ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಜಾರ್ಖಂಡ ಸಿಎಂ ವಿರುದ್ಧ ಆಂಧ್ರ ಸಿಎಂಗೆ ಅಸಮಾಧಾನ; ಬುದ್ಧಿಮಾತು ಹೇಳಿದ ಜಗನ್​ ರೆಡ್ಡಿ

ಕೊವಿಡ್​ 19 ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಜಾರ್ಖಂಡದ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಜಾರ್ಖಂಡ ಸಿಎಂ ವಿರುದ್ಧ ಆಂಧ್ರ ಸಿಎಂಗೆ ಅಸಮಾಧಾನ; ಬುದ್ಧಿಮಾತು ಹೇಳಿದ ಜಗನ್​ ರೆಡ್ಡಿ
ಜಗನ್​ ರೆಡ್ಡಿ
Follow us
Lakshmi Hegde
|

Updated on:May 08, 2021 | 9:09 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಟೀಕೆ ಮಾಡಿದ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್​ ಸೊರೆನ್​ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ತಿರುಗೇಟು ನೀಡಿದ್ದಾರೆ. ಎಲ್ಲ ವಿಚಾರಗಳಲ್ಲೂ ರಾಜಕೀಯ ಮಾಡಬಾರದು ಎಂದು ಸಲಹೆಯನ್ನೂ ನೀಡಿದ್ದಾರೆ.

ಕೊವಿಡ್​ 19 ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಜಾರ್ಖಂಡದ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್, ಇಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿದ್ದರು. ಆದರೆ, ಮೋದಿಯವರು ಅವರ ಮನಸಲ್ಲಿದ್ದುದನ್ನು (Mann Ki Baat) ಮಾತ್ರ ಮಾತನಾಡುತ್ತಾರೆ. ಅವರು ಮಾತನಾಡುವ ಜತೆಗೆ ನಮ್ಮ ಸಮಸ್ಯೆಗಳನ್ನು ಆಲಿಸಿದ್ದರೆ ಇನ್ನಷ್ಟು ಚೆನ್ನಾಗಿ ಇರುತ್ತಿತ್ತು. ನನಗೆ ಮಾತನಾಡಲು ಅವಕಾಶ ಕೊಡದೆ ಇರುವುದಕ್ಕೆ ತುಂಬ ಅಸಮಾಧಾನ ಆಗಿದೆ ಎಂದು ಟ್ವೀಟ್ ಮಾಡಿದ್ದರು.

ಹೀಗೆ ಟ್ವೀಟ್ ಮಾಡಿದ ಹೇಮಂತ್​ ಸೊರೆನ್​ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ತಿರುಗೇಟು ನೀಡಿದ್ದಾರೆ. ಪ್ರೀತಿಯ ಹೇಮಂತ್ ಸೊರೆನ್ ಅವರೇ, ನನಗೆ ನಿಮ್ಮ ಮೇಲೆ ತುಂಬ ಗೌರವ ಇದೆ. ಆದರೆ ನಿಮ್ಮ ಸಹೋದರನಾಗಿ ಒಂದು ವಿಚಾರ ಹೇಳುತ್ತೇನೆ. ನಮ್ಮನಮ್ಮಲ್ಲಿ ಅಥವಾ ಪ್ರಧಾನಿ ನರೇಂದ್ರ ಮೋದಿಯವರ ವಿಚಾರದಲ್ಲಿ ನಮಗೇನೇ ಭಿನ್ನಾಭಿಪ್ರಾಯಗಳಿದ್ದರೂ ಈಗ ಅದನ್ನು ತೋರಿಸಬಾರದು. ಇದು ಕೊವಿಡ್​ 19 ವಿರುದ್ಧದ ಹೋರಾಟ. ಈ ಹೊತ್ತಲ್ಲಿ ಎಲ್ಲರೂ ಒಟ್ಟಾಗಿ ಹೋರಾಡಬೇಕೇ ಹೊರತು ಯಾರೊಬ್ಬರ ಕಡೆಗೂ ಬೆರಳು ಮಾಡಿ ತೋರಿಸಬಾರದು. ನಾವು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕೇ ಹೊರತು ಇಂಥ ರಾಜಕೀಯ ಮಾಡಬಾರದು. ರಾಜಕೀಯ ಮಾಡುತ್ತ ಹೋದರೆ ದೇಶವೇ ದುರ್ಬಲವಾಗುತ್ತದೆ ಎಂದು ಬುದ್ಧಿಮಾತು ಹೇಳಿದ್ದಾರೆ.

ಹಾಗೇ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವೀಟ್ ಮಾಡಿದ ಹೇಮಂತ್ ಸೊರೆನ್​ರನ್ನು ಆಸ್ಸಾಂ ಮುಖ್ಯಮಂತ್ರಿ, ಜಾರ್ಖಂಡ ಬಿಜೆಪಿ ನಾಯಕರೂ ಸಹ ವಿರೋಧಿಸಿದ್ದಾರೆ. ಆದರೆ ಕಾಂಗ್ರೆಸ್ ಹೇಮಂತ್​ ಸೊರೆನ್​ ಪರ ನಿಂತಿದೆ.

ಇದನ್ನೂ ಓದಿ: ಸರ್ಕಾರ ನೀಡಿದ ಆಕ್ಸಿಜನ್​ ಸಿಲಿಂಡರ್​ನಿಂದ​ ಪುಕ್ಕಟೆ ಪ್ರಚಾರ ಪಡೆದ್ರಾ ಸುಮಲತಾ? ಜೆಡಿಎಸ್​ ಶಾಸಕರು ತೆರೆದಿಟ್ಟ ಹೊಸ ವಿಚಾರ

Published On - 9:05 am, Sat, 8 May 21