ದೆಹಲಿಯಲ್ಲಿ ಮತ್ತೊಂದು ವಾರದ ಅವಧಿಗೆ ಲಾಕ್​ಡೌನ್ ವಿಸ್ತರಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 01, 2021 | 9:37 PM

ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಮೆಡಿಕಲ್ ಶಾಪ್, ತರಕಾರಿ ಅಂಗಡಿ, ಕಿರಾಣಾ ಅಂಗಡಿ ಮೊದಲಾದ ಅಗತ್ಯ ಸೇವೆಗಳಿಗೆ ಅನುಮತಿ ಇರುತ್ತದೆ. ಆದರೆ, ಅಂಗಡಿಗಳ ಮಾಲೀಕರು ಮತ್ತು ಗ್ರಾಹಕರು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ದೆಹಲಿಯಲ್ಲಿ ಮತ್ತೊಂದು ವಾರದ ಅವಧಿಗೆ ಲಾಕ್​ಡೌನ್ ವಿಸ್ತರಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿಯಲ್ಲಿ ಲಾಕ್​ಡೌನ್​
Follow us on

ನವದೆಹಲಿ: ದೆಹಲಿಯಲ್ಲಿ ಕೊವಿಡ್-19 ಸೊಂಕಿನ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರವು ಈಗ ಜಾರಿಯಲ್ಲಿವ ಲಾಕ್​ಡೌನ್​ ಅನ್ನು ಮತ್ತೊಂದು ವಾರದ ಅವಧಿಗೆ ವಿಸ್ತರಿಸುವ ನಿರ್ಧಾರವನ್ನು ಶನಿವಾರದಂದು ತೆಗೆದುಕೊಂಡಿತು. ಈ ಕುರಿತು ಟ್ವೀಟ್​ ಮಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ‘ದೆಹಲಿಯಲ್ಲಿ ಲಾಕ್​ಡೌನ್ ಒಂದು ಅವಧಿಯವರೆಗೆ ವಿಸ್ತರಿಸಲಾಗಿದೆ,’ ಎಂದಿದ್ದಾರೆ. ಈ ನಿರ್ಧಾರದ ಅನುಗುಣವಾಗಿ ದೆಹಲಿಯಲ್ಲಿ ಲಾಕ್​ಡೌನ್​ ಮೇ 10 ಬೆಳಗ್ಗೆ 5 ಗಂಟೆಯವರಗೆ ಮುಂದುವರಿಯಲಿದೆ. ಈ ಹಿಂದೆ ಪ್ರಕಟಿಸಿದ ಹಾಗೆಯೇ, ಲಾಕ್​ಡೌನ್ ಸಡಲಿಕೆ ಮತ್ತು ನಿರ್ಬಂಧಗಳು ಮುಂದುವರಿಯಲಿವೆ. ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಮೆಡಿಕಲ್ ಶಾಪ್, ತರಕಾರಿ ಅಂಗಡಿ, ಕಿರಾಣಾ ಅಂಗಡಿ ಮೊದಲಾದ ಅಗತ್ಯ ಸೇವೆಗಳಿಗೆ ಅನುಮತಿ ಇರುತ್ತದೆ. ಆದರೆ, ಅಂಗಡಿಗಳ ಮಾಲೀಕರು ಮತ್ತು ಗ್ರಾಹಕರು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಕಳೆದ 15 ದಿನಗಳಿಂದ ರಾಷ್ಟ್ರದ ರಾಜಧಾನಿಯಲ್ಲಿ ಕೊವಿಡ್​-19 ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್​ಗಳ ತೀವ್ರ ಕೊರತೆ ತಲೆದೋರಿದೆ. ಸಾವುಗಳ ಸಂಖ್ಯೆ ಸಹ ವಿಪರೀತವಾಗಿದ್ದು ಚಿತಾಗಾರಗಳ ಮುಂದೆ ಅಂಬ್ಯುಲೆನ್ಸ್​ಗಳು ಸಾಲುಗಟ್ಟಿರುವುದು ಸಾಮಾನ್ಯ ದೃಶ್ಯವಾಗಿದೆ. ಕೆಲ ದಿನಗಳಿಂದ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಸಿಲಿಂಡರ್​ಗಳ ಕೊರತೆ ಎದುರಿಸುತ್ತಿವೆ.

