Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು
Building the New India: 2025 - A Year of Infrastructure Breakthroughs: 2025 ಮುಗಿದು 2026 ಬರುತ್ತಿದೆ. 2025ರ ವರ್ಷದಲ್ಲಿ ಭಾರತದ ಪಾಲಿಗೆ ಅನೇಕ ಅವಿಸ್ಮರಣೀಯ ಅಂಶಗಳಿವೆ. ಅನೇಕ ಮೊದಲುಗಳಿವೆ, ಮೈಲಿಗಲ್ಲುಗಳಿವೆ. ಸ್ವಾತಂತ್ರ್ಯ ಬಂದ ಬಳಿಕ ಒಂದು ರಾಜ್ಯಕ್ಕೆ ಮೊದಲ ಬಾರಿಗೆ ರೈಲು ಸಂಪರ್ಕ ಸಿಕ್ಕಿದೆ. ಕೆಲ ಹಳ್ಳಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. ಕೆಲ ಹಳ್ಳಿಗಳಿಗೆ ಮೊದಲ ಬಾರಿಗೆ ಮೊಬೈಲ್ ಟವರ್ ಸಿಕ್ಕಿದೆ.

ಭಾರತದ ಅಭಿವೃದ್ಧಿ ಪಥದಲ್ಲಿ 2025 ಒಂದು ಪ್ರಮುಖ ಘಟ್ಟ ಎನಿಸಿದೆ. ರೈಲು, ರಸ್ತೆ, ಆಕಾಶ, ಸಮುದ್ರ, ಡಿಜಿಟಲ್, ಹೀಗೆ ಪ್ರತೀ ಆಯಾಮದಲ್ಲೂ ಭಾರತದ ಅಭಿವೃದ್ಧಿಯಲ್ಲಿ ಗಣನೀಯ ಪ್ರಗತಿ ಕಾಣತೊಡಗಿದೆ. ಕನೆಕ್ಟಿವಿಟಿ ದಟ್ಟಗೊಂಡಿತು, ಅಂತರಗಳು ತಗ್ಗಿದವು, ಆಶೋತ್ತರಗಳು ಗಟ್ಟಿಗೊಂಡವು. ಇನ್ಫ್ರಾಸ್ಟ್ರಕ್ಚರ್ಗಾಗಿ ಸರ್ಕಾರದ ಬಂಡವಾಳ ಹೂಡಿಕೆ ಮೊತ್ತವು 2025-26ರ ಹಣಕಾಸು ವರ್ಷದಲ್ಲಿ 11.21 ಲಕ್ಷ ಕೋಟಿ ರೂಗೆ ಏರಿದೆ. ಇದು ಜಿಡಿಪಿಯ ಶೇ. 3.1ರಷ್ಟಾಗಿದೆ. 2047ರವರೆಗೂ ಭಾರತದ ಜಿಡಿಪಿ ಪ್ರತೀ 12-18 ತಿಂಗಳಿಗೆ ಒಂದು ಟ್ರಿಲಿಯನ್ ಡಾಲರ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಆರ್ಥಿಕ ಪ್ರಗತಿಗೆ ಇನ್ಫ್ರಾಸ್ಟ್ರಕ್ಚರ್ (Infrastructure) ಎಂಬುದು ಮಲ್ಟಿಪ್ಲಯರ್ ಅಥವಾ ಗುಣಕವಾಗಿದೆ. ಇದರ ಪರಿಣಾಮವಾಗಿ, ಈ ವರ್ಷದಿಂದಲೇ ಫಲಿತಾಂಶ ಗೋಚರವಾಗತೊಡಗಿದೆ.
