ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿರುವ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಸಾಗಿಸುತ್ತಿದ್ದ ಐವರನ್ನು ಕರ್ನೂಲ್ ಪೊಲೀಸರು ಬಂಧಿಸಿದ್ದಾರೆ. ಮಧ್ಯರಾತ್ರಿ ಸಾಗಿಸಲಾಗುತ್ತಿದ್ದ ಈ ಚಿನ್ನ, ಬೆಳ್ಳಿ, ನಗದಿಗೆ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ ವಶಪಡಿಸಿಕೊಳ್ಳಲಾಯಿತು ಎಂದು ಕರ್ನೂಲ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ 3.96 ಕೋಟಿ ರೂಪಾಯಿ ಮೌಲ್ಯದ 8 ಕೆಜಿ ಚಿನ್ನ, 18.52 ಲಕ್ಷ ರೂಪಾಯಿ ಮೌಲ್ಯದ 28.5 ಕೆಜಿ ಬೆಳ್ಳಿ ಮತ್ತು 90 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ತಮಿಳುನಾಡಿನವರಾಗಿದ್ದು, ಅಕ್ರಮ ಸರಕು ಸಾಗಣೆ ಮಾಡುತ್ತಿದ್ದ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಗಡಿಯಲ್ಲಿ ಎಂದಿನಂತೆ ವಾಹನ ತಪಾಸಣೆ ಮಾಡಿದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೇ ಈ ಬಸ್, ಸ್ವಾಮಿ ಅಯ್ಯಪ್ಪ ಎಂಬ ಒಂದು ಖಾಸಗಿ ಕಂಪನಿಗೆ ಸೇರಿದ್ದಾಗಿದ್ದು, ಹೈದರಾಬಾದ್ನಿಂದ ಕೊಯಂಬತ್ತೂರಿಗೆ ಪ್ರಯಾಣಿಸುತ್ತಿತ್ತು.
ಇನ್ನೊಂದೆಡೆ ಇಂದು ಲಖನೌದ ಸರೋಜಿನಿ ನಗರದ ಖ್ಯಾತ ಉದ್ಯಮಿ ದೇವೇಂದ್ರ ಪಾಲ್ ಸಿಂಗ್ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯ ಕೆಲವು ಸ್ಥಳಗಳು, ಕಾನ್ಪುರ, ಲಖನೌನ ವಿವಿಧ ಕಡೆ ರೇಡ್ ಮಾಡಿದ್ದಾರೆ. ದೇವೇಂದ್ರ ಪಾಲ್ ಸಿಂಗ್, ಕಾನ್ಪುರದಲ್ಲಿರುವ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರೂ ಹೌದು. ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ದೇವೇಂದ್ರ ಪಾಲ್ ಸಿಂಗ್ ಶನಿವಾರ ರಾತ್ರಿ ಪರಾರಿಯಾಗಲು ಹೊರಟಿದ್ದರು. ಅವರನ್ನು ಐಟಿ ಅಧಿಕಾರಿಗಳು ಮತ್ತು ಸ್ಥಳೀಯರ ಪೊಲೀಸರು ಬೆನ್ನತ್ತಿ ಹೋಗಿ ಬಂಧಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 4.25 ಕೋಟಿ ರೂಪಾಯಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾಗಿ ವರದಿಯಾಗಿದೆ. ಹಾಗೇ, ಘಾಜಿಯಾಬಾದ್ ಮತ್ತು ಶಹ್ದಾರಾದಲ್ಲಿಯೂ ಕೆಲವು ಕಡೆ ಐಟಿ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘ಹೆಂಗೆ ನಾವು..’ ಅಂತ ಫೇಮಸ್ ಆದ ರಚನಾ ಇಂದರ್ಗೆ ಜನ್ಮದಿನ; ಇಲ್ಲಿವೆ ಸುಂದರ ಫೋಟೋಗಳು