
ಕಾಕಿನಾಡ, ಅಕ್ಟೋಬರ್ 18: ಸರ್ಕಾರಿ ಬಸ್‌ನಲ್ಲಿ ಸೀಟು ಬಿಡುವ ವಿಚಾರಕ್ಕೆ ಶುರುವಾದ ಸಣ್ಣ ಜಗಳವೊಂದು ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಯಲೇಶ್ವರಂ ಮಂಡಲದ ಚಿನ್ನಂಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಕರೆ ಮಾಡಿ ಹೇಳಿದ್ದಕ್ಕೆ ಆಕೆಯ ಪತಿ ಸುಮಾರು 30 ಜನರ ಗ್ಯಾಂಗ್‌ನೊಂದಿಗೆ ಬಂದು, ಬಸ್ ಅಡ್ಡಗಟ್ಟಿ ಮಹಿಳಾ ಪ್ರಯಾಣಿಕರ ಮೇಲೆ ರಾಡ್ ಹಾಗೂ ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ತಕ್ಷಣವೇ ಕಾಕಿನಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೀಟಿಗಾಗಿ ಆರಂಭವಾದ ಕಿತ್ತಾಟ: ತುನಿಯಿಂದ ರಾಜಮಂಡ್ರಿಗೆ ತೆರಳುತ್ತಿದ್ದ ಆರ್‌ಟಿಸಿ (RTC) ಬಸ್‌ನಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. ಸಿರಿಪುರಂ ಗ್ರಾಮದ ಮಹಿಳೆಯೊಬ್ಬರು ರಾಜಮಂಡ್ರಿಗೆ ತೆರಳುತ್ತಿದ್ದ ಮಹಿಳೆಯರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದಾಗ, ಸಿರಿಪುರಂ ಮಹಿಳೆ ತನ್ನ ಪತಿಗೆ ಫೋನ್ ಮಾಡಿ ಬಸ್‌ನಲ್ಲಿ ತನ್ನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ದೂರು ಹೇಳಿದ್ದಾಳೆ.
ಪತ್ನಿಯ ಮಾತನ್ನು ಕೇಳಿ ಆಕ್ರೋಶಗೊಂಡ ಪತಿ, ತನ್ನ ಗ್ರಾಮದ ಸುಮಾರು 30 ಕ್ಕೂ ಹೆಚ್ಚು ಯುವಕರನ್ನು ಜತೆಗೂಡಿಸಿಕೊಂಡು ಚಿನ್ನಂಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಗಾಗಿ ಹೊಂಚು ಹಾಕಿ ಕಾಯುತ್ತಿದ್ದ. ಬಸ್ ಚಿನ್ನಂಪೇಟೆಗೆ ತಲುಪುತ್ತಿದ್ದಂತೆ ಗ್ಯಾಂಗ್ ಏಕಾಏಕಿ ಬಸ್ ಒಳಗೆ ನುಗ್ಗಿದೆ. ಜಗಳವಾಡಿದ ರಾಜಮಂಡ್ರಿಯ ಮಹಿಳೆಯರು ಮತ್ತು ಅವರೊಂದಿಗಿದ್ದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ರಾಡ್, ದೊಣ್ಣೆಗಳಿಂದ ಮನಬಂದಂತೆ ಬಡಿದಿದ್ದಾರೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಮತ್ತು ಮಹಿಳೆಯರ ಚೀರಾಟ, ಆಕ್ರಂದನ ಹೆದ್ದಾರಿಯುದ್ದಕ್ಕೂ ಕೇಳಿಬಂದಿದೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಅಪಘಾತ: 15 ಮಂದಿಗೆ ಗಂಭೀರ ಗಾಯ
ದಾಳಿ ನಡೆಸಿದ ವ್ಯಕ್ತಿಗಳಲ್ಲಿ ಹಲವರು ಮದ್ಯ ಮತ್ತು ಗಾಂಜಾದಂತಹ ಅಮಲು ಪದಾರ್ಥಗಳನ್ನು ಸೇವಿಸಿದ್ದರು ಎಂದು ಸಂತ್ರಸ್ತರು ಹಾಗೂ ಪ್ರತ್ಯಕ್ಷದರ್ಶಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ತುರ್ತು ಸಹಾಯವಾಣಿ ‘112’ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಯಲೇಶ್ವರಂ ಠಾಣೆಯ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಾಳಿ ನಡೆಸಿದ ಮಹಿಳೆ, ಆಕೆಯ ಪತಿ ಹಾಗೂ ಪುಂಡರ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ಕಂಡಕ್ಟರ್ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಯಲೇಶ್ವರಂ ಪೊಲೀಸರು ಕೊಲೆಯತ್ನ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಗಲಭೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆದ್ದಾರಿಯ ಟೋಲ್ ಗೇಟ್ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ಸಿರಿಪುರಂ ಮೂಲದ ದಂಪತಿ ಹಾಗೂ ದಾಳಿಕೋರ ಯುವಕರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