
ಭುಬನೇಶ್ವರ್, ಡಿಸೆಂಬರ್ 25: ಒಡಿಶಾದ ಕಂಧಮಾಲ್ ಜಿಲ್ಲೆಯ ವಿವಿಧೆಡೆ ನಿನ್ನೆ ಮತ್ತು ಇಂದು ನಡೆದ ಎರಡು ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti-Naxal operation) ಐವರು ಮಾವೋವಾದಿ ಹೋರಾಟಗಾರರು ಹತರಾಗಿದ್ದಾರೆ. ನಿನ್ನೆ ಬುಧವಾರ ಬೆಲಗಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಮ್ಮ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರನ್ನು ಕೊಲ್ಲಲಾಗಿದೆ. ಇಂದು ಗುರುವಾರ ಚಾಕಪಾದ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರಿಗ್ ಜೊಲ್ಲ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. ಈ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಈವರೆಗೆ ಐವರು ಮಾವೋವಾದಿಗಳನ್ನು ಭದ್ರತಾ ಪಡೆಗಳು ಸಾಯಿಸಿವೆ.
ಕಂಧಮಾಲ್ ಜಿಲ್ಲೆಯಲ್ಲಿರುವ ಬಹುತೇಕ ಕಾಡು ಪ್ರದೇಶಗಳು ನಕ್ಸಲರಿಗೆ ಅಡಗುದಾಣದಂತಿವೆ. ವಿಶೇಷ ಗುಪ್ತಚರ ಘಟಕದಿಂದ ನಕ್ಸಲರ ಇರುವಿಕೆಯ ಸುಳಿವು ಪಡೆದ ಭದ್ರತಾ ಪಡೆಗಳು ದೊಡ್ಡ ಕಾರ್ಯಾಚರಣೆಯನ್ನೇ ರೂಪಿಸಿದವು. ಅದಕ್ಕಾಗಿ 23 ತಂಡಗಳು, 20 ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ), ಎರಡು ಸಿಆರ್ಪಿಎಫ್ ತಂಡಗಳು ಮತ್ತು ಒಂದು ಬಿಎಸ್ಎಫ್ ತಂಡ ಹೀಗೆ ವಿವಿಧ ತಂಡಗಳೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಯೋಜಿಸಲಾಯಿತು.
ಇದನ್ನೂ ಓದಿ: ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ
ಕಂಧಮಾಲ್ ಮತ್ತು ಗಂಜಾಮ್ ಜಿಲ್ಲೆಯ ವಿವಿಧ ಕಡೆ ಈ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದವು. ಈ ವೇಳೆ, ನಕ್ಸಲರು ಮುಖಾಮುಖಿಯಾಗಿ ಗುಂಡಿನ ಚಕಮಕಿ ನಡೆದಿದೆ. ಒಟ್ಟು ಐವರು ನಕ್ಸಲರು ಹತರಾಗಿದ್ದಾರೆ.
ಸಮವಸ್ತ್ರ ಧರಿಸಿದ್ದ ನಾಲ್ವರು ಮಾವೋವಾದಿಗಳ ಶವ ಸಿಕ್ಕಿದೆ. ಈ ನಾಲ್ವರಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ. ಈ ನಾಲ್ವರು ಮೃತ ನಕ್ಸಲರಿಂದ ಮೂರು ವಿವಿಧ ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು
ಒಬ್ಬ ನಕ್ಸಲನನ್ನು ಗಣೇಶ್ ಯೂಕೆ ಎಂದು ಗುರುತಿಸಲಾಗಿದೆ. ಈತ ಒಡಿಶಾದ ನಕ್ಸಲ್ ಕಾರ್ಯಾಚರಣೆಯ ಮುಖ್ಯಸ್ಥ ಹಾಗೂ ಕೇಂದ್ರೀಯ ಸಮಿತಿ ಸದಸ್ಯನೂ ಆಗಿದ್ದ ಎನ್ನಲಾಗಿದೆ. ಇನ್ನುಳಿದ ಮೃತ ನಕ್ಸಲರ ಗುರುತು ಇನ್ನಷ್ಟೇ ಸಿಗಬೇಕಿದೆ.
ಕೆಲವಾರು ವರ್ಷಗಳಿಂದ ತೀವ್ರ ರೀತಿಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಫಲವಾಗಿ ಮಾವೋವಾದಿಗಳ ಶಕ್ತಿ ಕಡಿಮೆಗೊಂಡಿದೆ. ಇತ್ತೀಚೆಗೆ ಮಾದ್ವಿ ಹಿದ್ಮಾ ಅವರ ಹತ್ಯೆ ಮಾಡಲಾಯಿತು. ಈಗ ಗಣೇಶ್ ಯೂಕೆಯ ಹತ್ಯೆಯಾಗಿದೆ. ಈಗ ದೇಶದಲ್ಲಿ ಉಳಿದಿರುವ ಪ್ರಮುಖ ನಕ್ಸಲ್ ನಾಯಕ ಎಂದರೆ ಅದು ದೇವುಜಿ ಮಾತ್ರ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Thu, 25 December 25