ಪೊಲೀಸರ ಕಣ್ಣಿಗೆ ಮಣ್ಣೆರೆಚಿ ತಲೆಮರೆಸಿಕೊಂಡು ಓಡಾಡುತ್ತಿರುವ ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಯೂಟ್ಯೂಬ್ ಲೈವ್ ಬಂದು ತಾನು ಪೊಲೀಸರಿಗೆ ಶರಣಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. 12 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ತೀವ್ರಗಾಮಿ ಅಮೃತ್ಪಾಲ್ ಸಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಎರಡನೇ ಬಾರಿಗೆ ಯೂಟ್ಯೂಬ್ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಕಳೆದ ಎರಡು ವಾರದಿಂದ ವೇಷ ಮರೆಸಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಅಲೆದಾಡುತ್ತಿರುವ ಅಮೃತಪಾಲ್ ಸಿಂಗ್, ಪಂಜಾಬ್‌ನ ಗೋಪ್ಯ ಸ್ಥಳದಲ್ಲಿ ಅಡಗಿರುವುದು ಗೊತ್ತಾಗಿದೆ. ಮೊದಲ ವಿಡಿಯೋದಲ್ಲಿ ಪಂಜಾಬ್‌ಗೆ ಮರಳಲಿರುವ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಈಗ ಪೊಲೀಸರಿಗೆ ಶರಣಾಗುವುದಿಲ್ಲ ಎಂದು ಹೇಳಿದ್ದಾನೆ.
ಕಳೆದ ಮಾರ್ಚ್ 18 ರಂದು ಪೊಲೀಸ್ ಕಾರ್ಯಾಚರಣೆ ಆರಂಭಗೊಂಡ ಬಳಿಕ ಜಲಂಧರ್‌ನಿಂದ ತಪ್ಪಿಸಿಕೊಂಡು ಹರಿಯಾಣ, ದೆಹಲಿ, ಉತ್ತರಾಖಂಡದಲ್ಲಿ ಅಲೆದಾಡಿ ಕೊನೆಗೆ ಪಂಜಾಬ್‌ಗೆ ಮರಳಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು, ಶೋಧ ತೀವ್ರಗೊಳಿಸಿದ್ದಾರೆ.
ಮತ್ತಷ್ಟು ಓದಿ: Amritpal Singh: ಛತ್ರಿಯಿಂದ ಮುಖ ಮರೆ ಮಾಡಿಕೊಂಡು ಓಡಾಡುತ್ತಿರುವ ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್, ಸಿಸಿಟಿವಿಯಲ್ಲಿ ಸೆರೆ
ವಿಡಿಯೋ ಸಂದೇಶ ಹೊರ ಬೀಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪಂಜಾಬ್ ಪೊಲೀಸರು ಶೋಧ ಕಾರ್ಯಾಚರಣೆ ಚುರುಕುಗೊಳಿಸಿದರು. ಸಿಂಗ್ ಉಳಿದುಕೊಂಡಿದ್ದ ಪ್ರದೇಶಗಳನ್ನು ತಡಕಾಡಿದರು. ಹೊಶಿಯಾರ್‌ಪುರ, ಅಮೃತಸರ, ಜಲಂಧರ್ ಸೇರಿ ಹಲವು ಕಡೆ ಹುಡುಕಾಟ ನಡೆಸಿದರೂ ಆರೋಪಿಯ ಸುಳಿವು ಮಾತ್ರ ಲಭ್ಯವಾಗಿಲ್ಲ.
ನನ್ನನ್ನು ಬಂಧಿಸುವುದು ಸರಕಾರದ ಉದ್ದೇಶವಾಗಿದ್ದರೆ ಈ ವೇಳೆಗೆ ಅದು ಬಂಧಿಸಿರುತ್ತಿತ್ತು. ಸರಕಾರವು ನನ್ನನ್ನು ಮನೆಯಿಂದ ಬಂಧಿಸಿದ್ದರೆ ನಾವು ಅದನ್ನು ಒಪ್ಪುತ್ತಿದ್ದೆವು. ಆದರೆ ಲಕ್ಷಾಂತರ ಪಡೆಗಳನ್ನು ಸುತ್ತುವರಿಸಿ ನನ್ನನ್ನು ಬಂಧಿಸಲು ಸರ್ಕಾರ ಪ್ರಯತ್ನಿಸಿದೆ. ನನ್ನ ಬಂಧನವು ದೇವರ ಕೈಯಲ್ಲಿದೆ. ನಾನು ಜಗತ್ತಿನ ತುತ್ತ ತುದಿಯಲ್ಲಿದ್ದೇನೆ. ನನಗೆ ಯಾರೂ ಏನೂ ಮಾಡಲಾಗದು ಎಂದು ಸವಾಲು ಹಾಕಿದ್ದಾನೆ.
ಅಧಿಕೃತ ಮೂಲಗಳ ಪ್ರಕಾರ, ಅಮೃತಪಾಲ್ ಸಿಂಗ್ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ವಿದೇಶದಲ್ಲಿರುವ ಕೆಲವು ಭಯೋತ್ಪಾದಕ ಗುಂಪುಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