ನವದೆಹಲಿ: ಪದ್ಮಭೂಷಣಕ್ಕಾಗಿ ಸಾಧಾರಣ ಪೇಂಟಿಂಗ್ ಅಥವಾ ಕಲಾಚಿತ್ರವೊಂದನ್ನು 2 ಕೋಟಿ ರೂ.ಗೆ ಖರೀದಿಸುವಂತೆ (ಪರೋಕ್ಷ ಲಂಚ) ರಾಣಾ ಕಪೂರ್ (ಯೆಸ್ ಬ್ಯಾಂಕ್ ಸ್ಥಾಪಕ, ಮಾಜಿ ಸಿಇಒ) ಅವರನ್ನು ಒತ್ತಾಯಿಸಿದ್ದು ಯಾರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಪ್ರಶ್ನಿಸಿದ್ದಾರೆ. ಅಕ್ರಮ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದರ ಮೇಲೆ ಕಣ್ಗಾವಲಿಡುವ ಜಾಗತಿಕ ವಿಚಕ್ಷಣಾ ಸಂಸ್ಥೆ ‘ಫೈನಾನ್ಶಿಯಲ್ ಟಾಸ್ಕ್ ಫೋರ್ಸ್ (Financial Action Task Force / FATF)’ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯನ್ನು ಉಲ್ಲೇಖಿಸಿ ಅವರು ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರನ್ನು ಕಾಂಗ್ರೆಸ್ ಪಕ್ಷದ ಬಳಿ ಇದ್ದ ಸಾಧಾರಣ ಕಲಾಚಿತ್ರವನ್ನು 2 ಕೋಟಿ ರೂ.ಗೆ ಖರೀದಿಸುವಂತೆ ಒತ್ತಾಯಿಸಿದ್ದು ಯಾರು ಎಂಬುದನ್ನು ದೇಶದ ಜನತೆಗೆ ತಿಳಿಸಬೇಕಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
#WATCH | “My question to Priyanka Gandhi is who forced Rana Kapoor to pay Rs 2 cr bribe to purchase a painting? Who is Mr R who was involved, whether it was painting for Padma Bhushan? How many Padma awards, paintings were sold & money was raised?”: Union minister Anurag Thakur pic.twitter.com/FcFg5QYu0q
— ANI (@ANI) March 13, 2023
ಸಾಧಾರಣ ಕಲಾಚಿತ್ರವನ್ನು 2 ಕೋಟಿ ರೂ.ಗೆ ಖರೀದಿಸುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದು ರಾಣಾ ಕಪೂರ್ ಆರೋಪಿಸಿದ್ದಾಗಿ ಜಾರಿ ನಿರ್ದೇಶನಾಲಯವು 2010ರಲ್ಲಿ ಮುಂಬೈಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿತ್ತು. ಇತ್ತೀಚೆಗೆ ಎಫ್ಎಟಿಎಫ್ ಆ ಬಗ್ಗೆ ಅಧ್ಯಯನ ನಡೆಸಿ ವರದಿ ಬಹಿರಂಗಪಡಿಸಿದ ಬಳಿಕ ಪ್ರಿಯಾಂಕಾ ಗಾಂಧಿ ವಿರುದ್ಧ ಆರೋಪ ಕೇಳಿಬಂದಿದ್ದು, ರಾಜಕೀಯ ಆಯಾಮ ಪಡೆದುಕೊಂಡಿದೆ.
ಇದನ್ನೂ ಓದಿ: ಯಾರೂ ಕಾನೂನಿಗಿಂತ ಮೇಲಲ್ಲ: ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್
‘ಅವರು (ಕಾಂಗ್ರೆಸ್ ನಾಯಕರು) ದೇಶವನ್ನು ಮಾರಾಟ ಮಾಡಲು ಸಿಕ್ಕ ಒಂದೊಂದು ಅವಕಾಶವನ್ನೂ ಬಿಟ್ಟಿಲ್ಲ. ಭ್ರಷ್ಟಾಚಾರಕ್ಕಾಗಿ ಪದ್ಮಭೂಷಣದಂಥ ಎಷ್ಟು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಮಾರಾಟ ಮಾಡಲಾಗಿತ್ತು? ಕಲಾಚಿತ್ರವನ್ನು ಬಲವಂತದಿಂದ ಮಾರಾಟ ಮಾಡಿದ್ದು ಯಾಕೆ? ‘ಆರ್’ (ಎಫ್ಎಟಿಎಫ್ ವರದಿಯಲ್ಲಿ ಉಲ್ಲೇಖಿಸಿರುವ) ಎಂದರೆ ಯಾರೆಂಬುದನ್ನು ಪ್ರಿಯಂಕಾ ಗಾಂಧಿ ಬಹಿರಂಗಪಡಿಸಲಿ’ ಎಂದು ಠಾಕೂರ್ ಆಗ್ರಹಿಸಿದ್ದಾರೆ.
