ಜಮ್ಮುವಿನಲ್ಲಿ ಉಗ್ರ ಚಟುವಟಿಕೆ ಹೆಚ್ಚುತ್ತಿದೆ. ಇಂದು ಮುಂಜಾನೆ 2.30ರ ಹೊತ್ತಿಗೆ ಜಮ್ಮುವಿನ ಸುಂಜ್ವಾನ್ ಮಿಲಿಟರಿ ಸ್ಟೇಶನ್ ಬಳಿ ಇನ್ನೊಂದು ಡ್ರೋನ್ ಪತ್ತೆಯಾಗಿದೆ. ಈ ಡ್ರೋನ್ ಕುಂಜ್ವಾನಿ, ಸುಂಜ್ವಾನ್ ಮತ್ತು ಕಲುಚಕ್ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ಕೆಲವೇ ಹೊತ್ತಲ್ಲಿ ಕಣ್ಮರೆಯಾಗಿದೆ. ಕುಂಜ್ವಾನಿ ಪ್ರದೇಶ ಜಮ್ಮು ಪಟ್ಟಣದ ಒಳಗೇ ಇದ್ದು, ಸತ್ವಾರಿ ಏರ್ಫೋರ್ಸ್ ಸ್ಟೇಶನ್ ಸಮೀಪ ಇದೆ. ಕುಲಚಕ್ನಿಂದ 4.5 ಕಿಮೀ ದೂರದಲ್ಲಿ ಸುಂಜ್ವಾನಾ ಇದ್ದು, ಇಲ್ಲಿಂದ 6.5 ಕಿಮೀ ದೂರದಲ್ಲಿ ಕುಂಜ್ವಾನಿ ಇದೆ. ಈ ಏರಿಯಾ ಸುತ್ತಮುತ್ತಲೂ ಡ್ರೋನ್ಗಳು ಮಧ್ಯರಾತ್ರಿಯಿಂದ ಮುಂಜಾನೆವರೆಗೆ ಹಾರಾಟ ನಡೆಸುತ್ತಿವೆ.
ಜಮ್ಮುವಿನ ಮಿಲಿಟರಿ ಇನ್ಸ್ಟಾಲೇಶನ್ ಸಮೀಪ ಕಳೆದ ಮೂರು ದಿನಗಳಿಂದಲೂ ಡ್ರೋನ್ಗಳು ಹಾರಾಡುತ್ತಿದ್ದು, ಸೋಮವಾರ ಕುಲಚಕ್ ಮಿಲಿಟರಿ ಕ್ಯಾಂಪ್ ಬಳಿ ಕಾಣಿಸಿಕೊಂಡ ಡ್ರೋನ್ ಮೇಲೆ ಭಾರತೀಯ ಸೇನೆ ಯೋಧರು ಗುಂಡಿನ ದಾಳಿಯನ್ನೂ ನಡೆಸಿದ್ದರು. ಒಂದು ಮಾನವರಹಿತ ವೈಮಾನಿಕ ವಾಹನ ((UAV) ಭಾನುವಾರ ರಾತ್ರಿ 11: 45 ಕ್ಕೆ ಸೇನಾ ನೆಲೆಯೊಳಗೆ ಮತ್ತು ಇನ್ನೊಂದು ಸೋಮವಾರ ಮುಂಜಾನೆ 2:40 ಕ್ಕೆ ಹಾರಾಟ ನಡೆಸುತ್ತಿತ್ತು. ಅದರ ಮೇಲೆ ಯೋಧರು ಸುಮಾರು 202-25 ಬಾರಿ ಗುಂಡು ಹಾರಿಸಿದ್ದರು.
ಅದಕ್ಕೂ ಮೊದಲು ಜಮ್ಮುವಿನ ಏರ್ಪೋರ್ಟ್ನಲ್ಲಿರುವ ಏರ್ಫೋರ್ಸ್ ಸ್ಟೇಶನ್ನಲ್ಲಿ ಎರಡು ಸ್ಫೋಟ ಆಗಿತ್ತು. ಐಇಡಿ ಸ್ಫೋಟಕವನ್ನು ಡ್ರೋನ್ ಮೂಲಕವೇ ಎಸೆದು ಸ್ಫೋಟಿಸಿದ್ದಾಗಿ ತನಿಖೆಯಿಂದ ಗೊತ್ತಾಗಿದೆ. ಒಟ್ಟಾರೆ ಜಮ್ಮುವಿನಲ್ಲಿ ಮತ್ತೆ ಉಗ್ರ ಚಟುವಟಿಕೆ ಹೆಚ್ಚಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿದಷ್ಟೂ ಉಗ್ರರು ಮತ್ತೆಮತ್ತೆ ದಾಳಿ ಮಾಡುತ್ತಿದ್ದಾರೆ. ಹಾಗೇ ಇಂದು ಕಾಶ್ಮೀರದಲ್ಲಿ ಲಷ್ಕರ್ ಇ ತೈಬಾ ಉಗ್ರಸಂಘಟನೆಯ ಉನ್ನತ ಕಮಾಂಡರ್ ನದೀಮ್ ಅಬ್ರಾಬ್ನನ್ನು ಜಮ್ಮು-ಕಾಶ್ಮೀರ ಪೊಲೀಸರು ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