ಭಾರತದ ರೈಲ್ವೆ ಜಾಲಕ್ಕೆ ಮೊದಲ ಬಾರಿಗೆ ಸೇರ್ಪಡೆಯಾದ ಮಿಝೋರಾಂ
ಮಿಝೋರಾಮ್ ರಾಜ್ಯ ಮೊತ್ತಮೊದಲ ಬಾರಿಗೆ ರೈಲ್ವೆ ಜಾಲಕ್ಕೆ ಸೇರ್ಪಡೆಯಾಗುವ ಮೂಲಕ ಹೊಸ ಇತಿಹಾಸ ರಚನೆಯಾಗಿದೆ. ಈಶಾನ್ಯ ಭಾರತಕ್ಕೆ ಇದೊಂದು ಮೈಲಿಗಲ್ಲಾಗಿದೆ. 8,000 ಕೋಟಿ ರೂಗಿಂತ ಅಧಿಕ ವೆಚ್ಚದಲ್ಲಿ 51 ಕಿಮೀ ಬೈರಾಬಿ ಮತ್ತು ಸಾಯಿರಂಗ್ ರೈಲ್ವೆ ಮಾರ್ಗವನ್ನು ನಿರ್ಮಿಸಲಾಯಿತು. ಇದರೊಂದಿಗೆ, ಮಿಜೋರಾಮ್ ರಾಜ್ಯಕ್ಕೆ ಚೊಚ್ಚಲ ರೈಲು ಸಂಪರ್ಕ ಸಿಕ್ಕಂತಾಯಿತು.
ತುರ್ತು ಸೇವೆಗಳು, ಮಿಲಿಟರಿ ಸಾಗಣೆ, ನಾಗರಿಕ ಆರೋಗ್ಯ ಸಂಪರ್ಕ, ಶಿಕ್ಷಣ ಮತ್ತು ಉದ್ಯೋಗಾವಕಾಶ ಇವೆಲ್ಲವೂ ಒಂದು ರೈಲು ಮಾರ್ಗದಿಂದಾಗಿ ಮಿಜೋರಾಮ್ ಜನರಿಗೆ ಸಿಕ್ಕಂತಾಯಿತು. 2025ರ ಸೆಪ್ಟೆಂಬರ್ 14ರಂದು ಮೊದಲ ಸರಕು ಸಾಗಣೆ ರೈಲು ಓಡಿತು. ಅಸ್ಸಾಮ್ನಿಂದ ಐಜ್ವಾಲ್ಗೆ 21 ಸಿಮೆಂಟ್ ಬೋಗಿಗಳು ಹೋದವು. ಈಗ ಮಿಜೋರಾಮ್ನ ಸ್ಥಳೀಯ ಕೃಷಿ ಉತ್ಪನ್ನಗಳಾದ ಬಿದಿರು, ಹಣ್ಣು, ತರಕಾರಿ, ವಿಶೇಷ ಬೆಳೆಗಳು ರಾಷ್ಟ್ರೀಯ ಮಾರುಕಟ್ಟೆಗಳನ್ನು ರೈಲು ಮೂಲಕ ಸರಾಗವಾಗಿ ತಲುಪಲು ಸಾಧ್ಯ.
ವಿಶ್ವದ ಅತಿ ಎತ್ತರದ ರೈಲು ಸೇತುವೆ
ಜಮ್ಮು ಕಾಶ್ಮೀರದಲ್ಲಿ ಉಧಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್ ಪ್ರಾಜೆಕ್ಟ್ ಭಾಗವಾಗಿ ಚಿನಾಬ್ ಸೇತುವೆ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಎನಿಸಿದೆ. ಕಠಿಣ ಸ್ಥಳದಲ್ಲಿ ಈ ಸೇತುವೆ ನಿರ್ಮಿಸಿದ್ದು ಭಾರತದ ಎಂಜಿನಿಯರಿಂಗ್ ಪರಿಣಿತಿ ಬಗ್ಗೆ ವಿಶ್ವಾಸ ಮೂಡಿಸುತ್ತದೆ.
ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ
2025ರಲ್ಲಿ ಭಾರತದ ಎಂಜಿನಿಯರಿಂಗ್ ಪರಿಣಿತಿಗೆ ದ್ಯೋತಕವೆನಿಸಿದ್ದು ಪಂಬನ್ ಬ್ರಿಡ್ಜ್. ಇದು ಭಾರತದ ಮೊದಲ ವರ್ಟಿಲ್ ಲಿಫ್ಟ್ ಸಮುದ್ರ ಸೇತುವೆ ಎನಿಸಿದೆ. ಅಮೆರಿಕದ ಗೋಲ್ಡನ್ ಗೇಟ್ ಬ್ರಿಡ್ಜ್, ಲಂಡನ್ನ ಟವರ್ ಬ್ರಿಡ್ಜ್, ಡೆನ್ಮಾರ್ಕ್ನ ಒರೆಸುಂಡ್ ಬ್ರಿಡ್ಜ್ಗಳ ಸಾಲಿಗೆ ಪಂಬನ್ ಸೇತುವೆ ಸೇರುತ್ತದೆ.
ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?
ಭಾರತದ ಮೊದಲ ಕಂಟೇನರ್ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್
ಈ ವರ್ಷ (2025) ವಿಳಿಂಜಮ್ ಆಳಸಮುದ್ರ ಬಂದರನ್ನು ಉದ್ಘಾಟಿಸಲಾಯಿತು. ಇದು ಕಂಟೇನರ್ಗಳ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಆಗಿದೆ. ಅಂದರೆ, ಹಡಗುಗಳಿಂದ ಹಡಗುಗಳಿಗೆ ಕಂಟೇನರ್ಗಳನ್ನು ವರ್ಗಾಯಿಸುವ ಪೋರ್ಟ್. ಇದಕ್ಕೆಂದೇ ಮುಡಿಪಾದ ಇಂಥದ್ದೊಂದು ಬಂದರು ಭಾರತದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪನೆಯಾಗಿದೆ.
ಬಿಹಾರದಲ್ಲಿ ಮೊತ್ತ ಮೊದಲ ವಂದೇ ಮೆಟ್ರೋ
ಬಿಹಾರದಲ್ಲಿ ನಮೋ ಭಾರತ್ ರಾಪಿಡ್ ರೈಲ್ ಎಂದು ಹೆಸರಾದ ವಂದೇ ಮೆಟ್ರೋವನ್ನು ಆರಂಭಿಸಲಾಗಿದೆ. ಜಯನಗರದಿಂದ ಪಟ್ನಾಗೆ ಈ ರೈಲು ಸಂಪರ್ಕಿಸುತ್ತದೆ. ಪೂರ್ಣ ಎಸಿ ಕೋಚ್ಗಳಿರುವ ಈ ಟ್ರೈನು ಜಯನಗರದಿಂದ ಪಾಟ್ನಾಗೆ ಕೇವಲ ಐದೂವರೆ ಗಂಟೆಯಲ್ಲಿ ತಲುಪುತ್ತದೆ.
ಜಮ್ಮು ಕಾಶ್ಮೀರದಲ್ಲಿ ಝಡ್ ಮೋರ್ ಸುರಂಗ
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಪ್ರಧಾನಿಗಳು ಝಡ್-ಮೋರ್ (Z-Morh) ಸುರಂಗವನ್ನು ಉದ್ಘಾಟಿಸಿದ್ದಾರೆ. ಸೋನಾಮಾರ್ಗ್ಗೆ ಇದು ಸರ್ವಋತುವಿನಲ್ಲೂ ಸಂಪರ್ಕವನ್ನು ಖಚಿತಪಡಿಸುತ್ತದೆ. ಲಡಾಖ್ ಪ್ರದೇಶದ ಭದ್ರತೆಗೂ ಈ ಸುರಂಗ ಸಹಕಾರಿಯಾಗುತ್ತದೆ.
ಶ್ರೀನಗರ್-ಲೇಹ್ ಹೆದ್ದಾರಿಯಲ್ಲಿ ಕೆಲವೆಡೆ ಹಿಮಪಾತದ ಪ್ರದೇಶಗಳಿವೆ. ಅವುಗಳನ್ನು ತಪ್ಪಿಸಿ ಸಾಗಿ ಹೋಗಲು ಈ ಸುರಂಗ ಮಾರ್ಗ ಸಹಕಾರಿಯಾಗುತ್ತದೆ.
ಜಮ್ಮುವಿನಿಂದ ಶ್ರೀನಗರಕ್ಕೆ ಮೊದಲ ಬಾರಿಗೆ ನೇರ ರೈಲು ಸಂಪರ್ಕ
ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಪ್ರಧಾನಗಳು ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಜಮ್ಮು ಮತ್ತು ಶ್ರೀನಗರ ಮಧ್ಯೆ ಇದೇ ಮೊದಲ ಬಾರಿಗೆ ನೇರ ರೈಲು ಸಂಪರ್ಕ ಸಿಕ್ಕಂತಾಗಿದೆ.
