
ಅಮರಾವತಿ, ಆಗಸ್ಟ್ 24: ಮಹಾರಾಷ್ಟ್ರದ ಅಮರಾವತಿ ಜಿಲ್ಲಾಆಸ್ಪತ್ರೆ(Hospital)ಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೂರು ನವಜಾತ ಕಂದಮ್ಮಗಳು ಸಾವನ್ನಪ್ಪಿದ್ದು, ಆರು ಶಿಶುಗಳ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಎನ್‌ಐಸಿಯು ವಾರ್ಡ್‌ನಲ್ಲಿದ್ದ ವೆಂಟಿಲೇಟರ್ ಯಂತ್ರವು ಮುಂಜಾನೆ ಸುಮಾರು 3.30 ರ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ವಿಶೇಷ ನವಜಾತ ಆರೈಕೆ ಘಟಕದಲ್ಲಿ (SNCU) ಒಟ್ಟು 39 ನವಜಾತ ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು. ದಟ್ಟ ಹೊಗೆ ಆವರಿಸುತ್ತಿದ್ದಂತೆಯೇ ಕರ್ತವ್ಯದಲ್ಲಿದ್ದ ವೈದ್ಯರು, ನರ್ಸ್‌ಗಳು ಮತ್ತು ಆಸ್ಪತ್ರೆ ಸಿಬ್ಬಂದಿ ತಕ್ಷಣ ವೈದ್ಯಕೀಯ ಸಂಪರ್ಕಗಳನ್ನು ಕಡಿತಗೊಳಿಸಿ ಶಿಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದರು.
ಸಿಬ್ಬಂದಿಯ ಹರಸಾಹಸದ ಹೊರತಾಗಿಯೂ ತೀವ್ರ ಸುಟ್ಟ ಗಾಯಗಳು ಮತ್ತು ಹೊಗೆಯಿಂದಾಗಿ ಉಸಿರುಗಟ್ಟಿ ಮೂರು ಕಂದಮ್ಮಗಳು ಪ್ರಾಣ ಕಳೆದುಕೊಂಡವು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಾಗೂ ಉಸಿರಾಟದ ತೊಂದರೆಗೆ ಒಳಗಾದ 6 ನವಜಾತ ಶಿಶುಗಳನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಸಮೀಪದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯಕೀಯ ಉಪಕರಣಗಳ ಸುರಕ್ಷತೆ ಮತ್ತು ಅಗ್ನಿಶಾಮಕ ಮುನ್ನೆಚ್ಚರಿಕೆಗಳ ವೈಫಲ್ಯದ ಕುರಿತು ರಾಜ್ಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಮತ್ತಷ್ಟು ಓದಿ: ಉದ್ಘಾಟನೆಯಾಗಿ 10 ತಿಂಗಳಾದರೂ ಆರಂಭವಾಗದ ತುಮಕೂರು ಕ್ಯಾನ್ಸರ್ ಆಸ್ಪತ್ರೆ: ಬಡ ರೋಗಿಗಳಿಗೆ ತಪ್ಪದ ಬೆಂಗಳೂರು ಅಲೆದಾಟ!
ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳ ಐಸಿಯು ಮತ್ತು ಎನ್‌ಐಸಿಯು ಘಟಕಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ವಾರ್ಮರ್ ಯಂತ್ರಗಳ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ದುರಂತಗಳು ಮರುಕಳಿಸುತ್ತಿದ್ದು, ಕಡ್ಡಾಯ ಅಗ್ನಿಶಾಮಕ ಸುರಕ್ಷತಾ ತಪಾಸಣೆ (Fire Audit) ನಡೆಸುವಂತೆ ತಜ್ಞರು ಆಗ್ರಹಿಸಿದ್ದಾರೆ.
ಕಣ್ಣೆದುರೇ ಹಸುಗೂಸುಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