ಲೋಕಸಭೆ ಚುನಾವಣೆಗೆ ಮುನ್ನ, ಬಿಜೆಪಿಯ ತೆಲಂಗಾಣ ಘಟಕವು ಚುನಾವಣಾ ಸಿದ್ಧತೆ ಕುರಿತು ಚರ್ಚಿಸಲು ಮತ್ತು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ವಿಮರ್ಷಿಸಲು ಗುರುವಾರ ಮಹತ್ವದ ಸಭೆಯನ್ನು ಕರೆದಿದೆ. ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.
ಬಿಜೆಪಿಯ ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಹಂತದ ರಾಜ್ಯ ನಾಯಕರು, ತಾಲೂಕು ಮಟ್ಟದ ಮುಖಂಡರು ಹಾಗೂ ಪಕ್ಷದ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ವಿಧಾನಸಭೆ ಚುನಾವಣೆ ಫಲಿತಾಂಶ ಮತ್ತು ಮುಂಬರುವ ಲೋಕಸಭೆ ಚುನಾವಣೆಯ ಸಿದ್ಧತೆಗಳ ಚರ್ಚೆಗಳ ಜೊತೆಗೆ , ಕೇಂದ್ರ ಸರ್ಕಾರದ ಪ್ರಚಾರ ಕಾರ್ಯಕ್ರಮ ವಿಕಸಿತ ಭಾರತ ಮತ್ತು ರಾಮಮಂದಿರ ಶಂಕುಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು.
ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, ಸಂಸದರಾದ ಪ್ರಕಾಶ್ ಜಾವಡೇಕರ್ ಮತ್ತು ಕೆ ಲಕ್ಷ್ಮಣ್, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಡಿ ಕೆ ಅರುಣಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಂಡಿ ಸಂಜಯ್ ಕುಮಾರ್ ಮತ್ತು ಸುನೀಲ್ ಬನ್ಸಾಲ್ ಮತ್ತು ರಾಜ್ಯ ಉಸ್ತುವಾರಿ ಅರವಿಂದ್ ಮೆನನ್ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮತ್ತಷ್ಟು ಓದಿ: ತೆಲಂಗಾಣದ ಬಹುತೇಕ ಶಾಸಕರು ಕೋಟ್ಯಾಧೀಶ್ವರರು, ಕ್ರಿಮಿನಲ್ ಪ್ರಕರಣಗಳೂ ಧಾರಾಳ, 40 ಶಾಸಕರು ಪಿಯುಸಿ ವರೆಗೂ ಓದಿದ್ದಾರೆ!
ರಾಜ್ಯ ಮಟ್ಟದ ಸಭೆಯ ನಂತರ, ನವೆಂಬರ್ 30 ರ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರನ್ನು ಶಾ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಚಾರ್ಮಿನಾರ್‌ನಲ್ಲಿರುವ ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಹಿಂದಿನ ವಿಧಾನಸಭೆಯಲ್ಲಿ ಪಕ್ಷವು ಕೇವಲ ಒಂದು ಸ್ಥಾನವನ್ನು ಹೊಂದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