K Annamalai: ಬಿಜೆಪಿ ತೊರೆದ 24 ಗಂಟೆಗಳಲ್ಲೇ ಅಣ್ಣಾಮಲೈ ಅವರ ಹೊಸ ಆಂದೋಲನಕ್ಕೆ 14 ಲಕ್ಷ ಜನರ ಸೇರ್ಪಡೆ

ಬಿಜೆಪಿ ತೊರೆದ 24 ಗಂಟೆಯಲ್ಲೇ ಕೆ. ಅಣ್ಣಾಮಲೈ ಆರಂಭಿಸಿದ ಹೊಸ ರಾಜಕೀಯ ಆಂದೋಲನಕ್ಕೆ 14 ಲಕ್ಷಕ್ಕೂ ಹೆಚ್ಚು ಜನರು ಸೇರ್ಪಡೆಯಾಗಿದ್ದಾರೆ. ತಮಿಳುನಾಡು ರಾಜಕಾರಣದಲ್ಲಿ ಇದೊಂದು ಅಭೂತಪೂರ್ವ ಜನಬೆಂಬಲವಾಗಿದ್ದು, ಯುವಕರು ಮತ್ತು ಸಾಮಾನ್ಯ ನಾಗರಿಕರು ಸ್ವಯಂಪ್ರೇರಿತವಾಗಿ ಸೇರಿ ಹೊಸ ಪ್ರಜಾಪ್ರಭುತ್ವದ ಅಲೆ ಸೃಷ್ಟಿಸಿದ್ದಾರೆ. ವಂಶಪಾರಂಪರ್ಯ ರಾಜಕಾರಣಕ್ಕೆ ಮುಕ್ತಿ ನೀಡಿ, ಸಾಮಾನ್ಯರ ನಾಯಕತ್ವಕ್ಕೆ ಆದ್ಯತೆ ನೀಡುವ ಗುರಿ ಹೊಂದಲಾಗಿದೆ.

K Annamalai: ಬಿಜೆಪಿ ತೊರೆದ 24 ಗಂಟೆಗಳಲ್ಲೇ ಅಣ್ಣಾಮಲೈ ಅವರ ಹೊಸ ಆಂದೋಲನಕ್ಕೆ 14 ಲಕ್ಷ ಜನರ ಸೇರ್ಪಡೆ
ಕೆ ಅಣ್ಣಾಮಲೈ
Image Credit source: PTI

Updated on: Jun 07, 2026 | 7:48 AM

ಚೆನ್ನೈ, ಜೂನ್ 07: ತಮಿಳುನಾಡು(Tamil Nadu) ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅದ್ಭುತ ಮತ್ತು ಭರವಸೆಯ ಜನಬೆಂಬಲವೊಂದು ಯುವ ನಾಯಕ ಕೆ. ಅಣ್ಣಾಮಲೈ(K Annamalai) ಅವರಿಗೆ ವ್ಯಕ್ತವಾಗಿದೆ. ಜೂನ್ 5 ರ ಶುಕ್ರವಾರದಂದು ಬಿಜೆಪಿಗೆ ಸೌಹಾರ್ದಯುತವಾಗಿ ರಾಜೀನಾಮೆ ನೀಡಿದ ಕೇವಲ 24 ಗಂಟೆಗಳ ಅವಧಿಯಲ್ಲಿ, ಅಣ್ಣಾಮಲೈ ಅವರು ಆರಂಭಿಸಿರುವ ಹೊಸ ರಾಜಕೀಯ ಆಂದೋಲನಕ್ಕೆ ಬರೋಬ್ಬರಿ 13,85,763 (ಸುಮಾರು 14 ಲಕ್ಷ) ನಾಗರಿಕರು ಸಕ್ರಿಯ ಸದಸ್ಯರಾಗಿ ಸೇರ್ಪಡೆಗೊಳ್ಳುವ ಮೂಲಕ ಭರ್ಜರಿ ಮುನ್ನುಡಿ ಬರೆದಿದ್ದಾರೆ.

ಯುವಕರು ಮತ್ತು ಸಾಮಾನ್ಯ ನಾಗರಿಕರು ಸ್ವಯಂಪ್ರೇರಿತವಾಗಿ ಹರಿದುಬರುತ್ತಿರುವುದು ದಕ್ಷಿಣ ಭಾರತದ ರಾಜಕಾರಣದಲ್ಲಿ ಹೊಸ ಪ್ರಜಾಪ್ರಭುತ್ವದ ಅಲೆಯ ಸಂಕೇತವಾಗಿ ಹೊರಹೊಮ್ಮಿದೆ.

