ಜಾರ್ಖಂಡ್ನಲ್ಲಿ ಗುಂಪು ಹತ್ಯೆ ತಡೆ ಮಸೂದೆ ಅಂಗೀಕಾರ; ಅಲ್ಪಸಂಖ್ಯಾತರ ಓಲೈಕೆಗೆ ಅವಸರದಿಂದ ತಂದ ಕಾನೂನು ಎಂದ ಬಿಜೆಪಿ
ಜಾರ್ಖಂಡ್ನಲ್ಲಿ ಕೂಡ ಹಲವು ಗುಂಪು ಹತ್ಯೆಗಳು ನಡೆದಿವೆ. ಆದರೆ 2019ರಲ್ಲಿ ನಡೆದಿದ್ದ 24 ವರ್ಷದ ಟಬ್ರೇಜ್ ಅನ್ಸಾರಿ ಎಂಬಾತನ ಹತ್ಯೆ ರಾಷ್ಟರಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದ ದೃಶ್ಯದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು.
ರಾಂಚಿ: ಪಂಜಾಬ್ನಲ್ಲಿ ಒಂದೇ ದಿನ ಎರಡು ಗುಂಪು ಹತ್ಯೆ (Mob Lynching )ನಡೆದ ಬೆನ್ನಲ್ಲೇ ದೇಶಾದ್ಯಂತ ಈ ಬಗ್ಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಜಾರ್ಖಂಡ ವಿಧಾನಸಭೆ ಗುಂಪು ಹಿಂಸಾಚಾರ ತಡೆ ಮತ್ತು ಗುಂಪು ಹತ್ಯೆ ವಿರೋಧಿ ಮಸೂದೆ(Mob Lynching Bill 2021)ಯನ್ನು ಅಂಗೀಕರಿಸಿದೆ. ಹಲವು ಶಾಂತಿಪಾಲಕ ಕಾನೂನುಗಳಿಂದಲೇ ಹೆಸರಾಗಿರುವ ಜಾರ್ಖಂಡದಲ್ಲಿ ಇದೀಗ ಗುಂಪು ಹತ್ಯೆ ನಿಷೇಧ ಮಸೂದೆ ಪಾಸ್ ಆಗಿದೆ. ಇನ್ನು ಮುಂದೆ ಜಾರ್ಖಂಡ್ನಲ್ಲಿ ಗುಂಪು ಹತ್ಯೆ ಮಾಡಿದರೆ ಆರೋಪಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಸೆರೆವಾಸದವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಇನ್ನು ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ 2021 ಅಂಗೀಕಾರದ ವೇಳೆ ಬಿಜೆಪಿ ಕೊಂಚ ವಿರೋಧಿಸಿತು. ಹಾಗಿದ್ದಾಗ್ಯೂ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ ಎಂದು ಹೇಳಲಾಗಿದೆ.
ಗುಂಪು ಹತ್ಯೆ ತಡೆ ಮಸೂದೆಯನ್ನು ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳು ಈಗಾಗಲೇ ಅಂಗೀಕಾರ ಮಾಡಿವೆ. ಇದೀಗ ಮೂರನೇ ರಾಜ್ಯವಾಗಿ ಜಾರ್ಖಂಡ ಅದನ್ನು ಪಾಸ್ ಮಾಡಿದೆ. ಇನ್ನು ಮುಂದೆ ಗುಂಪು ಹತ್ಯೆಯಲ್ಲಿ ಪಾಲ್ಗೊಳ್ಳುವರಿಗೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಷ್ಟೇ ಅಲ್ಲ ಅವರಿಗೆ ದಂಡ ವಿಧಿಸುವ ಜತೆ, ಆಸ್ತಿಯನ್ನೂ ಮುಟ್ಟುಗೋಲು ಹಾಕುವುದಾಗಿ ಈ ಮಸೂದೆ ಹೇಳುತ್ತದೆ. ಗುಂಪು ಹತ್ಯೆ ಮಾಡುವವರಿಗೆ ಸಹಕಾರ ನೀಡುವುದು, ಮೃತರ ಕುಟುಂಬಗಳಿಗೆ ಬೆದರಿಕೆ ಹಾಕುವವರು, ಸುಳ್ಳು ಸಾಕ್ಷಿ ಹೇಳುವವರಿಗೆ ಕೂಡ ಶಿಕ್ಷೆ ನೀಡಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಮಸೂದೆಯನ್ನು ಇಂದು ರಾಜ್ಯಪಾಲರ ಬಳಿ ಸಹಿಗಾಗಿ ಕಳಿಸಲಾಗುವುದು ಎಂದು ಜಾರ್ಖಂಡ ಸರ್ಕಾರ ಮೂಲಗಳು ತಿಳಿಸಿವೆ.