ಮಿಸ್ಟರ್ ‘ಬಿ’ ಎಂಬವರು ಹೊಂದಿರುವ ಕಂಪನಿಗೆ ಮಿಸ್ಟರ್ ‘ಎ’ ಎಂಬವರು ಪ್ರಭಾವ ಬಳಸಿಕೊಂಡು ಸಾಲ ನೀಡಿದ್ದು ತನಿಖೆಯಿಂದ ತಿಳಿದುಬಂದಿದೆ. ‘ಬಿ’ ಹೆಸರಿನವರ ಕಂಪನಿಯು ‘ಸಿ’ (ಎ ಎಂಬವರ ಮಗಳಂದಿರ ಒಡೆತನದ) ಎಂಬ ಕಂಪನಿಯೂ ಒಳಗೊಂಡಂತೆ 79 ಶೆಲ್ ಕಂಪನಿಗಳಿಗೆ ಸಾಲದ ಮೊತ್ತವನ್ನು ವರ್ಗಾವಣೆ ಮಾಡಿತ್ತು. ‘ಸಿ’ ಕಂಪನಿಯು 79 ದಶಲಕ್ಷ ಡಾಲರ್ ಹಣ ಪಡೆದಿದ್ದಲ್ಲದೆ ಖ್ಯಾತ ಚಿತ್ರಕಾರರ ಕಲಾಚಿತ್ರ ಮತ್ತು ಇತರ ಸ್ವತ್ತುಗಳನ್ನು ಪ್ರಭಾವಿ ವ್ಯಕ್ತಿಯೊಬ್ಬರಿಂದ ಪಡೆಯಲು ಹಣದ ಒಂದು ಭಾಗವನ್ನು ಬಳಸಿತ್ತು. ‘ಎ’ ಹೆಸರಿನ ವ್ಯಕ್ತಿ ಖ್ಯಾತ ಚಿತ್ರಕಾರರ ಕಲಾಚಿತ್ರ ಖರೀದಿಗೆ ಹೆಚ್ಚಿನ ಮೊತ್ತ ಹೂಡಿಕೆ ಮಾಡಿದ್ದರು. ಅವರು ಸುಮಾರು 44 ಚಿತ್ರಗಳನ್ನು ಖರೀದಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ‘ಎ’ ಹೆಸರಿನ ವ್ಯಕ್ತಿಗೆ ಉಚಿತವಲ್ಲದಿದ್ದರೂ ಅನೇಕ ಮಹತ್ವದ ಪ್ರಶಸ್ತಿಗಳು ದೊರೆತಿದ್ದವು. ಇದಕ್ಕಾಗಿ ಲಂಚದ ರೂಪದಲ್ಲಿ ಅವರು ಖ್ಯಾತ ರಾಜಕಾರಣಿಯಿಂದ ಕಲಾಚಿತ್ರ ಖರೀದಿಸಿದ್ದರು ಎಂದು ಎಫ್ಎಟಿಎಫ್ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಇಲ್ಲಿ ರಾಣಾ ಅವರನ್ನೇ ‘ಎ’ ಎಂದೂ ಕಲಾಚಿತ್ರ ಖರೀದಿಸುವಂತೆ ಅವರ ಮೇಲೆ ಒತ್ತಡ ಹೇರಿದವರು ಪ್ರಿಯಾಂಕಾ ಗಾಂಧಿ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ಆಧಾರದಲ್ಲಿ ಅನುರಾಗ್ ಠಾಕೂರ್ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Mon, 13 March 23