ವೇದಿಕೆಯಲ್ಲಿ ಮಾಜಿ ರಾಜ್ಯಪಾಲೆ​​ ತಮಿಳ್​​ಸಾಯಿಗೆ ಗದರಿದ ಅಮಿತ್ ಶಾ, ಅಣ್ಣಾಮಲೈ ವಿರುದ್ಧ ನೀಡಿದ ಆ ಹೇಳಿಕೆ ಕಾರಣವೇ?

|

Updated on: Jun 12, 2024 | 2:36 PM

ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅಮಿತ್​​​ ಶಾ ಅವರು ಮಾಜಿ ರಾಜ್ಯಪಾಲೆ​​ ತಮಿಳ್​​ಸಾಯಿಗೆ ಗದರಿದ್ದಾರೆ. ಅಷ್ಟಕ್ಕೂ ಅಮಿತ್​​​ ಶಾ ತಮಿಳ್​​ಸಾಯಿ ಮೇಲೆ ಯಾಕೆ ಕೋಪಗೊಂಡಿದ್ದಾರೆ. ಇದಕ್ಕೆ ತಮಿಳ್​​ಸಾಯಿ ಹಾಗೂ ಅಣ್ಣಾಮಲೈ ನಡುವಿನ ರಾಜಕೀಯ ಗೊಂದಲ ಕಾರಣವೇ? ಅಣ್ಣಾಮಲೈ ಹಾಗೂ ತಮಿಳ್​​ಸಾಯಿ ನಡೆದ ರಾಜಕೀಯ ಗುದ್ದಾಟ ಏನು? ಇಲ್ಲಿದೆ ನೋಡಿ.

ವೇದಿಕೆಯಲ್ಲಿ ಮಾಜಿ ರಾಜ್ಯಪಾಲೆ​​ ತಮಿಳ್​​ಸಾಯಿಗೆ ಗದರಿದ ಅಮಿತ್ ಶಾ, ಅಣ್ಣಾಮಲೈ ವಿರುದ್ಧ ನೀಡಿದ ಆ ಹೇಳಿಕೆ ಕಾರಣವೇ?
ಅಮಿತ್​​​ ಶಾ
Follow us on

ಆಂಧ್ರಪ್ರದೇಶ, ಜೂ.12: ಇಂದು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಸಮಾರಂಭದಲ್ಲಿ ಎನ್​​​ಡಿಎ ಮಿತ್ರಪಕ್ಷದ ನಾಯಕರು ಕೂಡ ಭಾಗಿಯಾಗಿದ್ದರು. ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು, ಕೇಂದ್ರ ಸಚಿವರು ಉಪಸ್ಥಿತರಿದ್ದರು. ಈ ವೇಳೆ ವೇದಿಕೆಯಲ್ಲಿ ಅಮಿತ್​​​​​ ಅವರು ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್​​ಸಾಯಿ (Tamilisai Soundararajan) ಸೌಂದರರಾಜನ್ ಅವರನ್ನು ಗದರಿದ್ದಾರೆ. ಆದರೆ ಯಾಕೆ ಗದರಿದ್ದಾರೆ ಎಂಬುದು ಇನ್ನು ತಿಳಿದಿಲ್ಲ. ಮೂಲಗಳ ಪ್ರಕಾರ ಈ ಹಿಂದೆ ಅಂದರೆ ಚುನಾವಣೆ ಫಲಿತಾಂಶ ನಂತರ ತಮಿಳುನಾಡಿನಲ್ಲಿ ನಡೆದ ರಾಜಕೀಯ ಕಿತ್ತಾಟಗಳು ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್​​​ ಆಗಿದೆ.

ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅಮಿತ್​​​ ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ವೇದಿಕೆ ಮೇಲೆ ತಮಿಳ್​​ಸಾಯಿ ಸೌಂದರರಾಜನ್ ಬಂದು ಎಲ್ಲರ ಜತೆಗೆ ಮಾತನಾಡಿದ್ದಾರೆ. ತಕ್ಷಣ ಅಮಿತ್​​​​​ ಅವರು ತಮಿಳ್​​ಸಾಯಿ ಅವರನ್ನು  ಹತ್ತಿರ ಕರೆದು ಖಡಕ್​​​​​ ಆಗಿ ಮಾತನಾಡಿದ್ದಾರೆ. ಇದೀಗ ಈ ವಿಡಿಯೋ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಚುನಾವಣೆ ನಂತರ ತಮಿಳುನಾಡಿನ ಬಿಜೆಪಿಯಲ್ಲಿ ಗೊಂದಲಗಳು ಸೃಷ್ಟಿಯಾಗಿತ್ತು. ಪ್ರಸ್ತುತ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಸ್ವಪಕ್ಷಿಗಳೇ ಗರಂ ಆಗಿದ್ದರು. ಆದರೆ ಇದರ ಹಿಂದೆ ರಾಜಕೀಯ ಪಿತ್ತೂರಿ ಇದೆ ಎಂದು ಹೇಳಲಾಗಿದೆ. ಅಣ್ಣಾಮಲೈ ತಮಿಳುನಾಡು ರಾಜಕೀಯದಲ್ಲಿ ಒಂದು ಬಿರುಗಾಳಿಯನ್ನು ಸೃಷ್ಟಿಸಿದ್ದಾರೆ ಎಂದು ಹೇಳಲಾಗಿತ್ತು, ಈ ಹಿಂದೆ ಎನ್​​​ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಅವರೇ ತಮಿಳುನಾಡು ಬಿಜೆಪಿ ಬಗ್ಗೆ ಶ್ಲಾಘಿಸಿದ್ದರು. ಅಣ್ಣಾಮಲೈ ಸಂಘಟನೆ ಹಾಗೂ ಬಿಜೆಪಿಯನ್ನು ತಮಿಳುನಾಡಿನಲ್ಲಿ ಬಲ ಪಡಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಇದು ಅಣ್ಣಾಮಲೈ ಅವರನ್ನು ವಿರೋಧಿಸಿದವರಿಗೆ ಉತ್ತಮವಾಗಿತ್ತು.

ತಮಿಳುನಾಡಿನಲ್ಲಿ ಬಿಜೆಪಿ ಸೋಲಿಗೆ ಅಣ್ಣಾಮಲೈ ಕಾರಣ?

ಕಳೆದ ಕೆಲವು ದಿನಗಳಿಂದ ಅಣ್ಣಾಮಲೈ ಮತ್ತು ತಮಿಳಿಸೈ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕರು ಮೌನವಾಗಿದ್ದಾರೆ. ಮಾಜಿ ಮಿತ್ರಪಕ್ಷವಾದ ಎಐಎಡಿಎಂಕೆಯ ನಿಲುವಿನ ವಿಚಾರವಾಗಿ ಈ ಗದ್ದಲ ಉಂಟಾಗಿದೆ. ಒಂದು ವೇಳೆ ಎಐಎಡಿಎಂಕೆ ಜತೆಯಾಗಿ ಬಿಜೆಪಿ ಸ್ಪರ್ಧಿಸುತ್ತಿದ್ದರೆ, 30 ಸ್ಥಾನಗಳನ್ನು ಗೆಲ್ಲುತ್ತಿದ್ದರು ಎಂದು ಎಐಎಡಿಎಂಕೆಯ ಮಾಜಿ ಸಚಿವ ಎಸ್‌ಪಿ ವೇಲುಮಣಿ ಹೇಳಿದ್ದಾರೆ. ಈ ಹಿಂದೆ ಎಲ್ ಮುರುಗನ್ ಮತ್ತು ತಮಿಳಿಸೈ ಸೌಂದರರಾಜನ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಗಾ ಈ ಸಮಸ್ಯೆ ಇರಲಿಲ್ಲ. ಅಣ್ಣಾಮಲೈ ಬಿಜೆಪಿಯ ರಾಜ್ಯಾಧ್ಯಕ್ಷರಾದ ನಂತರವೇ ಸಮಸ್ಯೆಗಳು ಪ್ರಾರಂಭವಾದವು. ಮೈತ್ರಿ ಯಥಾಸ್ಥಿತಿಯಲ್ಲಿದ್ದರೆ, ಈ ಲೋಕಸಭೆಯಲ್ಲಿ 35 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.