ಜನರಿಗೆ ಪರಿಣಾಮಕಾರಿಯಾಗಿ ಭದ್ರತೆ ಒದಗಿಸುವುದು, ಅವರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಗುಂಪು ಹಿಂಸಾಚಾರವನ್ನು ತಡೆಯುವ ಮುಖ್ಯ ಉದ್ದೇಶಗಳನ್ನಿಟ್ಟು ಈ ಮಸೂದೆ ಅಂಗೀಕಾರ ಮಾಡಿದ್ದಾಗಿ ಸಂಸದೀಯ ವ್ಯವಹಾರಗಳ ಸಚಿವ ಅಲಂಗೀರ್ ಆಲಂ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಈ ಬಿಲ್ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ, ಬಿಜೆಪಿ ಕೆಲವು ತಿದ್ದುಪಡಿಗಳನ್ನೂ ಸೂಚಿಸಿದೆ. ಆದರೆ ಅದನ್ನು ಆಡಳಿತ ಪಕ್ಷ ಒಪ್ಪಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ನಾಯಕ ಸಿ.ಪಿ.ಸಿಂಗ್, ಬಿಜೆಪಿ ಅವಸರವಾಗಿ ಈ ಕಾಯ್ದೆ ರೂಪಿಸಿದೆ. ಇದು ಅಲ್ಪಸಂಖ್ಯಾತರನ್ನು ಓಲೈಸಲು ಮಾಡಿದೆ ಕಾನೂನು ಎಂದು ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ಕೂಡ ಹಲವು ಗುಂಪು ಹತ್ಯೆಗಳು ನಡೆದಿವೆ. ಆದರೆ 2019ರಲ್ಲಿ ನಡೆದಿದ್ದ 24 ವರ್ಷದ ಟಬ್ರೇಜ್ ಅನ್ಸಾರಿ ಎಂಬಾತನ ಹತ್ಯೆ ರಾಷ್ಟರಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದ ದೃಶ್ಯದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು. ಈ ಘಟನೆ ಸೆರೈಕೆಲಾ ಖರ್ಸ್ವಂ ಎಂಬಲ್ಲಿ ನಡೆದಿತ್ತು. ಆತ ಕಳ್ಳ ಎಂದು ಅನುಮಾನಿಸಿ ಸ್ಥಳೀಯರು ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡ ಆತನನ್ನು ಜಮ್ಶೆಡ್ಪುರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅದಾದ ಐದು ದಿನಗಳ ಬಳಿಕ ಆತ ಮೃತಪಟ್ಟಿದ್ದ.
ಇದನ್ನೂ ಓದಿ: ನಮ್ಮ ಹತ್ತಿರದವರನ್ನು ಕಳೆದುಕೊಂಡ ನಂತರ ದುಃಖವನ್ನು ಮೆಟ್ಟಿ ಬದುಕು ನಡೆಸುವುದು ಹೇಗೆ ಅಂತ ಡಾ ಸೌಜನ್ಯ ವಶಿಷ್ಠ ವಿವರಿಸುತ್ತಾರೆ
Published On - 7:53 am, Wed, 22 December 21