ಕೊವಿಡ್-19 ಸೃಷ್ಟಿಸಿರುವ ಆತಂಕವನ್ನು ವಿಧ್ವಂಸಕ ಮತ್ತು ಭಾರತ-ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ: ಆರ್ಎಸ್ಎಸ್
ಈ ಬಾರಿ ಕೊವಿಡ್-19 ಸೋಂಕಿನ ಪ್ರಮಾಣ ಮತ್ತು ತೀವ್ರತೆ ಬಹಳ ಗಂಭೀರವಾಗಿದ್ದು ಇಡೀ ದೇಶವೇ ಅದರಡಿ ಸಿಲುಕಿ ನಲುಗುವಂತಾಗಿದೆ ಎಂದು ಹೇಳಿರುವ ಹೊಸಬಾಳೆ ಅವರು, ಪರಿಸ್ಥಿತಿ ಬಹಳ ಚಿಂತಾಜನಕವಾಗಿದ್ದರೂ ನಮ್ಮ ಸಮಾಜ ಅದಕ್ಕಿಂತ ಬಲಾಢ್ಯವಾಗಿದೆ ಎಂದು ಹೇಳಿದ್ದಾರೆ.

ಕೊವಿಡ್-19 ಸಾಂಕ್ರಾಮಿಕ ಪಿಡುಗು ಭಾರತದಲ್ಲಿ ಉಂಟುಮಾಡಿರುವ ಭಯಾನಕ ಸ್ಥಿತಿಯನ್ನು ಕೆಲವು ವಿಧ್ವಂಸಕ ಮತ್ತು ಭಾರತ-ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಂಡು ನಕರಾತ್ಮಕ ಮತ್ತು ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸುವ ಸಾಧ್ಯತೆಯಿರುವುದರಿಂದ ಜನರು ಜಾಗ್ರತೆಯಿಂದಿರಬೇಕೆಂದು ರಾಷ್ಟ್ರೀಯ ಸ್ವಯಂ ಸಂಘ (ಆರ್ಎಸ್ಎಸ್) ಮನವಿ ಮಾಡಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ, ಸಂಘದ ಕಾರ್ಯಕರ್ತರು, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಪ್ರಸ್ತುತವಾಗಿ ತಲೆದೋರಿರುವ ಸವಾಲುಗಳನ್ನು ಎದುರಿಸಲು ಮುಂದೆ ಬರಬೇಕೆಂದು ಕೇಳಲಾಗಿದೆ. ಕೊವಿಡ್-19 ಪಿಡುಗಿನ ಎರಡನೇ ಅಲೆಯಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ದೇಶವನ್ನು ಭಾರೀ ಸಂಕಷ್ಟಕ್ಕೆ ದೂಡಿರುವುದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ಮತ್ತು ವೈದ್ಯಕೀಯ ಸರಬರಾಜುಗಳ ತೀವ್ರ ಅಭಾವ ಎದುರಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ದೇಶದ ಪ್ರಸ್ತುತ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಿಧ್ವಂಸಕ ಮತ್ತು ದೇಶ-ವಿರೋಧಿ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ದೇಶದಲ್ಲಿ ನಕಾರಾತ್ಮಕ ಮತ್ತು ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸುವ ಸಾದ್ಯತೆ ಕೂಡ ಇದೆ. ದೇಶದ ಲ್ಲಿ ವಾಸವಾಗಿರುವ ಜನರು ಸ್ಥಿತಿಯನ್ನು ಎದುರಿಸಲು ತಮ್ಮ ಸಕಾರಾತ್ಮಕ ಪ್ರಯತ್ನಗಳಲ್ಲದೆ, ಈ ವಿಧ್ವಂಸಕ ಶಕ್ತಿಗಳು ರೂಪಿಸುವ ಕುತಂತ್ರಗಳ ಬಗ್ಗೆ ಜಾಗರೂಕರಾಗಿರಬೇಕು,’ ಎಂದು ಹೊಸಬಾಳೆ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಂಘದ ಪರವಾಗಿ ಅವರು, ಮಾಧ್ಯಮವೂ ಸೇರಿದಂತೆ ಸಮಾಜದ ಎಲ್ಲ್ಲಾ ವರ್ಗಗಳು ದೇಶದಲ್ಲಿ ಸಕಾರಾತ್ಮಕ ವಾತಾವಣ, ನಿರೀಕ್ಷೆ ಮತ್ತು ವಿಶ್ವಾಸ ನೆಲೆಗೊಂಡಿರಲು ತಮ್ಮ ಕಾಣಿಕೆ ನೀಡಬೇಕೆಂದು ಮನವಿ ಮಾಡಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ಸಂಯಮ ಮತ್ತು ಜಾಗರೂಕತೆಯಿಂದ ಸಕಾರಾತ್ಮಕ ಪಾತ್ರ ನಿರ್ವಹಿಸಬೇಕು,’ ಎಂದು ಅವರು ಕರೆ ನೀಡಿದ್ದಾರೆ.
