ಪದೇ ಪದೇ ಕರೆಂಟ್ ತೆಗೆಯುತ್ತಿದ್ದ ಪವರ್ ಅಧಿಕಾರಿಗಳಿಗೆ ಶಾಕ್ ಕೊಟ್ಟ ಶಾಸಕ
ಹರಿದ್ವಾರದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ, ತಮ್ಮ ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ಕಡಿತದಿಂದ ರೋಸಿಹೋಗಿ, ವಿದ್ಯುತ್ ಇಲಾಖೆಯ ಮೂವರು ಅಧಿಕಾರಿಗಳ ಮನೆಗೆ ತಾವೇ ಕಂಬ ಹತ್ತಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸಾರ್ವಜನಿಕರು ಅನುಭವಿಸುವ ತೊಂದರೆ ಅಧಿಕಾರಿಗಳಿಗೂ ತಿಳಿಯಲಿ ಎಂಬುದು ಅವರ ಉದ್ದೇಶವಾಗಿತ್ತು. ಈ ಕೃತ್ಯದ ವಿರುದ್ಧ ಇಲಾಖೆಯು ಶಾಸಕರ ವಿರುದ್ಧ ದೂರು ದಾಖಲಿಸಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ನಿಯಮ ಉಲ್ಲಂಘನೆ ಆರೋಪಿಸಿದೆ.

ಹರಿದ್ವಾರ, ಡಿ25: ಅಧಿಕಾರಿಗಳು ಜನರನ್ನು ಗೋಳಾಡಿಸುವುದನ್ನು ನೋಡಿರಬಹುದು, ಆದರೆ ಒಬ್ಬ ಜನಪ್ರತಿನಿಧಿಯನ್ನು ಅಧಿಕಾರಿಗಳು ಆಟ ಆಡಿಸುವುದನ್ನು ನೋಡಿರಲು ಸಾಧ್ಯವಿಲ್ಲ. ಶಾಸಕರೊಬ್ಬರು ತಮ್ಮ ಮಾತಿಗೆ ಕಿಮ್ಮತ್ತು ನೀಡದ ಅಧಿಕಾರಿಗಳಿಗೆ ಸರಿಯಾದ ಪಾಠ ಕಳಿಸಿದ್ದಾರೆ. ಉತ್ತರಾಖಂಡದ ಹರಿದ್ವಾರ (Haridwar) ಜಿಲ್ಲೆಯ ಝಬ್ರೆಡಾದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ ಅವರು, ಪ್ರತಿದಿನ ತನ್ನ ಏರಿಯಾದಲ್ಲಿ ವಿದ್ಯುತ್ ಕಡಿತದಿಂದ ಬೇಸತ್ತು. ತಾವೇ ವಿದ್ಯುತ್ ಕಂಬ ಹತ್ತಿ ಇಲಾಖೆಯ ಮೂವರು ಅಧಿಕಾರಿಗಳ ಮನೆಯ ವಿದ್ಯುತ್ ಕಡಿತಗೊಳಿಸಿದ್ದಾರೆ. ವಿದ್ಯುತ್ ಕಡಿತದ ಕುರಿತು ವಿದ್ಯುತ್ ಇಲಾಖೆಯು ಶಾಸಕರ ವಿರುದ್ಧ ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಮೂವರಲ್ಲಿ ವಿದ್ಯುತ್ ಇಲಾಖೆಯ ಮುಖ್ಯ ಎಂಜಿನಿಯರ್ ಕೂಡ ಒಬ್ಬರು ಎಂದು ಹೇಳಲಾಗಿದೆ.
ಶಾಸಕ ವೀರೇಂದ್ರ ಜಾತಿ ತಮ್ಮ ಬೆಂಬಲಿಗರ ಸಹಾಯದಿಂದ ಏಣಿ ಮತ್ತು ಕತ್ತರಿಯನ್ನು ಹಿಡಿದುಕೊಂಡ ಅಧಿಕಾರಿಗಳ ಮನೆಯ ಮುಂದೆ ಇರುವ ವಿದ್ಯುತ್ ಕಂಬ ಮುಂದೆ ಬಂದಿದ್ದಾರೆ. ಮೊದಲು ಬೋಟ್ ಕ್ಲಬ್‌ನಲ್ಲಿರುವ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿವೇಕ್ ರಜಪೂತ್ ಅವರ ಅಧಿಕೃತ ನಿವಾಸದ ಹೊರಗಿನ ವಿದ್ಯುತ್ ಕಂಬವನ್ನು ಹತ್ತಿ ಅವರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದಾದ ನಂತರ, ಶಾಸಕರು ಮುಖ್ಯ ಎಂಜಿನಿಯರ್ ಅನುಪಮ್ ಸಿಂಗ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಪಾಂಡೆ ಅವರ ಅಧಿಕೃತ ನಿವಾಸದ ಬಳಿ ಇರುವ ವಿದ್ಯುತ್ ಕಂಬ ಹತ್ತಿ ವಿದ್ಯುತ್ ಕಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಶಾಸಕರು, “ನಮ್ಮ ಏರಿಯಾದಲ್ಲಿ ದಿನಕ್ಕೆ ಐದರಿಂದ ಎಂಟು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಮತ್ತು ವ್ಯಾಪಾರದಲ್ಲಿ ಗಮನಾರ್ಹ ನಷ್ಟ ಉಂಟಾಗುತ್ತಿದೆ. ವಿದ್ಯುತ್ ಕಡಿತದ ವಿಷಯದ ಬಗ್ಗೆ 10 ದಿನಗಳಿಂದ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ರು, ಯಾವುದೇ ಕ್ರಮ ತೆಗೆದಿಕೊಂಡಿಲ್ಲ. ಈಗ ಅವರ ಮನೆಯಲ್ಲಿ ಒಂದು ಗಂಟೆ ಕರೆಂಟ್ ಇಲ್ಲದಕ್ಕೆ ಹೇಗೆ ನರಳಾಡಿದ್ದಾರೆ. ಪ್ರತಿದಿನ ನಮ್ಮ ಏರಿಯಾದಲ್ಲಿ ಜನ ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಘಟನೆಯ ನಂತರ ಮತ್ತೊಂದು ಭಯಾನಕ ಅಪಘಾತ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು
ಇನ್ನು ಶಾಸಕರು ಹೀಗೆ ಮಾಡಿದಕ್ಕೆ ಶಾಸಕರ ವಿರುದ್ಧ ಇಲಾಖೆ ನೀಡಿದ ದೂರಿನಲ್ಲಿ, ನಮಗೆ ತಿಳಿಸದೆ, ತಪ್ಪಾಗಿ ವಿದ್ಯುತ್ ಕಡಿತ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ಕರೆಂಟ್ ತೆಗೆದಿಲ್ಲ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಇದು ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಸರ್ಕಾರಿ ಕೆಲಸದಲ್ಲಿ ನೇರ ಹಸ್ತಕ್ಷೇಪವೂ ಆಗಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




