ದೆಹಲಿ ಏಪ್ರಿಲ್ 01: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸಹಕರಿಸುತ್ತಿಲ್ಲ, ವಿಚಾರಣೆಯನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಅವರ ಫೋನ್ ಪಾಸ್‌ವರ್ಡ್ ಅನ್ನು ಹಂಚಿಕೊಂಡಿಲ್ಲ ಎಂದು ಜಾರಿ ನಿರ್ದೇಶನಾಲಯ (ED) ಸೋಮವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ. ಇಡಿ ತನ್ನ ವಾದದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆ ವೇಳೆ ಆಮ್ ಆದ್ಮಿ ಪಕ್ಷದ (AAP) ನಾಯಕಿ ಮತ್ತು ದೆಹಲಿ ಹಣಕಾಸು ಸಚಿವ ಅತಿಶಿ ಮರ್ಲೆನಾ (Atishi Marlena) ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದೆ. ವಿಚಾರಣೆಯ ನಂತರ ದೆಹಲಿ ಸಿಎಂನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ತಿಹಾರ್ ಜೈಲಿನಲ್ಲಿದ್ದಾರೆ.
ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ಅವರು ವಿಜಯ್ ನಾಯರ್ ಅವರು ಅತಿಶಿ ಮರ್ಲೆನಾ ಅವರಿಗೆ ವರದಿ ಸಲ್ಲಿಸುತ್ತಿದ್ದರು. ನನಗೆ ಅಲ್ಲ ಎಂದು ಇಡಿ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದೆ. ವಿಜಯ್ ನಾಯರ್ ಎಎಪಿಯ ಮಾಜಿ ಸಂವಹನ ಉಸ್ತುವಾರಿ ಮತ್ತು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರು.
ಅರವಿಂದ್ ಕೇಜ್ರಿವಾಲ್ ಅವರ ನಡವಳಿಕೆಯು ಸಂಪೂರ್ಣವಾಗಿ ಅಸಹಕಾರವಾಗಿದೆ. ಅವರು ವಿಚಾರಣೆಯನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾರೆ. ವಿಜಯ್ ನಾಯರ್ ನನಗೆ ವರದಿ ಮಾಡಿಲ್ಲ ಆದರೆ ಅತಿಶಿಗೆ ವರದಿ ಮಾಡಿದ್ದಾರೆ ಎಂದು ಅವರು ಹೇಳಿದರು. ಕೇಜ್ರಿವಾಲ್ ಅವರು ತಮ್ಮ ಫೋನ್‌ಗೆ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಹೇಳಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ದೆಹಲಿ ಸಚಿವರಾದ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್ ಮತ್ತು ಅತಿಶಿ ಮರ್ಲೆನಾ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅರವಿಂದ್ ಕೇಜ್ರಿವಾಲ್ ಒಂದು ವಾರಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿರಬಹುದಾದರೂ, ಅವರ ವಕೀಲರು ದೆಹಲಿ ಸಿಎಂ ಭಗವದ್ಗೀತೆ, ರಾಮಾಯಣ ಮತ್ತು ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್ ಎಂಬ ಪುಸ್ತಕ ಓದಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದರು. ಮೂರು ಪುಸ್ತಕಗಳ ಜೊತೆಗೆ, ಅವರು ವಿಶೇಷ ಆಹಾರಕ್ಕಾಗಿ ಮತ್ತು ಧಾರ್ಮಿಕ ಲಾಕೆಟ್ ಹೊಂದಲು ಅನುಮತಿ ಕೋರಿದರು.
ಇದನ್ನೂ ಓದಿ: Arvind Kejriwal: ತಿಹಾರ್ ಜೈಲಿಗೆ ಅರವಿಂದ್ ಕೇಜ್ರಿವಾಲ್
ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮುಖ್ಯಮಂತ್ರಿಯನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ಪ್ರಕರಣದಲ್ಲಿ ಇಡಿ ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಅವರನ್ನು ಮಾರ್ಚ್ 28 ರವರೆಗೆ ಏಜೆನ್ಸಿಯ ಕಸ್ಟಡಿಗೆ ಕಳುಹಿಸಲಾಗಿದೆ, ಅದನ್ನು ಏಪ್ರಿಲ್ 1 ರವರೆಗೆ ವಿಸ್ತರಿಸಲಾಯಿತು. ನ್ಯಾಯಾಲಯ ಇಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Mon, 1 April 24