AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತ ಹೋರಾಟ ಕಡೆಗಣಿಸಿದರೆ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ ಅಣ್ಣಾ ಹಜಾರೆ

ಸರ್ಕಾರ ರೈತರ ಅಹವಾಲನ್ನು ಕೇಳುತ್ತಿಲ್ಲ. ಕಾಯ್ದೆ ಹಿಂಪಡೆಯುತ್ತಿಲ್ಲ. ರೈತ ಮುಖಂಡರು ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ರೈತರಿಗೆ ಬೆಂಬಲ ಸೂಚಿಸಿರುವ ಅಣ್ಣಾ ಹಜಾರೆ ಅಗತ್ಯ ಬಿದ್ದರೆ ಜನಾಂದೋಲನ ನಡೆಸುವುದಾಗಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ರೈತ ಹೋರಾಟ ಕಡೆಗಣಿಸಿದರೆ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ ಅಣ್ಣಾ ಹಜಾರೆ
ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ
Follow us
TV9 Web
| Updated By: ganapathi bhat

Updated on:Apr 07, 2022 | 5:44 PM

ದೆಹಲಿ: ಕಳೆದ 14 ದಿನಗಳಿಂದ ನಡೆಯುತ್ತಿರುವ ನೂತನ ಕೃಷಿ ಕಾಯ್ದೆ ವಿರೋಧಿ ರೈತರ ಪ್ರತಿಭಟನೆಗೆ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ. ರೈತ ಹೋರಾಟವನ್ನು ಕಡೆಗಣಿಸಿದರೆ ಜನಾಂದೋಲನ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಪಟ್ಟು ಹಿಡಿದು ಕೂತಿದ್ದಾರೆ. ಸರ್ಕಾರವು ರೈತ ಮುಖಂಡರ ಜೊತೆ ಐದಾರು ಸುತ್ತಿನ ಮಾತುಕತೆಗಳನ್ನು ನಡೆಸಿ ಕಾಯ್ದೆಗಳ ಪರವಾಗಿ ರೈತರ ಮನವೊಲಿಸಲು ಪ್ರಯತ್ನ ನಡೆಸಿದೆ. ಕಾಯ್ದೆಯಲ್ಲಿ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಿದೆ. ರೈತರು ಮಾತ್ರ ಕಾಯ್ದೆ ರದ್ಧತಿಯೇ ನಮ್ಮ ಹೋರಾಟದ ಉದ್ದೇಶ ಎಂದು ಜಗ್ಗದೆ ಕುಳಿತಿದ್ದಾರೆ.

