ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯೇ? ವಿರೋಧಿಗಳಿಗೆ ಅಮಿತ್ ಶಾ ಕೊಟ್ಟ ಉತ್ತರ ಹೀಗಿತ್ತು
ಮೋದಿ ಅವರಂಥ ಅತ್ಯುತ್ತಮ ಕೇಳುಗನನ್ನು ನಾನು ನೋಡಿಯೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಹಾಗೂ ಕಾರ್ಯವೈಖರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘ನರೇಂದ್ರ ಮೋದಿ ಸರ್ವಾಧಿಕಾರಿ, ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ’ ಎಂಬ ಆರೋಪಗಳಿಗೆ ಉತ್ತರಿಸಿರುವ ಅವರು, ‘ಮೋದಿ ಅವರಂಥ ಕೇಳಗನನ್ನು ನಾನು ನಮ್ಮ ಕಾಲದಲ್ಲಿ ನೋಡಲೇ ಇಲ್ಲ’ ಎಂದು ಹೇಳಿದರು.
‘ಇವೆಲ್ಲ ಆಧಾರ ರಹಿತ ಆರೋಪಗಳು. ಮೋದಿ ಅವರಂಥ ಅತ್ಯುತ್ತಮ ಕೇಳುಗನನ್ನು ನಾನು ನೋಡಿಯೇ ಇಲ್ಲ. ಯಾವುದೇ ಸಮಸ್ಯೆಯ ಬಗ್ಗೆ ಸಭೆಗಳು ನಡೆದರೆ, ಮೋದಿ ಅತ್ಯಂತ ಕಡಿಮೆ ಮಾತನಾಡುತ್ತಾರೆ. ಅಷ್ಟೊಂದು ಯೋಚಿಸುವಂಥದ್ದು ಏನಿದೆ ಎಂದು ನಾವು ಹಲವು ಬಾರಿ ಯೋಚಿಸಿದ್ದು ಇದೆ. ಎರಡು-ಮೂರು ಸಭೆಗಳ ನಂತರ ಸಮಾಧಾನ ಚಿತ್ತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಸರ್ಕಾರ ನಿರ್ವಹಿಸುವ ಸಂಸತ್ ಟಿವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದರು.
‘ಮೋದಿ ಅವರು ಭಾಗವಹಿಸುವ ಸಭೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಒಂದು ಅಂಶ ಮನವರಿಕೆಯಾಗಿರುತ್ತದೆ. ಯಾವುದೇ ವ್ಯಕ್ತಿ ಏನು ಹೇಳುತ್ತಿದ್ದಾರೆ ಎಂಬ ಅಂಶಕ್ಕೆ ಮೋದಿ ಹೆಚ್ಚು ಗಮನ ನೀಡುತ್ತಾರೆ. ಯಾರು ಹೇಳುತ್ತಿದ್ದಾರೆ ಎನ್ನುವುದಕ್ಕಿಂತಲೂ ಏನು ಹೇಳುತ್ತಿದ್ದಾರೆ ಎನ್ನುವುದು ಮೋದಿ ಅವರಿಗೆ ಮುಖ್ಯ. ಪ್ರಧಾನಿಯಾಗಿ ತಮ್ಮ ನಿರ್ಧಾರಗಳನ್ನು ಉಳಿದವರ ಮೇಲೆ ಹೇರುತ್ತಾರೆ ಎಂಬ ಆರೋಪವೂ ಸತ್ಯಕ್ಕೆ ದೂರವಾದುದು. ಕೇಂದ್ರ ಸಚಿವ ಸಂಪುಟವು ಹಿಂದೆಂದೂ ಇಷ್ಟು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸಿದ ಉದಾಹರಣೆ ಇಲ್ಲ’ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಂತೆ ಗೃಹ ಸಚಿವ ಅಮಿತ್ ಶಾ ಸಹ ಗುಜರಾತ್ ಮೂಲದವರೇ ಆಗಿದ್ದಾರೆ. ನರೇಂದ್ರ ಮೋದಿ ಅವರು ವಿವಿಧ ಹಂತಗಳಲ್ಲಿ ಅಧಿಕಾರ ನಿರ್ವಹಿಸುತ್ತಿದ್ದ ದಿನಗಳಲ್ಲಿಯೂ ಅಮಿತ್ ಶಾ ಅವರು ಮೋದಿಯ ಒಡನಾಡಿಯೇ ಆಗಿದ್ದರು. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಸರ್ಕಾರದಲ್ಲಿಯೂ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು.