ಎಸ್‌ಪಿ ವೇಲುಮಣಿ ಅವರು ಈ ಹೇಳಿಕೆ ನೀಡುವ ಮೂಲಕ ತಮಿಳಿಸೈ ಸೌಂದರರಾಜನ್ ಅವರನ್ನು ಬೆಂಬಲಿದ್ದಾರೆ. ಇನ್ನು ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಎಐಎಡಿಎಂಕೆ ಸ್ವಂತವಾಗಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾದಾಗ ವೇಲುಮಣಿ ಅವರ ಹೇಳಿಕೆಯನ್ನು ಹೇಗೆ ಒಪ್ಪಿಕೊಳ್ಳಬಹುದು ಎಂದು ಹೇಳಿದ್ದಾರೆ. ಆದರೆ ತಮಿಳಿಸೈ ಸೌಂದರರಾಜನ್ ಅವರು ಎಸ್‌ಪಿ ವೇಲುಮಣಿ ಅವರ ಹೇಳಿಕೆ ವಾಸ್ತವಿಕವಾಗಿದೆ. ಬಿಜೆಪಿಯು ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಡಿಎಂಕೆ ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತಿರಲಿಲ್ಲ. ಇದು ಸಮೀಕ್ಷೆಯ ಅಂಕಗಣಿತವಾಗಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಎಲ್ಲಾ 39 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ ಎಂದು ಹೇಳಿದ್ದಾರೆ.


2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ಒಂದೇ ಅಂಕೆಯಿಂದ ಮತ ಹಂಚಿಕೆಯನ್ನು ಈಗ ಎರಡಂಕಿಗೆ ಹೆಚ್ಚಿಸುವ ಮೂಲಕ ಅಣ್ಣಾಮಲೈ ಅವರು ಕೇಂದ್ರ ನಾಯಕತ್ವವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿಯ ಮಾಜಿ ಬೌದ್ಧಿಕ ವಿಭಾಗದ ಕಾರ್ಯಾಧ್ಯಕ್ಷ ಕಲ್ಯಾಣ ರಾಮನ್ ಆರೋಪಿಸಿದ್ದಾರೆ. ಇದು ಅಣ್ಣಾಮಲೈ ಹಾಗೂ ತಮಿಳಿಸೈ ಸೌಂದರರಾಜನ್ ಅವರ ಬೆಂಗಲಿಗರ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.

ಇನ್ನು ಸೌಂದರರಾಜನ್ ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಅಣ್ಣಾಮಲೈ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ” ನಾನು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾಗ ಸಮಾಜ ವಿರೋಧಿ ಅಂಶಗಳನ್ನು ಪ್ರೋತ್ಸಾಹಿಸಿದ ವ್ಯಕ್ತಿಗಳನ್ನು ಪಕ್ಷದಿಂದ ದೂರ ಇಟ್ಟಿದೆ, ಹಾಗೂ ಅಂತಹ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಸಮಾಜ ವಿರೋಧಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಅಣ್ಣಾಮಲೈ ಅವರು ಉತ್ತಮ ನಾಯಕ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಾವೆಲ್ಲರೂ ವಿಭಿನ್ನ ರೀತಿಯ ನಾಯಕರು ಮತ್ತು ನಾವು ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು

ಸೌಂದರರಾಜನ್ ಅವರ ಈ ಹೇಳಿಕೆಗೆ ಬಿಜೆಪಿಯ ಮಾಜಿ ರಾಜ್ಯ ಕಾರ್ಯದರ್ಶಿ ತಿರುಚಿ ಸೂರ್ಯ ಶಿವ ಅವರು, ಪಕ್ಷದ ವಿಷಯಗಳ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಬಾರದು ಎಂದು ಹೇಳಿದರು. ನೀವು ಅಧ್ಯಕ್ಷರಾಗಿದ್ದಾಗ ತಮಿಳುನಾಡಿನಲ್ಲಿ ಬಿಜೆಪಿ ಸೇರಲು ಯಾರೂ ಇರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:17 pm, Wed, 12 June 24