ಸೌಹಾರ್ದಯುತ ನಿರ್ಗಮನ ಮತ್ತು ಹೊಸ ದೃಷ್ಟಿಕೋನ
ಕಳೆದ 18 ತಿಂಗಳಿನಿಂದ ತಮಿಳುನಾಡಿನ ಸಾಂಸ್ಕೃತಿಕ ಹಾಗೂ ಪ್ರಗತಿಪರ ರಾಜಕೀಯದ ಕುರಿತು ಹೈಕಮಾಂಡ್​ನೊಂದಿಗೆ ಚರ್ಚಿಸಿದ್ದ ಅಣ್ಣಾಮಲೈ, ಉನ್ನತ ನಾಯಕತ್ವಕ್ಕೆ ಯಾವುದೇ ಹೊರೆಯಾಗಬಾರದೆಂಬ ಕಾರಣಕ್ಕೆ ಮುಕ್ತವಾಗಿ ಹೊರಬಂದಿದ್ದಾರೆ. ರಾಜೀನಾಮೆಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗೌರವಯುತವಾಗಿ ಅಂಗೀಕರಿಸಿದ್ದಾರೆ.

ತಮಿಳುನಾಡಿನ ಸರ್ವತೋಮುಖ ಬೆಳವಣಿಗೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ನನ್ನ ಆಲೋಚನೆಗಳಿಗಾಗಿ ಈ ಹೆಜ್ಜೆ ಇಟ್ಟಿದ್ದೇನೆ. ಉನ್ನತ ನಾಯಕರೊಂದಿಗೆ ಸಮಾಲೋಚಿಸಿಯೇ ಸೌಹಾರ್ದಯುತವಾಗಿ ಈ ಸ್ವತಂತ್ರ ಹಾದಿಯನ್ನು ಆಯ್ದುಕೊಂಡಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಮತ್ತಷ್ಟು ಓದಿ: ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ, ಫ್ಯಾನ್ಸ್ ಹರ್ಷೋದ್ಘಾರ ಹೇಗಿದೆ ನೋಡಿ

ಅಣ್ಣಾಮಲೈ ಅವರ ಕರೆಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದಾಗಿ ಅವರ ಆಂದೋಲನದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇವಲ ಒಂದು ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಸ್ವಯಂಸೇವಕರೇ ನಮ್ಮ ಜೀವಾಳ. ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಯುವ ನಾಯಕತ್ವದ ಮೂಲಕ ತಳಮಟ್ಟದಲ್ಲಿ ನಿಜವಾದ ಬದಲಾವಣೆ ತರುವುದು ನಮ್ಮ ಗುರಿ ಎಂದು ವೆಬ್‌ಸೈಟ್ ಸಂದೇಶ ಸಾರಿದೆ.

ಮುಂದಿನ ಗುರಿ: ತಮಿಳುನಾಡಿನಲ್ಲಿ ಹೊಸ ನಾಯಕತ್ವದ ಉದಯ
ವಂಶಪಾರಂಪರ್ಯ ಮತ್ತು ಗಣ್ಯರ ರಾಜಕಾರಣಕ್ಕೆ ಮುಕ್ತಿ ಹಾಡಿ, ಶಾಶ್ವತ ಶಾಸಕರು ಮತ್ತು ಸಂಸದರ ಸಂಸ್ಕೃತಿಯನ್ನು ಕೊನೆಗೊಳಿಸುವುದಾಗಿ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಆಂದೋಲನವು ಸಕ್ರಿಯವಾಗಿ ಸ್ಪರ್ಧಿಸಲಿದ್ದು, ಜನಸಾಮಾನ್ಯರ ಮನೆಯ ಮಕ್ಕಳಿಗೆ ನಾಯಕತ್ವದ ಹಕ್ಕು ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ರಾಜಕೀಯವು ಕೇವಲ ಆಯ್ದ ಕೆಲವರಿಗಷ್ಟೇ ಸೀಮಿತವಲ್ಲ, ಅದು ಸಾಮಾನ್ಯ ನಾಗರಿಕರ ಶಕ್ತಿ ಎಂಬುದನ್ನು ಸಾಬೀತುಪಡಿಸಲು ನನ್ನೊಂದಿಗೆ ಕೈಜೋಡಿಸಿ ಎಂಬ ಅವರ ಆಶಾವಾದಿ ಕರೆಗೆ ಇಡೀ ತಮಿಳುನಾಡು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಭವಿಷ್ಯದ ಪೀಳಿಗೆಗೆ ಭದ್ರ ಬುನಾದಿ ಸಿಕ್ಕಂತಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us