ಡೆಲ್ಲಿ ಮೀರತ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ
ದೆಹಲಿ ಮತ್ತು ಮೀರತ್ ನಡುವಿನ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (ವೇಗದ ರೈಲು) ಪೂರ್ಣವಾಗಿ ಸಿದ್ಧವಾಗಿದೆ. ಈ ವರ್ಷ ಇದರ ಫೈನಲ್ ಸೆಕ್ಷನ್ ಉದ್ಘಾಟನೆಗೊಂಡಿತು. ದೆಹಲಿಯ ಸರಾಯ್ ಕಾಲೆ ಖಾನ್ ಸ್ಟೇಷನ್ನಿಂದ ಮೀರತ್ನ ಮೋದಿಪುರಂ ಸ್ಟೇಷನ್ವರೆಗೂ 82 ಕಿಮೀ ಉದ್ದದ ರೈಲು ಮಾರ್ಗ ಇದು. ಈ ಮಾರ್ಗದಲ್ಲಿ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ.
ನವಿ ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್
ಮುಂಬೈ ಸಮೀಪ ಎರಡನೇ ಏರ್ಪೋರ್ಟ್ ನಿರ್ಮಾಣವಾಗುತ್ತಿದೆ. ನವಿ ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ನ ಮೊದಲ ಹಂತದ ಉದ್ಘಾಟನೆಯಾಗಿದೆ. ಇದರೊಂದಿಗೆ, ಮುಂಬೈನ ಈಗಿರುವ ಏರ್ಪೋರ್ಟ್ ಮೇಲಿನ ಒತ್ತಡ ಕಡಿಮೆ ಆಗಲಿದೆ.
ನೌಕಾ ಮೂಲಸೌಕರ್ಯಕ್ಕೆ ದೊಡ್ಡ ವರ್ಷ 2025
ಈ ವರ್ಷವು ನೇವಲ್ ಇನ್ಫ್ರಾಸ್ಟ್ರಕ್ಚರ್ಗೆ ಗುರುತಾಗುವಂಥ ವರ್ಷ. ಆಗಸ್ಟ್ ತಿಂಗಳಲ್ಲಿ ಐಎನ್ಎಸ್ ಹಿಮಗಿರಿ ಮತ್ತು ಐಎನ್ಎಸ್ ಉದಯಗಿರಿ ಎನ್ನುವ ಎರಡು ಸ್ಟೀಲ್ತ್ ಫ್ರಿಗೇಟ್ಗಳನ್ನು ನೌಕಾಪಡೆ ಬತ್ತಳಿಕೆಗೆ ಸೇರಿಸಲಾಯಿತು.
ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್ಪ್ರೆಸ್ಗೂ ಸಿಕ್ಕಿತು ಎನ್ಒಸಿ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಯೆಲ್ಲೋ ಲೈನ್ ಸರ್ವಿಸ್
ಬೆಂಗಳೂರಿನ ನಮ್ಮ ಮೆಟ್ರೋದ ಯೆಲ್ಲೋ ಲೈನ್ ಉದ್ಘಾಟನೆ ಮಾಡಲಾಯಿತು. ಆರ್ವಿ ರೋಡ್ ಮೆಟ್ರೋ ಸ್ಟೇಷನ್ನಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಈ ಮಾರ್ಗ ಇದೆ.
17 ಕುಗ್ರಾಮಗಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ
2025ರ ಮೇ ತಿಂಗಳಲ್ಲಿ ಛತ್ತೀಸ್ಗಡದ ಮನಪುರ್ ಅಂಬಾಗಡ್ ಚೌಕಿ ಜಿಲ್ಲೆಯ 17 ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಯಿತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದ ಬಳಿಕ ಮೊದಲ ಬಾರಿಗೆ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿರುವುದು.
ಮಹಾರಾಷ್ಟ್ರದ ಈ ಗ್ರಾಮಕ್ಕೆ ಮೊದಲ ಬಸ್ ಸಂಪರ್ಕ
ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿರುವ ನಕ್ಸಲ್ ಪೀಡಿತ ಕಾಟೆಜಾರಿ ಎಂಬ ಗ್ರಾಮಕ್ಕೆ ಬಸ್ ಸಂಪರ್ಕ ಕೊಡಲಾಯಿತು. ಈ ಗ್ರಾಮಕ್ಕೆ ಬಸ್ ಹೋಗುತ್ತಿರುವುದು ಇದೇ ಮೊದಲು.