ಸರ್ಕಾರ ರೈತರ ಅಹವಾಲನ್ನು ಕೇಳುತ್ತಿಲ್ಲ. ಪ್ರಧಾನಿಯಿಂದ ಪ್ರತಿಕ್ರಿಯೆಗಳು ಬರುತ್ತಿಲ್ಲ. ಈ ಬಗ್ಗೆ ನಿನ್ನೆ, ಸಿಂಘು ಗಡಿ ಪ್ರದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರೈತ ಮುಖಂಡರು ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ರೈತರಿಗೆ ಬೆಂಬಲ ಸೂಚಿಸಿರುವ ಅಣ್ಣಾ ಹಜಾರೆ ಅಗತ್ಯ ಬಿದ್ದರೆ ಜನಾಂದೋಲನ ನಡೆಸುವುದಾಗಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ರೈಲು ಮುಷ್ಕರ ನಡೆಸುತ್ತೇವೆ ಎಂದು ರೈತರ ಎಚ್ಚರಿಕೆ ಪ್ರತಿಭಟನೆ ಮುಂದುವರೆಸಿರುವ ರೈತರು, ಡಿ. 12ರಂದು ಟಾಲ್ ಗೇಟ್​ಗಳನ್ನು ಬಂದ್ ಮಾಡುವುದಾಗಿ ತಿಳಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದ್ದಾರೆ. ದೆಹಲಿ-ಜೈಪುರ ಹೆದ್ದಾರಿಯು ಜಾಮ್ ಆಗಿದ್ದು, ಡಿ. 12ರಂದು ರಸ್ತೆ ತಡೆ ಮುಂದುವರೆಸುವುದಾಗಿ ತಿಳಿಸಿದ್ದಾರೆ. ರೈಲು ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿರುವ ರೈತರು, ರೈಲು ಹಳಿಯ ಮೇಲೆ ಕೂತು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಕೇವಲ ಪಂಜಾಬ್ ಮಾತ್ರವಲ್ಲ, ದೇಶಾದ್ಯಂತ ಇರುವ ರೈತ ಸಮುದಾಯ ಈ ಮುಷ್ಕರದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ಕುತ್ತು ಬರುವುದಿಲ್ಲ ಎಂದ ಕೇಂದ್ರ ಕೃಷಿ ಸಚಿವ ರೈತರ ಪ್ರತಿಭಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವ, ನರೇಂದ್ರ ಸಿಂಗ್ ತೋಮರ್, ಯಾವುದೇ ಕಾಯ್ದೆಯು ಸಂಪೂರ್ಣವಾಗಿ ತಪ್ಪಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ರೈತರ ಭೂಮಿ ವಶಪಡಿಸಿಕೊಳ್ಳುವಂಥ ಯವುದೇ ವಿಚಾರವು ಕಾಯ್ದೆಯಲ್ಲಿ ಇಲ್ಲ, ಕನಿಷ್ಠ ಬೆಂಬಲ ಬೆಲೆಗೂ (MSP) ಯಾವುದೇ ಕುತ್ತು ಬರುವುದಿಲ್ಲ ಎಂದಿದ್ದಾರೆ. ರೈತ ಮುಖಂಡರು ಸರ್ಕಾರದ ಪ್ರಸ್ತಾಪವನ್ನು ಆಲಿಸಬೇಕು. ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಹೇಳಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಬಂಧಿತ ಸಾಮಾಜಿಕ ಹೋರಾಟಗಾರರಿಗೆ ಬೆಂಬಲ ಉಮರ್ ಖಾಲಿದ್, ಎಲ್ಗರ್ ಪರಿಷತ್ ಹೋರಾಟಗಾರರಿಗೆ ಬೆಂಬಲ ಸೂಚಿಸಿದ್ದ ಫಲಕಗಳೂ ರೈತರ ಪ್ರತಿಭಟನೆಯಲ್ಲಿ ಕಂಡುಬಂದಿದೆ. ಟಿಕ್ರಿ ಗಡಿಭಾಗದಲ್ಲಿ ನಿನ್ನೆ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗಿತ್ತು. ಅಲ್ಲಿ ಬಂಧಿತ ಸಾಮಾಜಿಕ ಹೋರಾಟಗಾರರಾದ ಗೌತಮ್ ನವ್ಲಖ, ಸುಧಾ ಭಾರದ್ವಾಜ್, ವರವರ ರಾವ್, ಆನಂದ್ ತೇಲ್ತುಂಬೆ ಮುಂತಾದವರನ್ನು ಬೆಂಬಲಿಸಿ ಫಲಕಗಳು ಕಂಡುಬಂದಿವೆ.

ಸಾಮಾಜಿಕ ಅಂತರ ಪಾಲಿಸದ ರೈತರ ವಿರುದ್ಧ ದೂರು ದಾಖಲು ದೆಹಲಿ-ಹರ್ಯಾಣ ಗಡಿಯಾದ ಸಿಂಘು ಪ್ರದೇಶದಲ್ಲಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ್ದಕ್ಕಾಗಿ, ಎಪಿಡೆಮಿಕ್ ಆಕ್ಟ್ ಅಡಿಯಲ್ಲಿ ರೈತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ರೈತರ ಹೋರಾಟ: ಅದು ಮತ್ತೊಂದು CAA ಹೋರಾಟ ಆಗುತ್ತೆ ಅಷ್ಟೇ -ಸಂಸದ ಪ್ರತಾಪ್‌ ಸಿಂಹ

Published On - 12:33 pm, Fri, 11 December 20