ಉತ್ತರಪ್ರದೇಶ: ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಇಂದು (ಗುರುವಾರ) ಮಾಂಸದ ಕಾರ್ಖಾನೆಯಿಂದ ಅಮೋನಿಯಾ ಸೋರಿಕೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 65 ಜನರು ಅಸ್ವಸ್ಥರಾಗಿದ್ದಾರೆ. ಹಾಜಿ ಜಹೀರ್ ಒಡೆತನದ ಅಲ್-ದುವಾ ಮಾಂಸ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಎಲ್ಲಾ ಗಾಯಾಳುಗಳನ್ನು ಜಿಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅನಿಲ ಸೋರಿಕೆ ಕಾರಣಗಳನ್ನು ಪತ್ತೆ ಮಾಡಲಾಗುತ್ತಿದೆ.
ಅನಿಲ ಸೋರಿಕೆಯಾದ ನಂತರ ಕಾರ್ಖಾನೆಯಲ್ಲಿದ್ದ ಜನರನ್ನು ತಕ್ಷಣವೇ ಸ್ಥಳಾಂತರಿಸಲಾಯಿತು, ಮತ್ತು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಸಂತ್ರಸ್ತ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಒಡಿಶಾದ ಸಿಗಡಿ ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ, 25ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ
ಒಡಿಶಾದ ಬಾಲಸೋರ್ ಜಿಲ್ಲೆಯ ಸಿಗಡಿ ಸಂಸ್ಕರಣಾ ಘಟಕದಲ್ಲಿ ನಿನ್ನೆ (ಬುಧವಾರ) ಅಮೋನಿಯಾ ಅನಿಲ ಸೋರಿಕೆಯಾಗಿದೆ. ಈ ಘಟನೆಯಿಂದ 25 ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗಿದ್ದರು. ಈ ಸಂಸ್ಕರಣಾ ಘಟಕ ಆಡಳಿತಾರೂಢ ಬಿಜು ಜನತಾ ದಳದ (ಬಿಜೆಡಿ) ಮಾಜಿ ಸಂಸದರ ಪುತ್ರ ರವೀಂದ್ರ ಜೆನಾ ಅವರಿಗೆ ಸೇರಿದ್ದು.
ಖಾಂಟಪದ ಸಮೀಪದ ಹೈಲ್ಯಾಂಡ್ ಸಮುದ್ರಾಹಾರ ಸಂಸ್ಕರಣಾ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ. ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ವರದಿಗಳ ಪ್ರಕಾರ, ಕೆಲವು ಉದ್ಯೋಗಿಗಳನ್ನು ಖಾಂತಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಕೆಲವರನ್ನು ಬಾಲಸೋರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಒಂಬತ್ತು ಕಾರ್ಮಿಕರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಏಕೆಂದರೆ ಅವರು ಹೆಚ್ಚು ಅನಿಲವನ್ನು ಉಸಿರಾಡಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
Published On - 3:38 pm, Thu, 29 September 22