‘ದೇಶದ ಕ್ಷಮೆಯಾಚಿಸಿ’; ಸೇನೆಯಿಂದ ಚೀನಾ ಕುರಿತ ನಕಲಿ ವಿಡಿಯೋ ಬಯಲಾದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ

ಭಾರತೀಯ ಭೂಪ್ರದೇಶಕ್ಕೆ ಚೀನಾ ಅತಿಕ್ರಮಣ ಮಾಡಿದೆ ಹಾಗೂ ಅರುಣಾಚಲ ಪ್ರದೇಶದ ಕೆಲ ಭಾಗಗಳು ಚೀನಾ ವಶದಲ್ಲಿವೆ ಎಂದು ಬಿಂಬಿಸುವ 2 ನಕಲಿ ವಿಡಿಯೋಗಳನ್ನು ಭಾರತೀಯ ಸೇನೆಯು ಸಾಕ್ಷ್ಯಾಧಾರಸಹಿತ ತಳ್ಳಿಹಾಕಿದ ಬೆನ್ನಲ್ಲೇ, ಕೇಂದ್ರ ಸಚಿವ ಕಿರೆಣ್ ರಿಜಿಜು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಡೀ ದೇಶದ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದಾರೆ. ಬಿಹಾರದ ಕಾಂಗ್ರೆಸ್ ವಕ್ತಾರೆ ರಿತು ಚೌಧರಿ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಒಂದು ವಿಡಿಯೋದಲ್ಲಿ ಚೀನಾದ ವಾಹನಗಳು ಭಾರತೀಯ ಗಡಿಯೊಳಗೆ ನುಗ್ಗುತ್ತಿರುವುದಾಗಿ ತೋರಿಸಲಾಗಿದ್ದರೆ, ಮತ್ತೊಂದರಲ್ಲಿ ಹಿರಿಯ ಸೇನಾಧಿಕಾರಿಯೊಬ್ಬರು ಅರುಣಾಚಲ ಪ್ರದೇಶದಲ್ಲಿ ಚೀನಾ ನಿಯಂತ್ರಣ ಸಾಧಿಸಿದೆ ಹಾಗೂ ಭಾರತೀಯ ಯೋಧರಿಗೆ ಅಗತ್ಯ ಸಾಮಗ್ರಿಗಳು ಸಿಗದಂತೆ ತಡೆಯಲಾಗಿದೆ ಎಂದು ಹೇಳಿಕೆ ನೀಡಿದಂತೆ ಬಿಂಬಿಸಲಾಗಿತ್ತು.

ದೇಶದ ಕ್ಷಮೆಯಾಚಿಸಿ; ಸೇನೆಯಿಂದ ಚೀನಾ ಕುರಿತ ನಕಲಿ ವಿಡಿಯೋ ಬಯಲಾದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ
ಸೇನಾ ಸಿಬ್ಬಂದಿಯ ಜೊತೆ ಕೇಂದ್ರ ಸಚಿವ ಕಿರಣ್ ರಿಜಿಜು
Image Credit source: PTI

Updated on: Oct 27, 2026 | 4:19 PM

ನವದೆಹಲಿ, ಅಕ್ಟೋಬರ್ 27: ಚೀನಾ ಪಡೆಗಳು ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿವೆ ಎಂದು ಹೇಳಲಾದ ನಕಲಿ ಹಾಗೂ ಡೀಪ್‌ಫೇಕ್ ವಿಡಿಯೋಗಳನ್ನು ಭಾರತೀಯ ಸೇನೆಯು ಸಾಕ್ಷ್ಯಾಧಾರಸಹಿತ ಬಯಲು ಮಾಡಿದ ಬೆನ್ನಲ್ಲೇ, ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಭದ್ರತೆ ಮತ್ತು ಸೇನೆಯ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಕ್ಕಾಗಿ ಕಾಂಗ್ರೆಸ್ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಿಹಾರದ ಕಾಂಗ್ರೆಸ್ ವಕ್ತಾರೆ ರಿತು ಚೌಧರಿ ಹಂಚಿಕೊಂಡಿದ್ದ ವಿಡಿಯೋ ಒಂದರಲ್ಲಿ ಚೀನಾದ ವಾಹನಗಳು ಭಾರತದ ಭೂಪ್ರದೇಶಕ್ಕೆ ನುಗ್ಗಿವೆ ಎಂದು ಆರೋಪಿಸಲಾಗಿತ್ತು. ಮತ್ತೊಂದು ವಿಡಿಯೋದಲ್ಲಿ ಅರುಣಾಚಲ ಪ್ರದೇಶದ ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದೆ ಮತ್ತು ಭಾರತೀಯ ಸೇನೆಗೆ ಅಗತ್ಯ ಸರಬರಾಜುಗಳನ್ನು ತಡೆಯಲಾಗುತ್ತಿದೆ ಎಂದು ಬಿಂಬಿಸಲಾಗಿತ್ತು.