ಈ ಬಾರಿ ಕೊವಿಡ್-19 ಸೋಂಕಿನ ಪ್ರಮಾಣ ಮತ್ತು ತೀವ್ರತೆ ಬಹಳ ಗಂಭೀರವಾಗಿದ್ದು ಇಡೀ ದೇಶವೇ ಅದರಡಿ ಸಿಲುಕಿ ನಲುಗುವಂತಾಗಿದೆ ಎಂದು ಹೇಳಿರುವ ಹೊಸಬಾಳೆ ಅವರು, ಪರಿಸ್ಥಿತಿ ಬಹಳ ಚಿಂತಾಜನಕವಾಗಿದ್ದರೂ ನಮ್ಮ ಸಮಾಜ ಅದಕ್ಕಿಂತ ಬಲಾಢ್ಯವಾಗಿದೆ ಎಂದು ಹೇಳಿದ್ದಾರೆ.
‘ಸಂಕಷ್ಟ ಎದುರಾದಾಗೆಲೆಲ್ಲ ಅದನ್ನು ಮೆಟ್ಟಿ ನಿಲ್ಲುವ ನಮ್ಮ ಸಾಮರ್ಥ್ಯ ಇಡೀ ವಿಶ್ವಕ್ಕೆ ಗೊತ್ತಿದೆ. ಶಿಸ್ತು-ಸಂಯಮ ಮತ್ತು ಪರಸ್ಪರ ಬೆಂಬಲದೊಂದಿಗೆ ತಾಳ್ಮೆಯನ್ನು ಕಾಯ್ದುಕೊಳ್ಳುತ್ತಾ, ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಈಗಿನ ಸ್ಥಿತಿಯನ್ನು ಹಿಮ್ಮೆಟ್ಟಿಸುವ ಅಚಲ ವಿಶ್ವಾಸ ನಮ್ಮಲ್ಲಿದೆ,’ ಎಂದು ಅವರು ಹೇಳಿದ್ದಾರೆ.
ಮಾಸ್ಕ್ ಧರಿಸುವ, ಸ್ವಚ್ಛತೆ, ದೈಹಿಕ ಅಂತರ, ಆಯುರ್ವೇದ ಕಷಾಯ, ಆವಿಯನ್ನು ಮೂಗಿನ ಮೂಲಕ ಎಳೆದುಕೊಳ್ಳುವ ಮತ್ತು ಲಸಿಕೆ ಹಾಕಿಸಿಕೊಳ್ಳುವುದು ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೊಸಬಾಳೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Dattatreya Hosabale: ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ: ಮಿತಭಾಷಿ, ಮಧ್ಯಮ ಮಾರ್ಗಿ
ಇದನ್ನೂ ಓದಿ: Dattatreya Hosabale: ದತ್ತಾತ್ರೇಯ ಹೊಸಬಾಳೆ ಆರ್ಎಸ್ಎಸ್ ಸರಕಾರ್ಯವಾಹ್ ಆಗಿ ಆಯ್ಕೆ; ಮುಖ್ಯಮಂತ್ರಿ ಅಭಿನಂದನೆ