ರೈತ ಚಳವಳಿ ವಿಚಾರದಲ್ಲಿಯೂ ಪ್ರಧಾನಿಯನ್ನು ಅಮಿತ್ ಶಾ ಸಮರ್ಥಿಸಿಕೊಂಡರು. ಯಾವ ಉದ್ದೇಶದಿಂದ ಸರ್ಕಾರ ಕೃಷಿ ಸುಧಾರಣಾ ಕಾನೂನು ಜಾರಿಗೆ ತರಲು ಮುಂದಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ರೈತರಿಗೆ ನೆರವಾಗಲು ಬಿಜೆಪಿ ಸರ್ಕಾರವು ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
‘ಪ್ರಸ್ತುತ ದೇಶದ 11 ಕೋಟಿ ರೈತರಿಗೆ ವರ್ಷಕ್ಕೆ ₹ 6000 ಪಡೆಯುತ್ತಿದ್ದಾರೆ. ₹ 1.5 ಲಕ್ಷ ಕೋಟಿ ಮೊತ್ತವನ್ನು ರೈತರಿಗಾಗಿ ವೆಚ್ಚ ಮಾಡಲಾಗಿದೆ. ಯುಪಿಎ ಸರ್ಕಾರವು ಹಿಂದೊಮ್ಮೆ ₹ 60,000 ಕೋಟಿ ಮೊತ್ತದಷ್ಟು ಸಾಲ ಮನ್ನಾ ಮಾಡಿತ್ತು. ಈ ಮೊತ್ತವು ಬ್ಯಾಂಕ್ಗೆ ಬಂದಿತ್ತೇ ವಿನಃ ರೈತರಿಗೆ ಏನೂ ಸಿಕ್ಕಿರಲಿಲ್ಲ. ಆದರೆ ನಮ್ಮ ಸರ್ಕಾರ ನೀಡುತ್ತಿರುವ ₹ 1.5 ಲಕ್ಷ ಕೋಟಿ ಮೊತ್ತವು ರೈತರಿಗೆ ನೇರವಾಗಿ ತಲುಪುತ್ತಿದೆ. ಇದರಲ್ಲಿ ಬ್ಯಾಂಕ್ ಸಾಲದ ಮೊತ್ತ ಸೇರಿಲ್ಲ. ದೇಶದಲ್ಲಿ ಕೃಷಿಗಾಗಿ ಸರಾಸರಿ 1.5ರಿಂದ 2 ಎಕರೆ ಭೂಮಿ ಲಭ್ಯವಿದೆ. ಈ ಭೂಮಿಯಲ್ಲಿ ಉಳುಮೆ ಸೇರಿದಂತೆ ಬೇಸಾಯದ ಕೆಲಸಗಳಿಗಾಗಿ ಸರ್ಕಾರವು ರೈತರಿಗೆ ತಲಾ ₹ 6,000 ನೀಡುತ್ತಿದೆ’ ಎಂದರು.
ಇದನ್ನೂ ಓದಿ: Indian Space Association: ಭಾರತೀಯ ಬಾಹ್ಯಾಕಾಶ ಒಕ್ಕೂಟಕ್ಕೆ ಅ. 11ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ ಇದನ್ನೂ ಓದಿ: 2024ರ ಚುನಾವಣೆಯಲ್ಲೂ ಗೆಲ್ಲುತ್ತೇವೆ, ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ: ಅಮಿತ್ ಶಾ
Published On - 4:05 pm, Sun, 10 October 21