ಇದನ್ನೂ ಓದಿ: ಅರುಣಾಚಲ ಪ್ರದೇಶ ಗಡಿಯಲ್ಲಿ ಮತ್ತೆ ಭಾರತ-ಚೀನಾ ಸಂಘರ್ಷ: ಮೊದಲ ಬಾರಿಗೆ ಅಧಿಕೃತವಾಗಿ ದೃಢಪಡಿಸಿದ ಐಟಿಬಿಪಿ

ನಕಲಿ ವಿಡಿಯೋಗಳ ಸತ್ಯ ಬಿಚ್ಚಿಟ್ಟ ಭಾರತೀಯ ಸೇನೆ:

ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಗೊಂದಲ ಸೃಷ್ಟಿಸಿದ್ದ ಈ ಎರಡೂ ವಿಡಿಯೋಗಳ ಕುರಿತು ಭಾರತೀಯ ಸೇನೆಯು ಅಧಿಕೃತ ಸ್ಪಷ್ಟನೆ ನೀಡಿ, ಅವುಗಳನ್ನು ಬಯಲು ಮಾಡಿದೆ.


ಮೊದಲನೇ ವಿಡಿಯೋ: ಸಿಕ್ಕಿಂನ ‘ನಾಥು ಲಾ ಪಾಸ್’ ಬಳಿ ಅಧಿಕೃತವಾಗಿ ನಡೆಯುವ ಭಾರತ-ಚೀನಾ ಗಡಿ ವ್ಯಾಪಾರಕ್ಕಾಗಿ ಸಂಚರಿಸುತ್ತಿದ್ದ ಚೀನಾದ ವಾಣಿಜ್ಯ ವಾಹನಗಳ ದೃಶ್ಯವನ್ನು ಸೇನೆ ಗುರುತಿಸಿದೆ. “ಅಧಿಕೃತ ಗಡಿ ವ್ಯಾಪಾರ ಮಾರ್ಗದಲ್ಲಿ ವಾಣಿಜ್ಯ ವಾಹನಗಳ ಸಂಚಾರವನ್ನು ಚೀನಾದ ಸೈನಿಕರ ಅತಿಕ್ರಮಣ ಎಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ” ಎಂದು ಸೇನೆ ತಿಳಿಸಿದೆ.

ಎರಡನೇ ವಿಡಿಯೋ (ಡೀಪ್‌ಫೇಕ್ ಎಐ ತಂತ್ರಜ್ಞಾನ): ಸ್ಪಿಯರ್ ಕಾರ್ಪ್ಸ್‌ನ ಜಿಒಸಿ ಲೆಫ್ಟಿನೆಂಟ್ ಜನರಲ್ ಗಿರೀಶ್ ಕಾಲಿಯಾ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ‘ಡೀಪ್‌ಫೇಕ್’ ಎಂದು ಸೇನೆ ಖಚಿತಪಡಿಸಿದೆ. ಈ ಮೂಲ ದೃಶ್ಯಾವಳಿಯು ಅಕ್ಟೋಬರ್ 27, 2023ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್​ಒಸಿ) ನುಸುಳುಕೋರರ ಕುರಿತು ನೀಡಿದ್ದ ಪತ್ರಿಕಾಗೋಷ್ಠಿಯದ್ದಾಗಿದ್ದು, ಅದನ್ನು ಎಐ ತಂತ್ರಜ್ಞಾನದ ಮೂಲಕ ತಿರುಚಲಾಗಿದೆ. ಅರುಣಾಚಲ ಪ್ರದೇಶ ಅಥವಾ ಸೇನೆಗೆ ಪೂರೈಕೆ ತಡೆದಿರುವ ಕುರಿತು ಅಧಿಕಾರಿ ಯಾವುದೇ ಹೇಳಿಕೆ ನೀಡಿರಲಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುಸೇನೆ ಏರ್‌ಸ್ಟ್ರೈಕ್: ಕುನಾರ್, ಪಕ್ತಿಕಾದಲ್ಲಿ ಬಾಂಬ್ ದಾಳಿಗೆ ಮೂವರು ಸಾವು, ಹಲವರಿಗೆ ಗಾಯ


ಕಾಂಗ್ರೆಸ್ ವಿರುದ್ಧ ಕಿರಣ್ ರಿಜಿಜು ಆಕ್ರೋಶ:

ಲೋಕಸಭೆಯಲ್ಲಿ ಅರುಣಾಚಲ ಪ್ರದೇಶವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಕಿರಣ್ ರಿಜಿಜು, “ಭಾರತೀಯ ಸೇನೆಯ ಗೌರವಕ್ಕೆ ಧಕ್ಕೆ ತರಲು ಕಾಂಗ್ರೆಸ್ ನಕಲಿ ಎಐ ವಿಡಿಯೋಗಳನ್ನು ಹರಡುತ್ತಿರುವುದು ದೇಶದ್ರೋಹದ ಕೆಲಸ. ಭಾರತದ ಶತ್ರುಗಳ ಪರವಾಗಿ ಕಾಂಗ್ರೆಸ್ ಇಂತಹ ಹೀನ ಪ್ರಚಾರ ನಡೆಸುತ್ತಿದ್ದು, ದೇಶದ ಕ್ಷಮೆಯಾಚಿಸಬೇಕು. ತಿರುಚಲಾದ ವಿಡಿಯೋಗಳನ್ನು ಹರಡುವ ಮೂಲಕ ಕಾಂಗ್ರೆಸ್ ಪಕ್ಷವು ನಮ್ಮ ಹೆಮ್ಮೆಯ ಸಶಸ್ತ್ರ ಪಡೆಗಳ ಗೌರವ ಮತ್ತು ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸಲು ಯತ್ನಿಸುತ್ತಿದೆ. ಕಾಂಗ್ರೆಸ್ ನಾಯಕತ್ವವು ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us