ಶನಿವಾರದಂದು ವೈದ್ಯಕೀಯ ಆಕ್ಸಿಜನ್ ಕೊರತೆಯಿಂದಾಗಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ 12 ಸೋಂಕಿತರು ಮತ್ತೊಬ್ಬ ಡಾಕ್ಟರ್ ಬಲಿಯಾಗಿದ್ದಾರೆ. ‘ಚಿಂತಾಜನಕದ ಸ್ಥಿತಿಯಲ್ಲಿರುವ ಇನ್ನೂ 5 ರೋಗಿಗಳನ್ನು ಕೃತಕ ಉಸಿರಾಟದ ಮೂಲಕ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ,’ ಎಂದು ಆಸ್ಪತ್ರೆಯ ನಿರ್ದೇಶಕ ಎಸ್.ಸಿ.ಗುಪ್ತಾ ಹೇಳಿದ್ದಾರೆ.

ಸದರಿ ಘಟನೆಯ ಬಗ್ಗೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ‘ಈ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ಸಕಾಲದಲ್ಲಿ ಆಮ್ಲಜನಕ ನೀಡಿ ಅವರ ಪ್ರಾಣಗಳನ್ನು ಉಳಿಸಬಹುದಾಗಿತ್ತು. ದೆಹಲಿಗೆ ಅದರೆ ಪಾಲಿನ ಆಕ್ಸಿಜನ್ ಸಿಗಬೇಕಿದೆ. ನಮ್ಮ ಜನ ಹೀಗೆ ಸಾಯುವುದನ್ನು ನೋಡಲು ಸಾಧ್ಯವಿಲ್ಲ. ದೆಹಲಿಗೆ 976 ಟನ್​ಗಳಷ್ಟು ಆಮ್ಲಜನಕದ ಅವಶ್ಯಕತೆಯಿದೆ. ಆದರೆ ಶುಕ್ರವಾರ ನಮಗೆ ಕೇವಲ 312 ಟನ್​ ಮಾತ್ರ ಸಿಕ್ಕಿದೆ. ಅಷ್ಟು ಚಿಕ್ಕ ಪ್ರಮಾಣದ ಆಕಸಿಜನ್​ನನೊಂದಿಗೆ ದೆಹಲಿ ಹೇಗೆ ಉಸಿರಾಡಬಲ್ಲದು,’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ ದೆಹಲಿಯ 95 ವ್ಯಾಪಾರಿ ಸಂಘಗಳು ದೆಹಲಿಯ ಲೆಪ್ಟಿನೆಂಟ್ ಜನರಲ್ ಅನಿಲ್ ಬೈಜಲ್ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸೋಂಕನ್ನು ತಡೆಯಲು ಮೇ 15ರವರೆಗೆ ಲಾಕ್​ಡೌನ್ ವಿಸ್ತರಿಸಬೇಕೆಂದು ಆಗ್ರಹಿಸಿದ್ದರು.

ಇದನ್ನೂ ಓದಿ: Delhi Lockdown : ರಾಷ್ಟ್ರ ರಾಜಧಾನಿ ದೆಹಲಿ ಲಾಕ್​ಡೌನ್| ಸಾಗರೋಪಾದಿಯಲ್ಲಿ ಊರುಗಳತ್ತ ಹೊರಟ ಜನ.! 

ಇದನ್ನೂ ಓದಿ: ಜನರು ಸಾಯುವುದನ್ನು ಕಂಡು ಕಣ್ಣು ಮುಚ್ಚಿಕೊಂಡು ಇರಲಾಗದು; ಕೇಂದ್ರ ಸರ್ಕಾರದ ಕಿವಿ ಹಿಂಡಿದ ದೆಹಲಿ ಹೈಕೋರ್ಟ್

Published On - 9:37 pm, Sat, 1 May 21