದು ಎಸಿಬಿ ನ್ಯಾಯಾಲಯದ ನ್ಯಾಯಾಧೀಶರು ಹೇಳಿದರು. ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಭ್ರಷ್ಟಾಚಾರ(Skill development scam) ಆರೋಪದ ಮೇಲೆ ನಾಯ್ಡು ಅವರನ್ನು ಶನಿವಾರ ಬಂಧಿಸಲಾಗಿತ್ತು. ಬಿಗಿ ಭದ್ರತೆಯ ನಡುವೆ ಅವರನ್ನು ಸೋಮವಾರ ಬೆಳಗ್ಗೆಯಿಂದ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ತೀರ್ಪಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಪತ್ನಿ ನಾರಾ ಭುವನೇಶ್ವರಿ, ನನ್ನ ಪತಿ ಆಂಧ್ರಪ್ರದೇಶದ ಜನರ ಹಕ್ಕುಗಳಿಗಾಗಿ ಹೋರಾಡಿದರು. ಈಗ, ಅವರು ನಿರ್ಮಿಸಿದ ಕಟ್ಟಡದಲ್ಲಿ ಅವರನ್ನು ಬಂಧಿಯಾಗಿಡಲಾಗಿದೆ ಎಂದಿದ್ದಾರೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಡಿಪಿ ಶಾಸಕ ಹಾಗೂ ಚಿತ್ರನಟ ನಂದಮೂರಿ ಬಾಲಕೃಷ್ಣ ಅವರು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಕೌಶಲ ಅಭಿವೃದ್ಧಿ ವಿಚಾರದಲ್ಲಿ ಭ್ರಷ್ಟಾಚಾರ ನಡೆದರೆ ಸಾಕ್ಷ್ಯ ತೋರಿಸಬೇಕಲ್ಲವೇ? ಆರೋಪಪಟ್ಟಿ ಏಕೆ ಸಲ್ಲಿಸಿಲ್ಲ? ಈ ಸರ್ಕಾರ ರಾಜಕೀಯ ಸೇಡು ತೋರಿಸುತ್ತಿದೆಯೇ ಹೊರತು ಬೇರೇನೂ ಮಾಡಿಲ್ಲ ಎಂದು ಅವರು ಗುಡುಗಿದ್ದಾರೆ.

ಆಂಧ್ರಪ್ರದೇಶ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು
ಎಸ್‌ಐಟಿ ವಾದವನ್ನು ಒಪ್ಪಿಕೊಂಡಿರುವ ಎಸಿಬಿ ನ್ಯಾಯಾಲಯವು ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬುಗೆ ಸೆ.22 ರ ವರೆಗೆ, ಅಂದರೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಅಧಿಕಾರಿಗಳು ಶನಿವಾರ ನಂದ್ಯಾಲದಲ್ಲಿ ಬಂಧಿಸಿ ವಿಜಯವಾಡ ಸಿಐಡಿ ಕಚೇರಿಗೆ ಕರೆದೊಯ್ದಿದ್ದರು. ಒಟ್ಟು 34 ಆರೋಪಗಳನ್ನು ದಾಖಲಿಸಿಕೊಂಡಿರುವ ಸಿಐಡಿ, ಚಂದ್ರಬಾಬು ಅವರನ್ನು ವಿಚಾರಣೆ ನಡೆಸಿದ ಬಳಿಕ ಭಾನುವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಕೌಶಲ್ಯಾಭಿವೃದ್ಧಿ ಪ್ರಕರಣದ ಸಂಚಿನ ಸೂತ್ರಧಾರಿ ಚಂದ್ರಬಾಬು ಎಂದು ಸಿಐಡಿ ಎಸಿಬಿ ನ್ಯಾಯಾಲಯಕ್ಕೆ ರಿಮಾಂಡ್ ವರದಿ ಸಲ್ಲಿಸಿದೆ.

ಇದನ್ನೂ ಓದಿ: ಚಂದ್ರಬಾಬು ಅರೆಸ್ಟ್ ತಾಜಾ ಬೆಳವಣಿಗೆಗಳು: ಚಂದ್ರಬಾಬು ಜೀವಕ್ಕೆ ಅಪಾಯವಿದೆ ಎಂದ ಸುಪ್ರೀಂಕೋರ್ಟ್‌ ವಕೀಲ, ಸದ್ಯಕ್ಕಿಲ್ಲ ಜಾಮೀನು ಎಂದ ಕೋರ್ಟ್​​

ಕೌಶಲಾಭಿವೃದ್ಧಿ ಹಗರಣ ನಡೆದ ರೀತಿಯನ್ನು ವಿವರಿಸಿದ ಸಿಐಡಿ, ಚಂದ್ರಬಾಬು ಆದೇಶದ ಮೇರೆಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಆರೋಪಿಯನ್ನಾಗಿ ಸೇರಿಸಲು ಸಿಐಡಿ ಮೆಮೊ ಸಲ್ಲಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