ರಾಮಮಂದಿರ ಹಗರಣದ ತನಿಖೆಯ ಎಸ್​ಐಟಿಗೆ ಚಾರ್ಟರ್ಡ್ ಅಕೌಂಟೆಂಟ್ ನೇಮಿಸಿ; ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಯುತ, ನಿಖರ ಮತ್ತು ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳಲು ರಚಿಸಲಾಗುತ್ತಿರುವ ವಿಶೇಷ ತನಿಖಾ ತಂಡದಲ್ಲಿ (SIT) ಚಾರ್ಟರ್ಡ್ ಅಕೌಂಟೆಂಟ್ ಅನ್ನು ಸೇರಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಉತ್ತರ ಪ್ರದೇಶ ಸರ್ಕಾರ ಸೂಚಿಸಿದ ಹೆಸರುಗಳ ಆಧಾರದ ಮೇಲೆ SIT ಅನ್ನು ರಚಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ತಂಡಕ್ಕೆ ಎಸ್. ಕಿರಣ್ ನೇತೃತ್ವ ವಹಿಸಿದ್ದಾರೆ. ಕಳೆದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಹೊಸ ಎಸ್‌ಐಟಿ ರಚಿಸಲು ಅಧಿಕಾರಿಗಳ ಹೆಸರುಗಳನ್ನು ಸೂಚಿಸುವಂತೆ ಕೇಳಿತ್ತು.

ರಾಮಮಂದಿರ ಹಗರಣದ ತನಿಖೆಯ ಎಸ್​ಐಟಿಗೆ ಚಾರ್ಟರ್ಡ್ ಅಕೌಂಟೆಂಟ್ ನೇಮಿಸಿ; ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
Ram Mandir
Image Credit source: Getty Image

Updated on: Jul 27, 2026 | 7:35 PM

ನವದೆಹಲಿ, ಜುಲೈ 27: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣದ (Ram Temple Donation Theft Case) ತನಿಖೆ ನಡೆಸುತ್ತಿರುವ ‘ವಿಶೇಷ ತನಿಖಾ ತಂಡ’ದ (SIT) ನೇತೃತ್ವವನ್ನು ಐಪಿಎಸ್ ಅಧಿಕಾರಿ ಎಸ್. ಕಿರಣ್ ವಹಿಸಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಹೇಳಿಕೆಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಆ ತನಿಖಾ ತಂಡಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರನ್ನು ನೇಮಿಸುವಂತೆ ಹಾಗೂ 2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಇಂದು ಈ ಪ್ರಕರಣದ ವಿಚಾರಣೆ ನಡೆಸಿತು. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಸ್‌ಐಟಿ ತಂಡವನ್ನು ಪುನರ್ ರಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: Video: ಸುಪ್ರೀಂ ಕೋರ್ಟ್ ಖಡಕ್ ಸೂಚನೆ; ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!

ಎಸ್‌ಐಟಿ ತಂಡಕ್ಕೆ ಉತ್ತರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಸೇರ್ಪಡೆಗೊಳಿಸಿದೆ ಎಂದು ಅವರು ಹೇಳಿದರು. ಕಿರಣ್ ಎಸ್. ಅವರಷ್ಟೇ ಅಲ್ಲದೆ ಅಯೋಧ್ಯೆ ಡಿಐಜಿ ಸೋಮನ್ ವರ್ಮಾ ಮತ್ತು ಎಸ್‌ಎಸ್ಪಿ ಗೌರವ್ ಗ್ರೋವರ್ ಕೂಡ ಈ ತಂಡದಲ್ಲಿರಲಿದ್ದಾರೆ. ದೇವಾಲಯಕ್ಕೆ ಬಂದಿರುವ ದೇಣಿಗೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಎಸ್‌ಐಟಿಗೆ ಒದಗಿಸುವಂತೆ ಸಿಜೆಐ ಸೂರ್ಯ ಕಾಂತ್ ಅಧಿಕಾರಿಗಳಿಗೆ ಆದೇಶಿಸಿದರು.

ಎಸ್‌ಐಟಿಗೆ ಹೊಸ ಅಧಿಕಾರಿಗಳ ಸೇರ್ಪಡೆ ಕುರಿತು ಮೆಹ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದಾಗ, ಸಿಜೆಐ ಸೂರ್ಯಕಾಂತ್, “ಆ ತಂಡದಲ್ಲಿ ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಕೂಡ ಇರಬೇಕು” ಎಂದು ಸೂಚಿಸಿದರು. ಈ ಪ್ರಕರಣದ ಮುಂದಿನ ವಿಚಾರಣೆ ಎರಡು ವಾರಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: ‘ರಾಮಮಂದಿರ ದೇಣಿಗೆ ಹಗರಣದಲ್ಲಿ ಮೌನವೇಕೆ?’; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ, ಖರ್ಗೆ ಪತ್ರ

ಜುಲೈ 20ರಂದು ನಡೆದ ಹಿಂದಿನ ವಿಚಾರಣೆಯ ವೇಳೆ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತನಿಖೆಯ ನೇತೃತ್ವ ವಹಿಸಬೇಕು ಎಂದು ಹೇಳಿದ್ದ ಸಿಜೆಐ ಸೂರ್ಯಕಾಂತ್, ಎಸ್‌ಐಟಿಯನ್ನು ಪುನರ್ ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದರು. “ತನಿಖೆಯು ನ್ಯಾಯಯುತವಾಗಿರಬೇಕು ಮತ್ತು ತಾರ್ಕಿಕ ಅಂತ್ಯವನ್ನು ತಲುಪಬೇಕು” ಎಂದು ನ್ಯಾಯಾಲಯ ಹೇಳಿತ್ತು.

ರಾಮಮಂದಿರದಲ್ಲಿ ದೇಣಿಗೆ ಹಣ ಎಣಿಕೆಯಲ್ಲಿ ಭಾಗಿಯಾಗಿದ್ದ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ದೇವಾಲಯದ ನಿರ್ವಹಣೆ ನೋಡಿಕೊಳ್ಳುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ನೈತಿಕ ಹೊಣೆ ಹೊತ್ತು ಕಳೆದ ತಿಂಗಳು ರಾಜೀನಾಮೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us