ಕೊಂಡಪಲ್ಲಿಯಲ್ಲಿ ಮೊಬೈಲ್ ನೆಟ್ವರ್ಕ್
ಛತ್ತೀಸ್ಗಡದ ನಕ್ಸಲ್ ಪೀಡಿತ ಬಿಜಾಪುರ್ ಜಿಲ್ಲೆಯ ಕೊಂಡಪಲ್ಲಿ ಗ್ರಾಮದಲ್ಲಿ ಮೊತ್ತಮೊದಲ ಮೊಬೈಲ್ ಟವರ್ ಸ್ಥಾಪಿಸಲಾಗಿದೆ. ಇದೇ ಡಿಸೆಂಬರ್ ತಿಂಗಳಲ್ಲಿ ಇದಾಗಿದ್ದು.
ಇದನ್ನೂ ಓದಿ: ಚಂಡಮಾರುತದಿಂದ ನಲುಗಿದ ಶ್ರೀಲಂಕಾಕ್ಕೆ 4,000 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ
ದೇಶದಲ್ಲಿವೆ 160ಕ್ಕೂ ಅಧಿಕ ವಿಮಾನ ನಿಲ್ದಾಣಗಳು
ಭಾರತದಲ್ಲಿ ಏರ್ಪೋರ್ಟ್ಗಳ ಸಂಖ್ಯೆ 2014ರಲ್ಲಿ 74 ಇತ್ತು. 2025ರಲ್ಲಿ ಅದು 163ಕ್ಕೆ ಏರಿದೆ. ಈ ಮಧ್ಯೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆ ಎನಿಸಿದೆ.
ಶೇ. 99ರಷ್ಟು ರೈಲ್ವೆ ವಿದ್ಯುದೀಕರಣ
ಭಾರತೀಯ ರೈಲ್ವೇಸ್ ಸಂಸ್ಥೆಯು ತನ್ನ ಶೇ. 99ರಷ್ಟು ಬ್ರಾಡ್ ಗೇಜ್ ನೆಟ್ವರ್ಕ್ ಅನ್ನು ವಿದ್ಯುದೀಕರಿಸಿದೆ. 2026ಕ್ಕೆ ನೂರಕ್ಕೆ ನೂರು ಎಲೆಕ್ಟ್ರಿಫಿಕೇಶನ್ ಆಗುವ ನಿರೀಕ್ಷೆ ಇದೆ.
ಮೂರನೇ ಅತಿದೊಡ್ಡ ಮೆಟ್ರೋ ಜಾಲ
ಭಾರತದ ಮೆಟ್ರೋ ಜಾಲ 2014ರಲ್ಲಿ 248 ಕಿಮೀ ಇತ್ತು. 2025ರಲ್ಲಿ ಇದು 1,015 ಕಿಮೀಗೆ ಹೆಚ್ಚಿದೆ. ಚೀನಾ, ಅಮೆರಿಕ ನಂತರ ಭಾರತವೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಹೊಂದಿರುವುದು.
ರಸ್ತೆ ಮತ್ತು ಹೆದ್ದಾರಿ ಮೈಲಿಗಲ್ಲುಗಳು
ದೇಶದ ರಾಷ್ಟ್ರೀಯ ಹೆದ್ದಾರಿಗಳ ಉದ್ದ ಗಣನೀಯವಾಗಿ ಹೆಚ್ಚಿದೆ. 2019ರಲ್ಲಿ 1,32,499 ಕಿಮೀ ಇತ್ತು. ಈಗ ಅದು 1,46,560 ಕಿಮೀಗೆ ಹೆಚ್ಚಿದೆ. ಚತುಷ್ಪಥ ಹಾಗೂ ಇನ್ನೂ ವಿಸ್ತಾರದ ಹೆದ್ದಾರಿ ಜಾಲವು 2019ರಲ್ಲಿ 31,066 ಕಿಮೀ ಇತ್ತು. ಈಗ 43,512 ಕಿಮೀಗೆ ಹೆಚ್ಚಿದೆ. ಆರು ವರ್ಷದಲ್ಲಿ ಬಹುತೇಕ ಒಂದೂವರೆ ಪಟ್ಟು ಹೆಚ್ಚಿದೆ.
(ಮಾಹಿತಿ ಕೃಪೆ: ಪಿಐಬಿ ಪ್ರಕಟಣೆಗಳು)




